“ಪ್ರತಿಯೊಬ್ಬರಿಗೂ ಹೆತ್ತವರ ಆಶೀರ್ವಾದ ಅವಶ್ಯ”

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮಾತೃ ಪೂಜನ ಕಾರ್ಯಕ್ರಮ-
ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಆಚರಣೆ – ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ಸ್ವಾಮಿ ವಿವೇಕಾನಂದರು, ಛತ್ರಪತಿ ಶಿವಾಜಿ ಮಹಾರಾಜರಂತಹ ಮಹಾನ್ ವ್ಯಕ್ತಿಗಳು ತಾಯಿಯ ಪೋಷಣೆಯಲ್ಲೇ ಬೆಳೆದವರು. ತಾಯಿ ಮತ್ತು ಮಗುವಿನ ಸಂಬ0ಧವೇ ವಾತ್ಸಲ್ಯ. ಮಕ್ಕಳಲ್ಲಿ ಪ್ರೀತಿಯೂ ಬೇಕು, ಭೀತಿಯೂ ಬೇಕು. ಪ್ರತಿಯೊಬ್ಬರಿಗೂ ತನ್ನ ಹೆತ್ತವರ ಆಶೀರ್ವಾದ ಅತ್ಯಂತ ಅವಶ್ಯಕ. ಮಾತೃಪೂಜೆಯನ್ನು ನಡೆಸುವುದರಿಂದ ವಿಶೇಷವಾದ ಮಹತ್ವವಿದೆ. ಮಾತೃತ್ವದಿಂದಲೇ ಮಾತೆಗೆ ಬಲ. ಮಕ್ಕಳು ದಾರಿ ತಪ್ಪದಂತೆ ಆಗಬೇಕಾದರೆ ಸಂಸ್ಕಾರ ಅಗತ್ಯ. ಮಕ್ಕಳನ್ನು ಬೆಳೆಸುವ ರೀತಿ ಹೇಗಿದೆ ಎಂಬ ಅರಿವಿರಬೇಕು. ಭಾರತೀಯ ಪರಂಪರೆಗೆ ಪೂರಕವಾಗಿ ಹುಟ್ಟುಹಬ್ಬವನ್ನು ಆಚರಿಸುವುದು ಅನುಸರಣೀಯ. ಮಕ್ಕಳಲ್ಲಿ ಸಂಸ್ಕಾರದ ಬೀಜಗಳನ್ನು ಬಿತ್ತೋಣ, ಆ ಮೂಲಕ ಭಾರತದ ಸತ್ಪçಜೆಗಳನ್ನಾಗಿಸುವ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಜರಗಿದ ಮಾತೃ ಪೂಜನ ಕಾರ್ಯಕ್ರಮ-ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆಯ ಸಂದರ್ಭ ದಿವ್ಯಉಪಸ್ಥತಿಯನ್ನು ಕರುಣಿಸಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಮಾತನಂದಮಯೀಯವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ಹೆತ್ತ ತಾಯಿ, ಹೊತ್ತ ಭೂಮಿ ನಮಗೆ ಪೂಜನೀಯರು. ಮಾತೃಪೂಜೆಯನ್ನು ಮಾಡುವುದು ಅದು ದುರ್ಗಾಪೂಜೆಗೆ ಸಮಾನವಾದುದು” ಎಂದು ಆಶೀರ್ವಚನಗೈದರು. ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಮಾತೃಪೂಜನ ಕಾರ್ಯಕ್ರಮದ ವಿಧಿ-ವಿಧಾನ ನಡೆಸಿಕೊಟ್ಟರು. ವೇದಿಕೆಯಲ್ಲಿ ಮಾತೃ ಮಂಡಳಿ ಸಂಚಾಲಕಿ ಶ್ರೀಮತಿ ಉಮಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರ ಆಶಯಗೀತೆಯೊಂದಿಗೆ ಆರಂಭಗೊ0ಡ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ಪ್ರಸ್ತಾವನೆಗೈದರು. ಶಿಕ್ಷಕ ಶ್ರೀ ಶೇಖರ್ ಶೆಟ್ಟಿ ಬಾಯಾರು ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕಿ ಶ್ರೀಮತಿ ಹೇಮಾವತಿ ವಂದಿಸಿದರು. ಮಕ್ಕಳು ಸಾಮೂಹಿಕವಾಗಿ ಹಣತೆ ಹಚ್ಚುವುದರ ಮೂಲಕ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
