“ಸದ್ಭಾವನೆ, ಸತ್‌ಚಿಂತನೆ, ಸತ್ಕಾರ್ಯಗಳಿಂದ ಜೀವನ ಸಾರ್ಥಕ್ಯ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರಿ0ದ ಆಶೀರ್ವಚನ
“ಕೇವಲ ಆರ್ಥಿಕ ಅಭಿವೃದ್ದಿ ಮಾತ್ರವಲ್ಲ ದೈವಿಕತೆ, ಧಾರ್ಮಿಕತೆ, ಸಂಸ್ಕಾರ ನಮ್ಮಲ್ಲಿರಬೇಕು ಎನ್ನುವ ಒಳ್ಳೆಯ ಉದ್ದೇಶದೊಂದಿಗೆ ಯೋಜನೆ ಆರಂಭಗೊAಡಿದೆ. ಪೂಜ್ಯ ಸ್ವಾಮೀಜಿಯವರು ಮನಜಾಗೃತಿಯೊಂದಿಗೆ ಧರ್ಮಜಾಗೃತಿಯ ಕಾರ್ಯ ಮಾಡುತ್ತಿದ್ದಾರೆ. ಗುರುಸಾಮೀಪ್ಯದಿಂದ ನಮ್ಮ ಉದ್ದೇಶ ಗುರಿ ಮುಟ್ಟಲು ಸಾಧ್ಯ. ಈ ಕಾರ್ಯಕ್ರಮಕ್ಕೆ ತಾವು ಆಗಮಿಸುವುದರಿಂದ ಸಾನ್ನಿಧ್ಯ ದೇವರ ಅನುಗ್ರಹ, ಗುರುಗಳ ಆಶೀರ್ವಾದ ದೊರೆಯಲು ಸಹಕಾರಿ. ಗುರು ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ. ಸಂಸ್ಕಾರಯುತ ವ್ಯಕ್ತಿಯಿಂದ ಮನೆ ಬೆಳಗಲು ಅನುಕೂಲ. ಜೀವನ ಸಾರ್ಥಕತೆಯಾಗಬೇಕಾದರೆ ನಾವು ಉತ್ತಮ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಆರ್ಥಿಕತೆಯ ಜೊತೆಗೆ ಪಾರಮಾರ್ಥಿಕತೆಯ ಚಿಂತನೆ ನಮ್ಮಲ್ಲಿರಬೇಕು. ಸದ್ಭಾವನೆ, ಸತ್‌ಚಿಂತನೆ ಸತ್ಕಾರ್ಯದಿಂದ ನಮ್ಮ ಬದುಕು ಸಾರ್ಥಕವಾಗುತ್ತದೆ” ಎಂದು ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ ಸಂಸ್ಕಾರ’ ಮಾಸಿಕ ಕಾರ್ಯಕ್ರಮದಲ್ಲಿ ಸ್ವ-ಸಹಾಯ ಸಂಘಗಳಿಗೆ ಲಾಭಾಂಶದ ಚೆಕ್ಕನ್ನು ವಿತರಿಸಿ ಆಶೀರ್ವಚನಗೈದರು.
ಕಡಬ ತಾಲೂಕು ಯೋಜನೆಯ ಬಂಧುಗಳು ನಿರ್ವಹಿಸಿದ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊAಡಿತು. ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಮಂಗಳೂರು ತಾಲೂಕು ಯೋಜನಾ ನಿರ್ದೇಶಕ ಕಿರಣ್ ಉರ್ವ, ಕಡಬ ವಲಯ ಘಟಸಮಿತಿಯ ಪದಾಧಿಕಾರಿಗಳು ದೀಪ ಪ್ರಜ್ವಲಿಸಿದರು.
ಸುಮಾರು ೩೫ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ಲಾಭಾಂಶದ ಚೆಕ್ಕನ್ನು ವಿತರಿಸಲಾಯಿತು.
ಆರಂಭದಲ್ಲಿ ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ ಜರಗಿದವು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸವಣೂರು ವಲಯದ ಸದಸ್ಯರಿಂದ ಯಕ್ಷ ಗಾನ ವೈಭವ ಜರಗಿತು.
ಪಂಜ ವಲಯ ಸಂಯೋಜಕಿ ಶ್ರೀಮತಿ ಜಯಶ್ರೀ ಸ್ವಾಗತಿಸಿ, ಕಡಬ ವಲಯ ಸಂಯೋಜಕಿ ಶ್ರೀಮತಿ ಸುಜಾತ ವಂದಿಸಿದರು. ಸವಣೂರು ವಲಯ ಸಂಯೋಜಕಿ ಶ್ರೀಮತಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು.