ಸೇವಾಮನೋಭಾವನೆಯೊಂದಿಗೆ ಸಂಘಟಿತ ಜೀವನ ನಡೆಸೋಣ
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸ0ಸ್ಕಾರ’ ಕಾರ್ಯಕ್ರಮದಲ್ಲಿ
ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ಕಲಿಗಾಲದಲ್ಲಿ ಭಜನೆ ಶ್ರೇಷ್ಠವಾದುದು. ಹರಿನಾಮ ಸಂಕೀರ್ತನೆಗಳು ನಿರಂತರ ನಡೆಯಬೇಕು. ರಾಮಾಯಣ-ಮಹಾಭಾರತದ ಸಂದೇಶಗಳು ನಮ್ಮ ಬದುಕಿಗೆ ದಾರಿ. ನಾವು ಮಾಡುವಂತಹ ಸತ್ಕಾರ್ಯಗಳು ಉಳಿಯುವಂತಹದು. ಅಧ್ಯಾತ್ಮದ ಸಂತೋಷ ಶಾಶ್ವತವಾದುದು. ಅಧ್ಯಾತ್ಮದಿಂದ ಆತ್ಮಾನಂದವನ್ನು ಪಡೆಯಬಹುದು. ಆತ್ಮಾನಂದದಿ0ದ ಶಾಂತಿ ಲಭ್ಯವಾಗುವುದು. ಆರ್ಥಿಕ ಸಬಲೀಕರಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸ್ವಾವಲಂಬನೆ ಹಾಗೂ ಸೇವಾ ಮನೋಭಾವದೊಂದಿಗೆ ಸಂಘಟಿತ ಜೀವನ ನಡೆಸುವುದೇ ಯೋಜನೆಯ ಉದ್ದೇಶವಾಗಿದೆ. ಮಾನವೀಯ ಮೌಲ್ಯಗಳನ್ನು ತುಂಬಿಕೊ0ಡು ಸಾಮರಸ್ಯದ ಬದುಕಿಗೆ ಪೂರಕವಾಗಿ ಕಾರ್ಯಾಚರಿಸುತ್ತಿದೆ.” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ ಸಂಸ್ಕಾರ’ ಕಾರ್ಯಕ್ರಮದಲ್ಲಿ ಆಶೀರ್ವಚನಗೈದರು.
ಬಂಟ್ವಾಳ ತಾಲೂಕಿನ ವಿಟ್ಲ ವಲಯದ ಯೋಜನೆಯ ಬಂಧುಗಳು ನಿರ್ವಹಿಸಿದ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊ0ಡಿತು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಮಂಗಳೂರು ತಾಲೂಕು ಯೋಜನಾ ನಿರ್ದೇಶಕ ಕಿರಣ್ ಉರ್ವ, ವರ್ಕಾಡಿ ಘಟಸಮಿತಿ ಅಧ್ಯಕ್ಷ ರಾಜೇಶ್ ಕೆ.ವಿ., ಅಳಿಕೆ ಘಟಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಮಡೆಯಾಲ, ಬಂಟ್ವಾಳ ತಾಲೂಕು ಮೇಲ್ವಿಚಾರಕರಾದ ಲೀಲಾ ಕೆ. ಮತ್ತು ಜಯಲಕ್ಷ್ಮಿ ಪ್ರಭು ಇವರುಗಳು ದೀಪ ಪ್ರಜ್ವಲಿಸಿದರು.
ಬಂಟ್ವಾಳ ತಾಲೂಕಿನ ಸುಮಾರು ೩೪ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ರೂ.೧೧,೮೭,೬೦೦.೦೦ ಮೊತ್ತ ಲಾಭಾಂಶದ ಚೆಕ್ಕನ್ನು ಪೂಜ್ಯ ಸ್ವಾಮೀಜಿಯವರು ನೀಡಿ ಹರಸಿದರು. ಮೇಲ್ವಿಚಾರಕಿ ಲೀಲಾ ಕೆ. ಸಂಘಗಳ ವಿವರ ವಾಚಿಸಿದರು.
ಆರಂಭದಲ್ಲಿ ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ ಜರಗಿದವು. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ವಿಷಯದ ಬಗ್ಗೆ ಮಂಜುನಾಥ ಶೆಟ್ಟಿ ಇರಾ ಇವರು ಮಾತನಾಡಿದರು.
ಇಡ್ಕಿದು ಗ್ರಾಮದ ಸೇವಾದೀಕ್ಷಿತೆ ಸುಮಲತಾ ಸ್ವಾಗತಿಸಿ, ಕರೋಪಾಡಿ ಗ್ರಾಮದ ಸೇವಾದೀಕ್ಷಿತೆ ಚೈತ್ರಾ ವಂದಿಸಿದರು. ಕೊಳ್ನಾಡು ವಲಯ ಸಂಯೋಜಕಿ ಚಂದ್ರಿಕಾ ಇರಾ ಇವರು ಕಾರ್ಯಕ್ರಮ ನಿರೂಪಿಸಿದರು.