“ವಿದ್ಯೆಯ ಜೊತೆಗೆ ಜ್ಞಾನವೂ ಹೊಂದಿರಲಿ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸ0ಸ್ಕಾರ’ ಕಾರ್ಯಕ್ರಮದಲ್ಲಿ
ಪೂಜ್ಯ ಶ್ರೀಗಳವರಿಂದ ಸಂದೇಶ
“ನಾವು ಮನಮಂಥನ ಮಾಡಬೇಕು. ಭಜನೆಯ ಮೂಲಕ ಸಂಸ್ಕಾರ – ಸಂಸ್ಕೃತಿಯ ಉಳಿವು. ಇದರಿಂದ ಶಿಸ್ತು ಸಂಯಮವೂ ಬೆಳೆಯುತ್ತದೆ. ಹಿಂದೆ ದಾಸರು ಮನೆಮನೆಗೆ ತೆರಳಿ ಭಜಿಸುತ್ತಿದ್ದರಂತೆ. ಅದು ಮನ-ಜನ ಜಾಗೃತಿಗೆ ಪೂರಕ. ಪರಿವರ್ತನೆಗೂ ದಾರಿ ಮಾಡಿಕೊಡುತ್ತದೆ. ಉತ್ಸಾಹವು ಶತ್ರುವಿನಂತಿರುವ ಮಿತ್ರ. ಉದಾಸೀನತೆ ಮಿತ್ರನಂತಿರುವ ಶತ್ರು. ಹಾಗಾಗಿ ನಾವು ಉತ್ಸಾಹದಿಂದಿರಬೇಕು. ವಿದ್ಯೆಯ ಜೊತೆಗೆ ಜ್ಞಾನವನ್ನು ಹೊಂದಿರಬೇಕು. ಚಿಕ್ಕ ಮಕ್ಕಳಿಗೆ ಮೊಬೈಲ್ ನೀಡುವಾಗ ಎಚ್ಚರವಿರಲಿ, ಆಧುನಿಕ ಯಂತ್ರಗಳ ಬಳಕೆಯಲ್ಲಿಯೂ ಮಿತಿ ಇರಲಿ. ವಿದ್ಯಾವಂತರಲ್ಲಿ ಸಂಸ್ಕಾರ ಮತ್ತು ಜ್ಞಾನದ ಕೊರತೆಯಿಂದಲೇ ತೊಂದರೆಯಾಗುತ್ತಿದೆ ಎನ್ನುವುದಕ್ಕೆ ದೆಹಲಿಯ ಇತ್ತೀಚೆಗೆ ನಡೆದ ಘಟನೆ ಸಾಕ್ಷಿಯಾಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ ಸಂಸ್ಕಾರ’ ಕಾರ್ಯಕ್ರಮದಲ್ಲಿ ಆಶೀರ್ವಚನಗೈದರು.
ಕಡಬ ತಾಲೂಕಿನ ಯೋಜನೆಯ ಬಂಧುಗಳು ನಿರ್ವಹಿಸಿದ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊ0ಡಿತು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ, ಕಡಬ ತಾಲೂಕು ಘಟಸಮಿತಿ ಪದಾಧಿಕಾರಿಗಳಾದ ಸುರೇಶ್ ಕಡಬ, ಶ್ರೀಮತಿ ಯಶೋದ, ಭಾಸ್ಕರ ಪಂಜ, ಯಶೋಧರ ಕಡಬ ಇವರು ದೀಪ ಪ್ರಜ್ವಲಿಸಿದರು. ಕಡಬ ತಾಲೂಕಿನ ಸುಮಾರು ೨೩ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ರೂ.೮,೦೪,೦೫೮.೦೦ ಮೊತ್ತ ಲಾಭಾಂಶದ ಚೆಕ್ಕನ್ನು ಪೂಜ್ಯ ಸ್ವಾಮೀಜಿಯವರು ನೀಡಿ ಹರಸಿದರು.
ಆರಂಭದಲ್ಲಿ ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ ಜರಗಿದವು. ಸವಣೂರು ವಲಯ ಸಂಯೋಜಕಿ ವೇದಾವತಿ ಸ್ವಾಗತಿಸಿದರು. ಪಂಜ ವಲಯ ಸೇವಾದೀಕ್ಷಿತೆ ಕಾವೇರಿ ವಂದಿಸಿದರು. ಕಡಬ ತಾಲೂಕು ಮೇಲ್ವಿಚಾರಕಿ ಶ್ರೀಮತಿ ಕಾವ್ಯಲಕ್ಷಿಯವರು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಭಕ್ತಿಗೀತೆ, ಕುಣಿತ ಭಜನೆ, ನೃತ್ಯ ಜರಗಿತು.