ಜೀವನ ಮೌಲ್ಯ-ಶ್ರೀಕೃಷ್ಣ ಸಂದೇಶವನ್ನು ತಿಳಿಸಿಕೊಟ್ಟಾಗ ಕಾರ್ಯಕ್ರಮ ಅರ್ಥಪೂರ್ಣ

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಮುದ್ದುಕೃಷ್ಣ ವೇಷ ಸ್ಪರ್ಧೆ ಉದ್ಘಾಟಿಸಿ ಪೂಜ್ಯ ಒಡಿಯೂರು ಶ್ರೀಗಳವರಿಂದ ಆಶೀರ್ವಚನ
“ಶ್ರೀ ಕೃಷ್ಣ ಜನ್ಮಾಷ್ಟಮಿಯ ಲೀಲೋತ್ಸವದ ಸಂಭ್ರಮದಲ್ಲಿದ್ದೇವೆ. ಅಧರ್ಮವನ್ನು ಮೆಟ್ಟಿ ನಿಲ್ಲಲು ಕೃಷ್ಣಾವತಾರವಾಯಿತು. ಅಂಧಾಕಾರ ತೊಲಗಿ ಬೆಳಕಾಗಲು ಕೃಷ್ಣ ಬರಬೇಕಾಯಿತು. ಸತ್ಯಯುಗದಲ್ಲಿ ಸುರರು ಮತ್ತು ಅಸುರರ ಮಧ್ಯೆ ಯುದ್ಧ, ತ್ರೇತಾಯುಗದಲ್ಲಿ ಧರ್ಮ – ಅಧರ್ಮದ ಯುಧ್ದ, ದ್ವಾಪರದಲ್ಲಿ ಒಂದೇ ಮನೆಯಲ್ಲಿ ಅಂದರೆ ದಾಯಾದಿಗಳ ಕಲಹವಾದರೆ, ಕಲಿಯುಗದಲ್ಲಿ ಒಬ್ಬ ಮನುಷ್ಯನಲ್ಲೇ ಎರಡು ಗುಣಗಳನ್ನು ಕಾಣಬಹುದು. ಯುದ್ಧಭೂಮಿಯಲ್ಲಿ ಶ್ರೀಕೃಷ್ಣ ನೀಡಿದ ಸಂದೇಶವೇ ಶ್ರೀಮದ್ಭಗವದ್ಗೀತೆ. ಅದು ಕಲಿಗಾಲಕ್ಕೆ ಪ್ರಸ್ತುತವಾಗಿದೆ. ಅವಶ್ಯವೂ ಆಗಿದೆ. ನಾವೆಲ್ಲ ರಾಜನಂತೆ ಬದುಕಬೇಕು, ಸಂನ್ಯಾಸಿಯ0ತೆ ಆಲೋಚಿಸಬೇಕು ಎನ್ನುವ ಸಂದೇಶ ಅದರಲ್ಲಿದೆ. ಬದುಕು ಜಲಮಂಥನವಾಗದೆ, ಮನಮಂಥನವಾಗಬೇಕು. ಶ್ರೀ ಕೃಷ್ಣನ ವೇಷ ಧರಿಸಿ ಬಹುಮಾನ ಪಡೆಯುವುದು ಮುಖ್ಯವಲ್ಲ ಜೀವನ ಮೌಲ್ಯಗಳನ್ನು, ಕೃಷ್ಣನ ಸಂದೇಶವನ್ನೂ ತಿಳಿಸಿಕೊಟ್ಟಾಗ ಅರ್ಥಪೂರ್ಣವಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜೈ ಗುರುದೇವ ಕಲಾಕೇಂದ್ರ ಆಯೋಜಿಸಿದ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ದೀಪಪ್ರಜ್ವಲನೆಗೈದು ಉದ್ಘಾಟಿಸಿ ಕೃಷ್ಣಾಷ್ಟಮಿಯ ಸಂದೇಶ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯೀಯವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ, ಶಿಕ್ಷಕ ಶ್ರೀ ಶೇಖರ ಶೆಟ್ಟಿ ಬಾಯಾರು, ಒಡಿಯರ‍್ದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಉಪಸ್ಥಿತರಿದ್ದರು. ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಒಡಿಯೂರು ಸ್ವಾಗತಿಸಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಯಶೋದಾಕೃಷ್ಣ ವಿಭಾಗದಲ್ಲಿ ಸೀಯಾ ಕನ್ಯಾನ ಪ್ರಥಮ, ತುಷಾರ್ ಕೃಷ್ಣ ಮಂಡ್ಯೂರು ದ್ವಿತೀಯ ಮತ್ತು ೩ರಿಂದ ೪ವರ್ಷದ ವಿಭಾಗದಲ್ಲಿ ಸ್ಕಂದ ಮಾಣಿಲ ಪ್ರಥಮ, ಹಿಮಯಿ ಮಾಂಬಾಡಿ ದ್ವಿತೀಯ – ೫ರಿಂದ ೬ವರ್ಷದ ವಿಭಾಗದಲ್ಲಿ ಪ್ರಣಮ್ಯ ಬಾಯಾರು ಪ್ರಥಮ, ಶರಧಿ ಒಡಿಯೂರು ದ್ವಿತೀಯ ಬಹುಮಾನ ಪಡೆದರು. ಮುದ್ದುಕೃಷ್ಣ ವೇಷಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಪ್ರೋತ್ಸಾಹಕ ಬಹುಮಾನ ನೀಡಿ ಪೂಜ್ಯ ಶ್ರೀಗಳವರು ಆಶೀರ್ವದಿಸಿದರು.