‘ಶ್ರೀ ಗುರುದೇವದತ್ತ ಲಕ್ಷ ದೀಪಾವಳಿಯ ಮೂಲಕ ಜ್ಞಾನದ ಜ್ಯೋತಿ ಬೆಳಗಲಿ”

‘ಶ್ರೀ ಗುರುದೇವದತ್ತ ಲಕ್ಷ ದೀಪಾವಳಿಯ ಮೂಲಕ ಜ್ಞಾನದ ಜ್ಯೋತಿ ಬೆಳಗಲಿ”
ಶ್ರೀ ದತ್ತಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹದ ಸುಸಂದರ್ಭ ಜರಗುವ ಶ್ರೀ ಗುರುದೇವದತ್ತ ಕೋಟಿ ನಾಮಜಪ ಯಜ್ಞ ಮತ್ತು ಲಕ್ಷ ದೀಪಾವಳಿಯ ಸಮಾಲೋಚನಾ ಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ಆತ್ಮಜ್ಯೋತಿ ಬೆಳಗಿದಾಗಲೇ ಬದುಕು ಪಾವನವಾಗುವುದು. ಮನುಷ್ಯನಿಗೆ ಹುಟ್ಟಿನಿಂದಲೇ ಸಂಸ್ಕಾರ ಆರಂಭಗೊಳ್ಳುತ್ತದೆ. ದೀಪಕ್ಕೂ ಸಂಸ್ಕಾರ ಸಿಕ್ಕಿದರೆ ಚೆನ್ನಾಗಿ ಉರಿಯಲು ಸಾಧ್ಯ. ಅದೇ ರೀತಿ ನಮಗೆ ಉತ್ತಮ ಸಂಸ್ಕಾರ ಸಿಕ್ಕಿದಾಗಲೇ ಸಾರ್ಥಕತೆ. ಅಂತರ0ಗದ ಜಾಗೃತಿಗೆ ಉತ್ಸವಗಳು ಸಹಕಾರಿ. ಗುರುಮಂತ್ರ ಜಪಿಸುವುದರಿಂದ ಮಹಾಶಕ್ತಿ ಸಂಚಯನವಾಗುವುದು. ಶಾರೀರಿಕ ಮತ್ತು ಮಾನಸಿಕ ನೆಮ್ಮದಿಗೆ ಪೂರಕವಾಗುವುದು. ಸತ್ಸಂಕಲ್ಪದ ಸಾಕಾರಕ್ಕೆ ಭಕ್ತರ ಸಹಕಾರ ಅಗತ್ಯ. ಶ್ರದ್ಧೆ ಮತ್ತು ಸಂಸ್ಕಾರಯುತವಾಗಿ ಕಾರ್ಯ ನಡೆಯಬೇಕು. ಮನಸ್ಸು ಮಾಡಿದರೆ ಯಾವುದೇ ಕಾರ್ಯವನ್ನು ಮಾಡಬಹುದು. ದೀಪೋತ್ಸವದ ಮೂಲಕ ಜ್ಞಾನದ ದೀಪವೂ ಅರಳಬೇಕು” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನನಂದ ಸ್ವಾಮೀಜಿಯವರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ನಡೆದ ಶ್ರೀ ದತ್ತಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹದ ಸುಸಂದರ್ಭ ಜರಗುವ ಶ್ರೀ ಗುರುದೇವದತ್ತ ಕೋಟಿ ನಾಮಜಪ ಯಜ್ಞ ಮತ್ತು ಲಕ್ಷ ದೀಪಾವಳಿಯ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ, ವೇ|ಮೂ| ಚಂದ್ರಶೇಖರ ಉಪಾಧ್ಯಾಯ, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಶ್ರೀ ಎ. ಸುರೇಶ್ ರೈ, ನಿರ್ದೇಶಕ ಲೋಕನಾಥ ಜಿ. ಶೆಟ್ಟಿ ಇವರು ಪಾಲ್ಗೊಂಡಿದ್ದರು.
ಶ್ರೀ ಗುರುದೇವದತ್ತ ಕೋಟಿ ನಾಮಜಪಯಜ್ಞ ಮತ್ತು ಲಕ್ಷ ದೀಪಾವಳಿಯ ಸಮಿತಿಯನ್ನು ರಚಿಸಿಲಾಯಿತು. ಸಹಕಾರರತ್ನ ಲ| ಸುರೇಶ್ ರೈಯವರು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯಕ್ರಮದ ಯಶಸ್ಸಿಗೆ ತಾಲೂಕುವಾರು ಸಂಚಾಲಕರನ್ನು ನೇಮಿಸಲಾಯಿತು.
ಒಡಿಯೂರು ಶ್ರೀಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಇವರ ಆಶಯಗೀತೆಯೊಂದಿಗೆ ಆರಂಭಗೊ0ಡ ಕಾರ್ಯಕ್ರಮದಲ್ಲಿ ಒಡಿಯೂರುದ ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿ ಪ್ರಸ್ತಾವನೆಗೈದರು. ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ವಂದಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪಿ.ಆರ್.ಒ. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.