“ವಿಕಸಿತ ಭಾರತಕ್ಕೆ ಮುನ್ನುಡಿ ಗ್ರಾಮವಿಕಾಸ”






ರಾಜಾಂಗಣದಲ್ಲಿ ಜರಗಿದ ಗ್ರಾಮವಿಕಾಸ ರಜತ ಸಂಭ್ರಮ -೨೦೨೬ ಒಡಿಯೂರು ಶ್ರೀ ವಿಕಾಸವಾಹಿನಿ ಸಂಗಮ ಉದ್ಘಾಟಿಸಿ
ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ವಿಕಸಿತ ಭಾರತಕ್ಕೆ ಮುನ್ನುಡಿ ಗ್ರಾಮವಿಕಾಸ. ಗ್ರಾಮವಿಕಾಸ ಯೋಜನೆ ನಡೆದು ಬಂದ ಹಾದಿಯನ್ನು ನಾವು ನೆನಪಿಸುವ ಕಾರ್ಯವಾಗಬೇಕು. ಗ್ರಾಮವಿಕಾಸ ಯೋಜನೆಗೆ ವಿವಿಧೋದ್ದೇಶ ಬಲ ನೀಡಿದೆ. ಅರ್ಥ ವ್ಯವಸ್ಥೆ ಮತ್ತು ಆಧ್ಯಾತ್ಮ ಜೊತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಸಮರ್ಪಣಾ ಭಾವದ ಸೇವೆ ಇಲ್ಲಿ ನಡೆಯುತ್ತಿದೆ. ದಕ್ಷತೆ ಇದ್ದವರು ನಾಯಕರಾಗಲು ಸಾಧ್ಯ. ವಿಕಾಸ ವಾಹಿನಿ ಹರಿಯುವ ನದಿಯಾಗಬೇಕು. ನಿಸ್ವಾರ್ಥದ ಸೇವೆ ನಮ್ಮದಾಗಬೇಕು. ತಾಳ್ಮೆ ಸಹನೆಗೆ ಇನ್ನೊಂದು ಹೆಸರು ಪೃಥ್ವಿ. ನಾವು ಮಾಡಿದ ಸತ್ಕರ್ಮಗಳು ನಮ್ಮೊಂದಿಗಿರುತ್ತದೆ. ಸತ್ಕರ್ಮ ನಿಜವಾದ ಮಿತ್ರ. ಸಂಸ್ಥೆ ಬೆಳೆದಂತೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಭಾರತ ದೇಶದ ಮೌಲ್ಯ ಆಧ್ಯಾತ್ಮಿಕತೆ. ಪ್ರೀತಿಯ ಒಡಲು ನಮ್ಮದಾಗಬೇಕು. ಗ್ರಾಮ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಸಾಧ್ಯ” ಎಂದು ಪೂಜ್ಯ ಸ್ವಾಮೀಜಿಯವರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಜರಗಿದ ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಗ್ರಾಮವಿಕಾಸ ರಜತ ಸಂಭ್ರಮ ೨೦೨೬ – ಒಡಿಯೂರು ಶ್ರೀ ವಿಕಾಸವಾಹಿನಿ ಸಂಗಮ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆಯಾಗಿ ಮಾನ್ಯತೆ ಸಿಗಬೇಕೆನ್ನುವುದು ಪೂಜ್ಯ ಶ್ರೀಗಳವರ ಸಂಕಲ್ಪವಾಗಿದೆ. ಈಗ ಅವರ ಬಹುದೊಡ್ಡ ಸಂಕಲ್ಪ ಈಡೇರಿದೆ. ಆ ಮೂಲಕ ಗುರು ಪೀಠದ ಸಂಕಲ್ಪ ಸಾಕಾರವಾಗಿದೆ. ಹೋರಾಟ, ಪ್ರೋತ್ಸಾಹ ಸ್ಫೂರ್ತಿಯಿಂದಾಗಿ ಇಂದು ತುಳು ಎರಡನೇ ಭಾಷೆಯಾಗಿ ಸ್ಥಾನ ಪಡೆದಿದೆ. ಸಂಭ್ರಮದ ಕಾರ್ಯಕ್ರಮ ಇದಾಗಿದೆ. ಈ ಒಂದು ಯಶಸ್ಸಿನಲ್ಲಿ ಬಹಳಷ್ಟು ಮಂದಿಯ ಶ್ರಮವಿದೆ. ಆತ್ಮ ಕಲ್ಯಾಣದ ಜೊತೆಗೆ ಲೋಕ ಕಲ್ಯಾಣ ಸಾಧ್ಯ. ಉತ್ತಮ ಕೆಲಸದ ಮೂಲಕ ಜೀವನ ಸಾರ್ಥಕ್ಯ ಪಡೆಯಬೇಕಿದೆ. ನಾವು ಬೆಳೆಯುವುದರ ಜೊತೆಗೆ ಸಮಾಜದ ಬೆಳವಣಿಗೆ ಸಾಧ್ಯ. ಜೀವನದಲ್ಲಿ ಗುರು-ಗುರಿ ಇದ್ದರೆ ಜೀವನ ಸಾರ್ಥಕ” ಎಂದರು.
ರಜತವಿಕಾಸ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ದ.ಕ. ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ “ಇಂತಹ ಸಂಘಟನೆಗಳು ದೇಶದಾದ್ಯಂತ ಕೆಲಸ ಮಾಡುತ್ತಿರುವುದರಿಂದ ಭಾರತ ದೇಶ ವಿಕಸಿತ ಭಾರತವಾಗಲು ಸಾಧ್ಯ. ಹಿಂದುಗಳು ಸ್ವಾಭಿಮಾನದಲ್ಲಿ ಬದುಕುವಂತೆ ಮೋದೀಜಿಯವರು ಮಾಡಿದ್ದಾರೆ. ಈ ನೆಲದ ಸಂಸ್ಕೃತಿ, ಭಾಷೆ ಜೀವನ ಪದ್ದತಿ ಬಹಳಷ್ಟು ವಿಶೇಷವಾದುದು. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ಕೆಲಸ ಮಾಡಲಾಗುವುದು. ಸಮಸ್ತ ತುಳುವ ನೆಲದ ಜನರ ಪ್ರಯತ್ನದಿಂದ ಅದು ಸಾಕಾರವಾಗಲು ಸಾಧ್ಯ. ಭಾಷೆಗೆ ಸ್ಥಾನಮಾನ ತರುವಲ್ಲಿ ಯಾವುದೇ ರಾಜಕೀಯವಿಲ್ಲ” ಎಂದರು.
ಕ್ಯಾoಪ್ಕೋ ಅಧ್ಯಕ್ಷ ಶ್ರೀ ಎಸ್.ಆರ್. ಸತೀಶ್ಚಂದ್ರ ಅವರು ಮಾತನಾಡಿ “ಸಂಸ್ಕಾರ ನೀಡುವ ಕ್ಷೇತ್ರಗಳಲ್ಲಿ ಒಡಿಯೂರು ಸಂಸ್ಥಾನವೂ ಒಂದು. ಕ್ಷೇತ್ರದಿಂದ ಗ್ರಾಮವಿಕಾಸ ಯೋಜನೆಯ ಮೂಲಕ ಸಂಸ್ಕಾರ ನೀಡುತ್ತಿರುವ ಕೆಲಸ ಅಭಿನಂದನೀಯ. ನಮ್ಮ ಸಾಮಾಜಿಕ ಕೆಲಸಗಳಿಗೆ ಪ್ರೇರಣೆ ಶ್ರೀಗಳು” ಎಂದರು.
ಬ0ಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರು ಮಾತನಾಡಿ “ಗ್ರಾಮವಿಕಾಸ ಯೋಜನೆ ಮೂಲಕ ಕ್ಷೇತ್ರ ಬಹಳಷ್ಟು ಸಾಮಾಜಿಕ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಕೃಷಿಯತ್ತ ಎಲ್ಲರ ಒಲವು ತೋರುವಂತಾಗಬೇಕು. ಒಡಿಯೂರು ಶ್ರೀಗಳು ಸಾಮಾಜಿಕವಾಗಿಯೂ ತನ್ನನ್ನು ತಾನು ತೊಡಗಿಸಿಕೊಂಡವರಾಗಿದ್ದಾರೆ. ಹೊರ ರಾಜ್ಯದಲ್ಲಿ, ದೇಶದಲ್ಲಿ ಕೆಲಸದಲ್ಲಿದ್ದವರಿಗೂ ಊರಿನ ಬಗ್ಗೆ ಒಲವು ಅಗತ್ಯ” ಎಂದರು.
ರಜತ ಸಂಭ್ರಮ ಸಮಿತಿ ಅಧ್ಯಕ್ಷ ಶ್ರೀ ಶಶಿಧರ ಬಿ. ಶೆಟ್ಟಿ ಬರೋಡ ಇವರು ಮಾತನಾಡಿ “ನಾವೊಂದು ಸಂಭ್ರಮಾಚರಣೆಯಲ್ಲಿದ್ದೇವೆ. ಹಿರಿಯರು ಮಾಡಿದ ಪುಣ್ಯದ ಕೆಲಸದಲ್ಲಿ ನಮಗೂ ಪಾಲಿದೆ. ಗ್ರಾಮ ವಿಕಾಸ ಯೋಜನೆ ಮೂಲಕ ೬೦೦೦೦ ಕುಟುಂಬಗಳು ಬೆಳಗಿದೆ ಎನ್ನಲು ತುಂಬಾ ಸಂತಸವಾಗುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ಅವರ ಜೀವನಕ್ಕೆ ಬೆಳಕಾಗಿದೆ. ಗ್ರಾಮ ವಿಕಾಸ ಯೋಜನೆ ಎಂದರೆ ಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ನೀಡುವುದು ಮಾತ್ರವಲ್ಲ. ಸಂಸ್ಕೃತಿ ಸಂಸ್ಕಾರ ಕಲಿಸುವ ಕೆಲಸವಾಗುತ್ತಿದೆ. ಸರ್ವರನ್ನು ಒಂದು ಮಾಡುವ ಕೆಲಸ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮೂಲಕ ಆಗಿದೆ ಎನ್ನಲು ಕುಶಿಯಾಗುತ್ತಿದೆ. ಸಮಾಜದಲ್ಲಿ ಹಲವಾರು ಬದಲಾವಣೆ ತರುವಲ್ಲಿ ಪೂಜ್ಯ ಶ್ರೀಗಳ ಪಾತ್ರ ಅಪಾರ. ಒಡಿಯೂರು ಶ್ರೀ ಸಂಸ್ಥಾನ ಎಲ್ಲರ ಆತ್ಮಧಾಮವಾಗಿದೆ” ಎಂದರು.
ಮಾಜಿ ಸಚಿವ ಶ್ರೀ ಬಿ.ರಮಾನಾಥ ರೈಯವರು ಮಾತನಾಡಿ “ತುಳುವಿನ ಉಳಿವಿಗಾಗಿ ಕೆಲಸ ಮಾಡಿದವರಲ್ಲಿ ಒಡಿಯೂರು ಶ್ರೀಗಳ ಪಾತ್ರ ಮಹತ್ವದ್ದು. ತುಳುವಿನ ಲಿಪಿಯನ್ನು ಎಲ್ಲರೂ ಕಲಿಯುವ ಕೆಲಸವಾಗಬೇಕು. ಯಾವುದೇ ಕೆಲಸವಾಗಬೇಕಾದರೂ ಅದು ದೈವನಿಮಿತ್ತವಾಗಿದೆ. ರಾಜಕೀಯಕ್ಕಿಂತ ಅಭಿವೃದ್ಧಿ ಮಾಡುವುದು ಮುಖ್ಯ. ಜಾತಿ – ಧರ್ಮ ಭೇದ ಭಾವ ಮಾಡದೆ ಕೆಲಸ ಮಾಡಿರುವ ಖುಶಿ ನನಗಿದೆ” ಎಂದರು.
ಮಾಜಿ ಸಚಿವ ಶ್ರೀ ಬಿ. ನಾಗರಾಜ ಶೆಟ್ಟಿ ಅವರು ಮಾತನಾಡಿ “ತುಳುನಾಡು ವಿಶೇಷ ಶಕ್ತಿ ಇರುವ ನಾಡು. ನಾವು ಪುಣ್ಯಾತ್ಮರು. ಹಿಂದೂ ಸಮಾಜ ಒಟ್ಟಾಗಬೇಕು. ಸಂಸ್ಕಾರಪೂರಿತ ಸಮಾಜ ನಿರ್ಮಾಣದಲ್ಲಿ ಒಡಿಯೂರು ಶ್ರೀಗಳವರ ಪಾತ್ರ ಅಪಾರ. ಪೂಜ್ಯ ಶ್ರೀಗಳವರ ಕನಸು ನನಸಾಗಿದೆ. ತುಳುನಾಡಿನ ಜನರಿಗೆ ಇದ್ದಷ್ಟು ಶಕ್ತಿ ಬೇರೆ ಯಾರಿಗೂ ಇಲ್ಲ. ಜೀವನದಲ್ಲಿ ಮಾಡಿದ ಪುಣ್ಯದ ಕೆಲಸ ನಮ್ಮ ಜೊತೆಗಿರುತ್ತದೆ. ಯುವ ಪೀಳಿಗೆ ಪೇಟೆ ಕಡೆಗೆ ಸಾಗುತ್ತಿದೆ. ಕೃಷಿ ಬಹಳಷ್ಟು ಅಧಃಪತನಕ್ಕೆ ಸಾಗುತ್ತಿದೆ. ಜಾತಿ, ಮತ, ಬೇದ ಬಿಟ್ಟು ಇಂತಹ ಗ್ರಾಮವಿಕಾಸ ಯೋಜನೆ ಮೂಲಕ ಒಗ್ಗಟ್ಟಾಗೋಣ. ಸರಕಾರದ ಪ್ರತಿಯೊಂದೂ ಯೋಜನೆಗಳನ್ನು ಬಳಸಿಕೊಳ್ಳುವ ಮನಸ್ಸು ನಮ್ಮದಾಗಬೇಕು” ಎಂದರು.
ಉದ್ಯಮಿ ಶ್ರೀ ಸುಗ್ಗಿ ಸುಧಾಕರ ಶೆಟ್ಟಿ, ಮುಂಬೈ ಉದ್ಯಮಿ ಶ್ರೀ ವಾಮಯ್ಯ ಬಿ.ಶೆಟ್ಟಿ ಮುಂಬೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕದ ಅಧ್ಯಕ್ಷ ಶ್ರೀ ದಾಮೋದರ ಎಸ್.ಶೆಟ್ಟಿ, ಪುಣೆ ಘಟಕ ಅಧ್ಯಕ್ಷ ಶ್ರೀ ಪ್ರಭಾಕರ ವಿ. ಶೆಟ್ಟಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ – ರಜತ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಲ| ಎ.ಸುರೇಶ್ ರೈ, ಶ್ರೀ ಎ.ಸಿ. ಭಂಡಾರಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಯೋಜನೆಯ – ರಜತ ಸಂಭ್ರಮ ಸ್ಮರಣ ಸಂಚಿಕೆ ಸಂಪಾದಕ ಶ್ರೀ ಯಶವಂತ ವಿಟ್ಲ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ ವಂದಿಸಿದರು. ಖ್ಯಾತ ನಿರೂಪಕ ಶ್ರೀ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀ ಯುವಸೇವಾ ಬಳಗ ಮುಂಬೈ ಇದರ ಅಧ್ಯಕ್ಷ ಡಾ. ಅದೀಪ್ ಕೆ.ಶೆಟ್ಟಿಯವರಿಗೆ ಒಡಿಯೂರು ಶ್ರೀ ಸಾಧನಾ ಪ್ರಶಸ್ತಿ ನೀಡಿ ಪೂಜ್ಯ ಶ್ರೀಗಳವರು ಹರಸಿದರು.
ಅದೇ ರೀತಿ ದ.ಕ.ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ರಜತ ಸಂಭ್ರಮ ಸಮಿತಿ ಅಧ್ಯಕ್ಷ ಶ್ರೀ ಶಶಿಧರ ಬಿ.ಶೆಟ್ಟಿ ಬರೋಡ, ಕಾರ್ಯಾಧ್ಯಕ್ಷ ಲ| ಎ. ಸುರೇಶ್ ರೈ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಗಳು:
ಬೆಳಿಗ್ಗೆ ಶ್ರೀ ರವಿರಾಜ್ ಶೆಟ್ಟಿ ಒಡಿಯೂರು ಮತ್ತು ಬಳಗದವರಿಂದ ನಾಮಸಂಕೀರ್ತನೆ ನಡೆಯಿತು. ಪೂಜ್ಯ ಶ್ರೀಗಳವರನ್ನು ಭವ್ಯ ಮೆರವಣಿಗೆಯಲ್ಲಿ ರಾಜಾಂಗಣಕ್ಕೆ ಸ್ವಾಗತಿಸಲಾಯಿತು.
ಯೋಜನೆಯ ಯಶಸ್ಸಿಗೆ ಸಹಕರಿಸಿದ ೬೬೦ ಮಂದಿಗೆ ಗೌರವಾರ್ಪಣೆ:
ಅಪರಾಹ್ಣ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಜರಗಿದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಉಮಾನಾಥ ಎ.ಕೋಟ್ಯಾನ್ ಮಾತನಾಡಿ “ಕುಗ್ರಾಮವಾಗಿದ್ದ ಒಡಿಯೂರು ಇಂದು ನವಗ್ರಾಮವಾಗಿದೆ. ಇದು ಬಹುದೊಡ್ಡ ಕಾರ್ಯಕ್ರಮವಾಗಿದೆ. ಉಪಕಾರ ಮಾಡುವ ಕೈಗಳಿರುವಾಗ ಸಹಾಯ ಪಡೆಯುವ ಹೃದಯ ನಮ್ಮದಾಗಬೇಕು. ಉತ್ತಮ ಯೋಚನೆಯಲ್ಲಿ ಮಾಡಿದ ಕೆಲಸಕ್ಕೆ ಯಶಸ್ಸು ಹೆಚ್ಚು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಅವಿಭಜಿತ ದ.ಕ.ಜಿಲ್ಲೆಯ ಬೆಳವಣಿಗೆಗೆ ಪೂರಕವಾಗಿದೆ. ತುಳುವಿನಲ್ಲಿರುವ ಸಂಸ್ಕಾರ ಸಂಸ್ಕೃತಿ ಬೇರೆ ಕಡೆ ಸಿಗಲು ಸಾಧ್ಯವಿಲ್ಲ. ತುಳು ಭಾಷೆಗೆ ಎರಡನೇ ಸ್ಥಾನ ಪಡೆಯಲು ಒಡಿಯೂರು ಶ್ರೀಗಳ ಪಾತ್ರವೂ ಬಹಳಷ್ಟಿದೆ. ಸತ್ವ ಇರುವ ಮಣ್ಣು ತುಳುನಾಡು. ಸತ್ವ ಇರುವ ಭಾಷೆ ತುಳುಭಾಷೆ” ಎಂದರು.
ಕಾರ್ಯಕ್ರಮದಲ್ಲಿ ಮೂರು ಜಿಲ್ಲೆಗಳ ವಿಕಾಸವಾಹಿನಿ ಘಟಸಮಿತಿ ಅಧ್ಯಕ್ಷರುಗಳಿಗೆ, ಸ್ವ-ಉದ್ಯೋಗ ನಡೆಸುವವರಿಗೆ, ೨೦೦೬ರಲ್ಲಿ ಜರಗಿದ ಸಂಸ್ಕಾರೋತ್ಸವ – ಬಂಟ್ವಾಳ ತಾಲೂಕಿನ ೮೪ ಗ್ರಾಮಗಳ ಸಂಚಾಲಕರುಗಳನ್ನು, ಗ್ರಾಮವಿಕಾಸ ಯೋಜನೆಗೆ ಉಚಿತ ಕಛೇರಿ ನೀಡಿದ ಬಂಧುಗಳಿಗೆ ಪೂಜ್ಯ ಶ್ರೀಗಳವರು ಸ್ಮರಣಿಕೆ ನೀಡಿ ಹರಸಿದರು.
ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯಸಾನಿಧ್ಯ ಕರುಣಿಸಿದ್ದರು. ಮಾಜಿ ಶಾಸಕ ಶ್ರೀ ಪದ್ಮನಾಭ ಕೊಟ್ಟಾರಿ, ಸಮಿತಿಯ ಉಪಾಧ್ಯಕ್ಷ ಶ್ರೀ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು ಉಪಸ್ಥಿತರಿದ್ದರು.
