ಸಾಮಾನ್ಯ ಕುಟುಂಬ ಒಂದರಲ್ಲಿ ಜನಿಸಿ, ಆಧ್ಯಾತ್ಮಿಕ ಪರಿಸರ, ಪರಂಪರೆಗಳ ಅಪೂರ್ವ ನಂಟಿಲ್ಲದಿದ್ದರೂ, ಅಸಾಧಾರಣವಾಗಿ ತ್ರಿವಿಕ್ರಮನಂತೆ ಬೆಳೆದ ಆನಂದ ಪರಂಪರೆಯ ಅವಧೂತ್ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಅದ್ಭುತ ಸಾಧನೆ ನಿಜಕ್ಕೂ ರೋಚಕ.

ಎಲ್ಲರಂತಿದ್ದು, ಎಲ್ಲರೊಂದಿಗೆ, ಎಲ್ಲವರಿಂದಲೂ ಆಗದ, ಸಾಗದ ಸಾಧನೆಯ ಹಾದಿಯಲ್ಲಿ ದೃಢವಾಗಿ ಸಾಗಿ ಬಂದವರು ಶ್ರೀಗಳು.

ತಾನು ಹುಟ್ಟಿದ ಊರಿನಲ್ಲೇ ಸ್ಥಾಪಿಸಿರುವ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಎಂಬ ಈ ಕ್ಷೇತ್ರದ ಪಾತ್ರ ಅಂದರೆ ಜೀವಾತ್ಮ ಒಡಿಯೂರು ಶ್ರೀಗಳು. ಯೌಗಿಕ ಸಾಧನೆ, ಭಗವತ್ ಉಪಾಸನೆ ಹಾಗೂ ಸಮಾಜ ಸೇವೆಯಿಂದ ಮನುಕುಲದ ಜೀವಿತದ ಧನ್ಯತೆಗೆ ಶ್ರೀಗಳ ಮಾರ್ಗದರ್ಶನ ಅನನ್ಯವಾದುದು.

ಹೃದಯ ತಟ್ಟುವ ಮಾತಿನ ಮೋಡಿ, ತನ್ನತ್ತ ಸೆಳೆದುಕೊಳ್ಳುವ ಆತ್ಮೀಯತೆಯ ಮೋಡಿ ಇದು ಸ್ವಾಮೀಜಿ ಅವರ ಅಪೂರ್ವ ವ್ಯಕ್ತಿತ್ವ. ಅವರ ಸಾಂತ್ವನದ, ಆತ್ಮೀಯ ನುಡಿಗಾಗಿ, ಕೆಲಸ ಕಾರ್ಯಗಳಿಗೆ ಅಸ್ತು ಎನಿಸಿಕೊಳ್ಳಲು ಊರ ಪರವೂರ ಹಲವಾರು ಭಾವುಕರು ದಿನನಿತ್ಯ ಹಾತೊರೆಯುತ್ತಿದ್ದಾರೆ.

ಒಡಿಯೂರು ಶಾಸನಾಧಾರ ಮತ್ತು ಪೌರಾಣಿಕ ಹಿನ್ನಲೆ

ವಿಟ್ಲದ ನರಸಿಂಹರಸ ಡೊಂಬ ಹೆಗ್ಗಡೆ ಅರಸರು ಕ್ರಿ. ಶ. 1759ರಲ್ಲಿ ಮಾಡಿಕೊಟ್ಟ ಭೂ ಸಾಧನ ಶಾಸನದಲ್ಲಿ ‘ವಡಿಯಾರ ಗುತ್ತು’ ಎಂಬ ಹೆಸರಿನ ಉಲ್ಲೇಖವಿದೆ. ಇದು ಈ ಪ್ರದೇಶದ ಅರಸೊತ್ತಿಗೆಯಲ್ಲಿರುವ ಐತಿಹಾಸಿಕ ದಾಖಲೆ. ಶ್ರೀ ಸಂಸ್ಥಾನದಲ್ಲಿ 19-11-2001ರಂದು ಜರಗಿದ ಸ್ವರ್ಣ ಪ್ರಶ್ನೆಯಲ್ಲಿ ಈ ಪ್ರದೇಶದ ಪೌರಾಣಿಕ ಹಿನ್ನಲೆಯ ವಿಚಾರಗಳು ಬೆಳಕಿಗೆ ಬಂದಿದೆ.

ಸೃಷ್ಟಿಯ ಆದಿಯಲ್ಲಿ ಶ್ರೀ ಸಂಸ್ಥಾನದ ಮೂಲ ನಿಗೂಢವಾಗಿತ್ತು. ಈ ಪ್ರದೇಶದಲ್ಲಿ ಪೂರ್ವಕಾಲದಲ್ಲೇ ಜನ ಕ್ಷೇಮಕ್ಕಾಗಿ ದೋಷ – ಪರಿಹಾರಾದಿ ಕಾರ್ಯಾಚರಣೆಗಳು ನಡೆಯುತ್ತಿದ್ದವು. ಮೂಲದಲ್ಲಿ ಸ್ಷಯಂಭೂವಾದ ನಾಗ ಸಾನಿಧ್ಯ ಶ್ರೀ ಸಂಸ್ಥಾನದಲ್ಲಿ ವ್ಯಾಪಿಸಿಕೊಂಡಿದೆ. ಇದು ನಾಗಾಧಿಪತ್ಯಕ್ಕೆ ಒಳಗೊಂಡ ಸ್ಥಾನ. ಹಿಂದೆ ಇಲ್ಲಿ ತಟಾಕ ಕೂಪಗಳಿದ್ದವು. ಪಶ್ಚಿಮ ಭಾಗ ಸಮೃದ್ಧ ಕೃಷಿ ಭೂಮಿ. ಮನೋಹರ ಸ್ಥಳ. ಸುತ್ತಲೂ ಗಿರಿಗಳಿಂದ ಆವೃತವಾಗಿತ್ತು. ಪೂರ್ವ ಕಾಲದಲ್ಲಿ ದೀಕ್ಷಾಬದ್ಧ ವ್ಯಕ್ತಿಗಳ ಸಂಬಂಧ ಹೊಂದಿದ ಕ್ಷೇತ್ರ ಇದಾಗಿತ್ತು. ಶ್ರೀ ಸಂಸ್ಥಾನವು ಕೃತ – ತ್ರೇತಾ ಯುಗಗಳಲ್ಲಿ ಉಚ್ಛ್ರಾಯ ಸ್ಥಿತಿಗೇರಿದ್ದು, ಇದೀಗ ಕಲಿಯುಗದಲ್ಲಿ ಉನ್ನತಿಗೇರುತ್ತಿದೆ ಎನ್ನುವುದು ಪ್ರಕಟವಾದ ಅಂಶ. ಅನಂತರ ಅಸುರೀ ಶಕ್ತಿಗಳು ಈ ಪ್ರದೇಶದಲ್ಲಿದ್ದ ಮೂಲ ಶಕ್ತಿಯ ಉಪಾಸಕರಾದ ದೀಕ್ಷಾ ಬದ್ಧ ಸಾಧಕರನ್ನು ಹೊಡೆದೋಡಿಸಿ ಅಧಿಕಾರ ಸ್ಥಾಪಿಸಿದರು.

ತ್ರೇತಾ ಯುಗದಲ್ಲಿ ಆಂಜನೇಯ ಸ್ವಾಮಿ ಸಂಜೀವಿನಿಯನ್ನು ತರಲೋಸುಗ ತೆರಳಿದುದು ಪೌರಾಣಿಕ ಇತಿಹಾಸ. ಸಂಜೀವಿನಿಯನ್ನರುಸುತ್ತಾ ಹನುಮ ಸಹನೆ ಕಳೆದು ಚಂದ್ರದ್ರೋಣ ಪರ್ವತವನ್ನೇ  ಕಿತ್ತು ಈ ಪ್ರದೇಶದಲ್ಲಿ ಸಂಚರಿಸುತ್ತಿರುವ ಆ ಸಮಯದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಸುರೀ ಶಕ್ತ್ಯಂಶಗಳು ಪ್ರಾಣದೇವರಿಗೆ ತಡೆಯೊಡ್ಡಿದವು. ತನ್ನ ತುರ್ತು ಕಾರ್ಯದ ಮಧ್ಯೆ ಆತಂಕವೊಡ್ಡುವ ಮಾಯಾ ಶಕ್ತಿಗಳನ್ನು ಪ್ರಾಣದೇವನು ನಾಶ ಪಡಿಸಿ ಈ ಪ್ರದೇಶವನ್ನು ಸತ್ಪ ಭರಿತವಾಗಿಸಿದನು ಎಂಬುದು ಪ್ರಶ್ನೆಯಲ್ಲಿ ಪ್ರಕಟವಾಗಿದೆ. ಅಂದರೆ ಪ್ರಾಣದೇವರ ಮೂಲಕ ಇಲ್ಲಿಯ ಕಪಟಿಗಳ ದರ್ಪ, ಅಹಂಕಾರಗಳು ಇಳಿದ (ಒಡಿ) ಜಾಗವಾದುದರಿಂದ ಇದು ಒಡಿಯೂರು ಆಗಿರಬೇಕು. ಹನುಮನು ಹೊತ್ತೊಯ್ಯುತ್ತಿದ್ದ ಚಂದ್ರದ್ರೋಣ ಗಿರಿಯ ಒಂದಂಶ ಈ ಭೂಮಿಯಲ್ಲಿ ಸೇರಿಕೊಂಡಿದೆ. ‘ಮೂಲಿಕಾವನ’ದ ನಿರ್ಮಾಣದ ಗುರುಸಂಕಲ್ಪಕ್ಕೆ ಇದೇ ಸ್ಪಷ್ಟ ಕಾರಣವಾಗಿದೆ. ಈ ಸಂಸ್ಥಾನದ ಮೂಲ ಸೃಷ್ಟಿಯಲ್ಲೇ ಅಂತರ್ಗತವಾಗಿರುವುದೆಂದೂ, ಸಾಧಕರಿಗೆ ದೈವ ಪ್ರೇರಣೆಯಾಗುವ ಕ್ಷೇತ್ರವಿದು ಎಂದು ಸ್ವರ್ಣ ಪ್ರಶ್ನೆಯಲ್ಲಿ  ವ್ಯಕ್ತವಾದ ವಿಚಾರ. ಪೂಜ್ಯ ಶ್ರೀಗಳು ತನ್ನ ಹುಟ್ಟೂರಲ್ಲೇ ತನ್ನ ಸಾಧನೆಯನ್ನು ವಿಸ್ತರಿಸುವುದಕ್ಕೆ ಇದೂ ಕಾರಣವಿರಬೇಕು.

ತ್ರೇತಾಯುಗದಲ್ಲಿ ಈ ಪ್ರದೇಶದಲ್ಲಿ ಸನ್ಯಾಸಿನಿಯರು ನೆಲೆಸಿದ್ದರು ಎಂಬುದು ಪ್ರಶ್ನೆಯಲ್ಲಿ ಕಂಡ ಇನ್ನೊಂದು ವಿಚಾರ. ಪೂಜ್ಯ ಶ್ರೀಗಳಿಂದ ಸ್ತ್ರೀ ಸಂನ್ಯಾಸ ಉಪದೇಶ ದೀಕ್ಷಾ ಪ್ರದಾನ ಸಂಕಲ್ಪಕ್ಕೂ ಇದು ಪೂರಕವಾಗಿದೆ. ಗುರು ಚರಿತ್ರೆಯಲ್ಲಿ ಅಡಕವಾಗಿರುವ ಅರುವತ್ತನಾಲ್ಕು ಯೋಗಿನಿಯರು ಗುರುಸೇವೆಗೈದ ಕಥೆಗೂ ಸಮರ್ಪಣಾ ಭಾವದ ಯೋಗಿನಿಯರಿಗೊಲಿದ ಗುರುದೇವನು ಅನ್ನಪೂರ್ಣೆ ನೆಲೆಸಲೆಂದು ಅನುಗ್ರಹಿಸಿದ ವಿಚಾರಕ್ಕೂ ಶ್ರೀ ಸಂಸ್ಥಾನದಲ್ಲಿ ನಿತ್ಯ ನಡೆಯುವ ಅನ್ನದಾನಕ್ಕೂ ಹೊಂದಿಕೆಯಿರುವುದನ್ನು ನಾವು ಗಮನಿಸಬಹುದು.

ಈ ಪ್ರದೇಶದಲ್ಲಿ ನಿಗೂಢವಾಗಿರುವುದು ಈಶ್ವರ ಚೈತನ್ಯ. ಗುರುಸ್ವರೂಪ ದಕ್ಷಿಣಾಮೂರ್ತಿ ನೆಲೆಯಾದುದರಿಂದಲೇ ಇಲ್ಲಿ ಜ್ಞಾನಕ್ಕೆ ಪ್ರಾಶಸ್ತ್ಯ. ಜ್ಞಾನಿಗಳಿಗೆ, ಜ್ಞಾನ ಪ್ರಚಾರಕ್ಕೆ ಇಲ್ಲಿ ಹೆಚ್ಚಿನ ಇಂಬು ಇದೆ. ಇಲ್ಲಿ ಜರಗುತ್ತಿರುವ ಸತ್ಸಂಗ, ಪುರಾಣ ಶ್ರವಣ, ಕಲೋಪಾಸನೆ, ಸಾಹಿತ್ಯ ಸೇವೆ, ಆಧ್ಯಾತ್ಮಿಕ ತತ್ವ ಪ್ರಚಾರದ ಹಿಂದೆ ಈ ದೈವೀ ಸಂಕಲ್ಪದ ಚೇತನ ಕಾರ್ಯವೆಸಗುತ್ತಿದೆ.