“ರಾಷ್ಟ್ರ ಉಳಿದರೆ ಧರ್ಮದ ಉಳಿವು”

ಬಂಟರ ಸಂಘ, ಮುಂಬೈ ಇಲ್ಲಿ ಜರಗಿದ ಗುರುಪೂರ್ಣಿಮೆ ಆಚರಣೆ – ಗುರುವಂದನೆ – ಬಳಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ
“ಗುರು ಎಂದರೆ ಒಂದು ಶಕ್ತಿ. ಗುರುಬಲವಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ. ನಮ್ಮ ಜೀವನದಲ್ಲಿ ಗುರುವಿಗೆ ಉತ್ತಮವಾದ ಸ್ಥಾನಮಾನವಿದೆ. ಒಂದಕ್ಷರ ಕಲಿಸಿದವನು ಗುರುವಾಗಿರುತ್ತಾರೆ. ಬದುಕಿನಲ್ಲಿ ಹಲವರಿಂದ ಪಾಠ ಕಲಿಯಬೇಕಾಗುತ್ತದೆ. ನಮ್ಮ ಸನಾತನ ಧರ್ಮವು ಶ್ರೇಷ್ಠವಾಗಿದ್ದು ಅದು ಸನಾತನವಾಗಿಯೇ ಇರುತ್ತದೆ. ಅದಕ್ಕೆ ಹುಟ್ಟು ಸಾವು ಇಲ್ಲ. ಈ ಪವಿತ್ರವಾದ ಹಿಂದು ಧರ್ಮದಲ್ಲಿ ನಾವು ರಾಷ್ಟ್ರಕ್ಕೆ ಪ್ರಧಾನ ಆದ್ಯತೆಯನ್ನು ನೀಡುತ್ತೇವೆ. ರಾಷ್ಟ್ರವಿದ್ದರೆ ಧರ್ಮವಿರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಆದ್ದರಿಂದ ಧರ್ಮ ಮತ್ತು ರಾಷ್ಟ್ರದ ಉಳಿವಿಗೆ ಸದಾ ಶ್ರಮಿಸುತ್ತಿರಬೇಕು. ಮಕ್ಕಳಿಗೆ ನಮ್ಮ ಸನಾತನ ಧರ್ಮದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಒಳಗಾಗಿ ನಮ್ಮ ಪವಿತ್ರ ಶ್ರೀಮಂತ ಸಂಸ್ಕೃತಿಯನ್ನು ನಾವು ಕಳೆದುಕೊಳ್ಳಬಾರದು” ಎಂದು ಪೂಜ್ಯ ಸ್ವಾಮೀಜಿಯವರು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬೈ ಮಹಾರಾಷ್ಟ್ರ ಪ್ರದೇಶ ಘಟಕ ಹಾಗೂ ಬಂಟರ ಸಂಘ, ಮುಂಬೈ ಜಂಟಿ ಸಂಯೋಜನೆಯಲ್ಲಿ ಜರಗಿದ ಗುರುಪೂರ್ಣಿಮೆ ಆಚರಣೆ-ಗುರುವಂದನೆ-ಬಳಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿವ್ಯಉಪಸ್ಥಿತಿಯನ್ನು ಕರುಣಿಸಿ ದೀಪೋಜ್ವಲನಗೊಳಿಸಿ ಅನುಗ್ರಹ ಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಶ್ರೀ ಗುರುಪಾದುಕಾರಾಧನೆ ನೆರವೇರಿಸಿ ಅನಂತರ ಆಶಯಗೀತೆ ಹಾಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮುಂಬೈ ಬಂಟರ ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ಮಾತನಾಡಿ “ಕಳೆದ ಹಲವಾರು ವರ್ಷಗಳಿಂದ ಪೂಜ್ಯ ಶ್ರೀಗಳವರು ಬಂಟರ ಸಂಘಕ್ಕೆ ಭೇಟಿ ನೀಡಿ ನಮ್ಮೆಲ್ಲರನ್ನು ಆಶೀರ್ವದಿಸುತ್ತಿದ್ದಾರೆ. ಅವರ ಆಶೀರ್ವಾದದಿಂದಾಗಿ ಬಂಟರ ಸಂಘವು ಇಂದು ಪ್ರತಿಷ್ಠಿತ ಸಮಾಜಪರ ಸಂಘಟನೆಯಾಗಿ ಬೆಳೆದು ನಿಂತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡಿರುವ ಈ ಸಂಘ ಇದೀಗ ಶತಮಾನೋತ್ಸವವನ್ನು ಆಚರಿಸಲು ಸಿದ್ಧವಾಗಿದ್ದು ಈ ಸಂದರ್ಭದಲ್ಲಿ ನಮ್ಮ ಹಲವಾರು ಕನಸಿನ ಯೋಜನೆಯನ್ನು ಅದರಲ್ಲಿ ಭವ್ಯವಾದ ಸಭಾಭವನ ಹಾಗೂ ಆಸ್ಪತ್ರೆಯನ್ನು ನಿರ್ಮಿಸುವಂತಹ ಯೋಜನೆಗಳ ಯಶಸ್ಸಿಗೆ ಪೂಜ್ಯ ಶ್ರೀಗಳವರ ಆಶೀರ್ವಾದವನ್ನು ಬೇಡುತ್ತೇವೆ” ಎಂದರು.
ಬಂಟರ ಸಂಘದ ಮಹಿಳಾವಿಭಾಗದ ಅಧ್ಯಕ್ಷೆ ಶ್ರೀಮತಿ ಚಿತ್ರಾ ಆರ್. ಶೆಟ್ಟಿ ಮಾತನಾಡಿ “ನಮಗೆ ಜೀವನದಲ್ಲಿ ಗುರುಬಲ ಬಹಳ ಅಗತ್ಯವಿದೆ. ಪೂಜ್ಯ ಶ್ರಿಗಳವರ ಆಶೀರ್ವಾದವು ನನಗೆ ಸದಾ ಇದೆ. ಅವರು ಮಾಡುವ ಸೇವಾಕಾರ್ಯಗಳು ಅಭಿನಂದನೀಯ” ಎಂದರು.
ಬಳಗದ ಅಧ್ಯಕ್ಷ ಶ್ರೀ ದಾಮೋದರ ಎಸ್. ಶೆಟ್ಟಿ, ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಶ್ವೇತಾ ಚಂದ್ರಹಾಸ ರೈ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಗದ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ.ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಂಟರ ಸಂಘದ ಪರವಾಗಿ ಹಾಗೂ ಬಳಗದ ಪರವಾಗಿ ಪೂಜ್ಯ ಶ್ರೀಗಳವರಿಗೆ ಗುರುವಂದನೆ ಸಲ್ಲಿಸಿದರು. ಆರಂಭದಲ್ಲಿ ಗುರುಭಕ್ತರಿಂದ ನಾಮಸಂಕೀರ್ತನೆ ಜರಗಿತು. ನೆರೆದ ಭಕ್ತರೆಲ್ಲ ಪೂಜ್ಯ ಶ್ರೀಗಳವರಿಗೆ ಗುರುವಂದನೆ ಸಲ್ಲಿಸಿದರು. ಪೂಜ್ಯ ಶ್ರೀಗಳವರು ಪ್ರಸಾದ ಮಂತ್ರಾಕ್ಷತೆ ನೀಡಿ ಹರಸಿದರು.