ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ-ಸೇವಾ ಸಂಭ್ರಮ ೨೦೨೫











“ಸಂಭ್ರಮದ ಮರೆಯಲ್ಲಿ ಸಮಾಜದ ಋಣ ತೀರಿಸುವ ಕೆಲಸವಾಗುತ್ತಿದೆ”
ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ–ಗ್ರಾಮೋತ್ಸವ–ಸೇವಾ ಸಂಭ್ರಮ ೨೦೨೫ – ಗುರುವಂದನೆ ಸ್ವೀಕರಿಸಿ ಪೂಜ್ಯ ಶ್ರೀಗಳವರಿಂದ ಜನ್ಮದಿನದ ಸಂದೇಶ
ಆ. ೮: “ಹುಟ್ಟುಹಬ್ಬದ ಆಚರಣೆಯ ಹಿಂದೆ ನಾವು ಹೇಗೆ ಬೆಳೆದಿದ್ದೇವೆ ಎಂಬುದನ್ನು ಅವಲೋಕಿಸುವ ಕಾರ್ಯವಾಗುವುದು. ಬದುಕು ನಿಂತ ನೀರಲ್ಲ, ಹರಿಯುವ ನದಿಯಾಗಿದೆ. ಬದುಕಿಗೆ ಸಂಸ್ಕಾರ ಅತೀ ಅಗತ್ಯ. ಭಗವದ್ಗೀತೆಯಲ್ಲಿ ತಿಳಿಸಿರುವಂತೆ ಜಗತ್ತಿಗೆ ನೀನು ಅನಿವಾರ್ಯವಲ್ಲ, ನಿನಗೆ ಜಗತ್ತು ಅನಿವಾರ್ಯ ಎನ್ನುವಂತೆ ಅಹಂಕಾರ ನಮ್ಮಿಂದ ದೂರಾಗಬೇಕು. ದ್ವೇಷ ಭಾವನೆ ಬಿಟ್ಟು ಪ್ರೀತಿ ಭಾವನೆ ನಮ್ಮಲ್ಲಿ ಬೆಳಗಲಿ. ತ್ರೇತಾಯುಗದಲ್ಲಿ ಬೇರೆ ಬೇರೆ ಮನೆಯಲ್ಲಿ ದೇವರು ಮತ್ತು ರಾಕ್ಷಸರು, ದ್ವಾಪರಯುಗದಲ್ಲಿ ಒಂದೇ ಮನೆಯಲ್ಲಿ ದೇವತೆ ಮತ್ತು ರಾಕ್ಷಸರು, ಕಲಿಯುಗದಲ್ಲಿ ಒಂದೇ ಮನುಷ್ಯನಲ್ಲಿ ಬೆಳಿಗ್ಗೆ ದೇವರು ಮತ್ತು ಸಂಜೆ ರಾಕ್ಷಸನನ್ನು ಕಾಣಬಹುದು. ಜೀವನು ದೇವನಿಗೆ ಸಂಬಂಧ ಎಂಬ ಅರಿವಿರಬೇಕು. ಪ್ರೀತಿ ನಮ್ಮ ಮನೆಯಲ್ಲಿದ್ದರೆ ಸಂಪತ್ತು, ಕೀರ್ತಿ ಎಲ್ಲವೂ ಬರುತ್ತವೆ. ಜನ್ಮದಿನೋತ್ಸವದ ಹೆಸರಿನಲ್ಲಿ ಸೇವೆಯನ್ನು ಮಾಡಲು ಅವಕಾಶ ನೀಡಿದ್ದೇವೆ. ಸಂಭ್ರಮದ ಮರೆಯಲ್ಲಿ ಸಮಾಜದ ಋಣ ತೀರಿಸುವ ಕೆಲಸವಾಗುತ್ತಿದೆ. ನೀವೆಲ್ಲರೂ ಸೇವಾನಂದರಾಗಬೇಕು. ಭೋಗದ ಬದುಕಿನಲ್ಲಿ ಸುಖವಿಲ್ಲ, ತ್ಯಾಗದಲ್ಲಿ ಶಾಶ್ವತ ಸುಖವಿದೆ. ತ್ಯಾಗ–ಸೇವೆಗೆ ಇನ್ನೊಂದು ಹೆಸರು ಹನುಮಂತ. ಹಿರಿಯರನ್ನು ಆಶ್ರಮಕ್ಕೆ ಸೇರಿಸುವುದು ಭಾರತೀಯತೆ ಅಲ್ಲ. ನಮ್ಮ ಮನೆಗಳಲ್ಲಿ ಪರಿವರ್ತನೆ ಆಗಬೇಕಿದೆ. ಆಂಗ್ಲಭಾಷೆಯ ವ್ಯಾಮೋಹ ಎಲ್ಲರಲ್ಲೂ ಹೆಚ್ಚಾಗುತ್ತಿದೆ. ಮಾತೃಭಾಷೆಯ ಬಗೆಗಿನ ಒಲವು ಎಲ್ಲರಲ್ಲೂ ಇರಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ ಗ್ರಾಮೋತ್ಸವ–ಸೇವಾ ಸಂಭ್ರಮ ೨೦೨೫ ಕಾರ್ಯಕ್ರಮದಲ್ಲಿ ಜನ್ಮದಿನೋತ್ಸವದ ಅಂಗವಾಗಿ ಗುರುವಂದನೆ ಸ್ವೀಕರಿಸಿ ಜನ್ಮದಿನದ ಸಂದೇಶ ನೀಡಿದರು.
ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ, ಬರೋಡದ ಉದ್ಯಮಿ ಶ್ರೀ ಶಶಿಧರ ಬಿ. ಶೆಟ್ಟಿ ಅವರು ಮಾತನಾಡಿ – “ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಜನ್ಮದಿನವನ್ನು ಹೇಗೆ ಆಚರಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ಜೀವನವನ್ನು ಸಾರ್ಥಕ್ಯ ಮಾಡುವ ಕೆಲಸ ನಮ್ಮದಾಗಬೇಕು. ಕರ್ಮಕ್ಕೆ ಸರಿಯಾದ ಫಲ ಭಗವಂತನಿಂದ ಸಿಗಲು ಸಾಧ್ಯ. ಜೀವನದಲ್ಲಿ ನಾವು ಮಾಡಿದ ಉತ್ತಮ ಕಾರ್ಯ ನಮ್ಮನ್ನು ಕಾಪಾಡುತ್ತದೆ. ಎಲ್ಲರೂ ನಮ್ಮ ಸಂಸ್ಕೃತಿ–ಸಂಸ್ಕಾರವನ್ನು ಉಳಿಸುವ ಕೆಲಸ ಮಾಡೋಣ” ಎಂದರು.
ವಿಶೇಷ ಆಹ್ವಾನಿತ ಅತಿಥಿಗಳಲ್ಲಿ ಒಬ್ಬರಾದ ಎಕ್ಸ್ಪರ್ಟ್ ಗ್ರೂಪ್ ಆಫ್ ಎಜುಕೇಶನ್ ಇನ್ಸ್‌ಟಿಟ್ಯೂಷನ್ಸ್, ಮಂಗಳೂರು ಇದರ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಮಾತನಾಡಿ – “ಭಜನೆಯಿಂದ ಸಾಧನೆ ಸಾಧ್ಯ. ಕಲಿಯುಗದಲ್ಲಿ ದೇವರನ್ನು ಒಲಿಸುವ ಸುಲಭ ಮಾರ್ಗ ಭಜನೆ. ಗುರಿ ಇಲ್ಲದಿದ್ದರೆ ಸಾಮಾಜಿಕವಾಗಿ ಬದಲಾವಣೆ ತರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಐದು ಭಜನೆಯನ್ನು ಕಲಿಯುವ ಪ್ರತಿಜ್ಞೆಯನ್ನು ಪೂಜ್ಯ ಶ್ರೀಗಳ ಜನ್ಮದಿನೋತ್ಸವದ ಸಂದರ್ಭದಲ್ಲಿ ಮಾಡೋಣ. ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುವುದೇ ಆಸ್ತಿ. ಸಮಾಜಕ್ಕೆ ಒಳಿತನ್ನು ಮಾಡುವುದೇ ಸೇವೆ. ನಿರಂತರ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಒಡಿಯೂರು ಶ್ರೀಗಳು ಜಗತ್ತಿಗೆ ಅನಿವಾರ್ಯರು. ಹಿರಿಯನ್ನು ದ್ವೇಷಿಸುವ ಬದಲು ಪ್ರೀತಿಸುವ ಕೆಲಸ ಮಾಡೋಣ. ಮಕ್ಕಳಿಗೆ ಮೊಬೈಲ್ ನೀಡುವುದನ್ನು ಕಡಿಮೆ ಮಾಡೋಣ. ಮೊಬೈಲ್ ಮಕ್ಕಳ ಜೀವನಕ್ಕೆ ಮಾರಕ” ಎಂದರು.
ಎಂ.ಐ.ಒ. ಆಸ್ಪತ್ರೆ ಮಂಗಳೂರು ಇದರ ಆಡಳಿತ ನಿರ್ದೇಶಕರಾದ ಡಾ. ಡಿ. ಸುರೇಶ್ ರಾವ್ ಅವರು ಮಾತನಾಡಿ – “ತುಳು ಭಾಷೆಗೆ ಅದರದೇ ಆದ ಸ್ಥಾನಮಾನ ಇದೆ. ಗುರುವಿನ ಅಭಯವಿದ್ದರೆ ಜೀವನದಲ್ಲಿ ಭಯವಿಲ್ಲ. ಧರ್ಮ ಸಂಕಟದಲ್ಲಿದ್ದ ನನಗೆ ದಾರಿ ತೋರಿದವರು ಒಡಿಯೂರು ಶ್ರೀಗಳು. ನಾವೆಲ್ಲರೂ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ” ಎಂದರು.
ಅದಾನಿ ಗ್ರೂಪ್ ಲಿಮಿಟೆಡ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಕಿಶೋರ್ ಆಳ್ವ ಅವರು ಮಾತನಾಡಿ – “ಗುರುಹಿರಿಯರನ್ನು ಗೌರವಿಸುವ ಕೆಲಸವಾಗಬೇಕು. ದೇವರ ಮೇಲೆ ನಂಬಿಕೆ ನಮ್ಮಲ್ಲಿರಬೇಕು. ಎಲ್ಲಾ ಜಾತಿಯವರನ್ನು ಗೌರವಿಸುವ ಕೆಲಸವಾಗಬೇಕು. ಯುವಪೀಳಿಗೆಯಿಂದ ನಮ್ಮ ಸಂಸ್ಕೃತಿ–ಸಂಸ್ಕಾರವನ್ನು ಅರಿಯುವ ಕೆಲಸವಾಗಲಿ” ಎಂದರು.
ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಶ್ರೀ ದಿವಾಕರದಾಸ್ ನೇರ್ಲಾಜೆ ಅವರು ಮಾತನಾಡಿ – “ಗುರುಬಲ ಮತ್ತು ಗುರಿ ಇದ್ದರೆ ಯಶಸ್ಸು ಸಾಧ್ಯ. ನಾವು ನಡೆದು ಬಂದ ಹಾದಿಯ ಅರಿವು ನಮಗಿರಬೇಕು. ಸಮಾಜದಲ್ಲಿ ನಾವು ಮಾಡಿದ ಪುಣ್ಯದ ಕೆಲಸ ನಮ್ಮನ್ನು ಕಾಪಾಡುತ್ತದೆ. ನಾವು ಪಟ್ಟ ಕಷ್ಟದ ಬಗ್ಗೆ ಇಂದಿನ ಪೀಳಿಗೆಯ ಮಕ್ಕಳಿಗೆ ತಿಳಿಹೇಳುವ ಕೆಲಸವಾಗಬೇಕು. ಹಲವಾರು ವರ್ಷಗಳ ಹಿಂದೆಯೇ ಈ ಕ್ಷೇತ್ರಕ್ಕೆ ಬಂದಿದ್ದೆ. ಇದೀಗ ಇಲ್ಲಿನ ಬದಲಾವಣೆ ಕಂಡು ತುಂಬಾ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಪೂಜ್ಯ ಶ್ರೀಗಳ ಸಾಮಾಜಿಕ ಚಟುವಟಿಕೆಯಲ್ಲಿ ನಾವುಗಳು ಕೈ ಜೋಡಿಸಲು ಬದ್ಧರಿದ್ದೇವೆ” ಎಂದರು.
ಮುಂಬೈನ ವೆಲ್‌ಕಮ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ಶ್ರೀ ರವೀಂದ್ರನಾಥ ಭಂಡಾರಿ ಮಾತನಾಡಿ – “ಇಲ್ಲಿನ ಕಾರ್ಯಕ್ರಮ ಶಿಸ್ತಿನಿಂದ ಕೂಡಿದೆ. ಇಂತಹ ಸ್ವಾಮೀಜಿಯವರನ್ನು ಪಡೆದ ನಾವು ಧನ್ಯರು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವೇ ನಮ್ಮನ್ನು ಕಾಪಾಡುತ್ತದೆ. ಪೂಜ್ಯ ಸ್ವಾಮೀಜಿಯವರ ಸಾಮಾಜಿಕ ಕಳಕಳಿಯ ಕೆಲಸ ಅಭಿನಂದನಾರ್ಹ” ಎಂದರು.
ಸಾಧ್ವೀ ಶ್ರೀ ಮಾತಾನಂದಮಯೀಯವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿದರು.
ಅಂಕಲೇಶ್ವರದ ಹೋಟೆಲ್ ಉದ್ಯಮಿ ಶ್ರೀ ಶಂಕರ ಕೆ. ಶೆಟ್ಟಿ, ಪೂಜ್ಯ ಶ್ರೀಗಳ ಜನ್ಮದಿನೋತ್ಸವ–ಸ್ವಾಗತ ಸಮಿತಿ ಅಧ್ಯಕ್ಷ ಸಹಕಾರರತ್ನ ಎ. ಸುರೇಶ್ ರೈ, ಮುಂಬೈ ಸಮಿತಿ ಅಧ್ಯಕ್ಷ ಶ್ರೀ ವಾಮಯ್ಯ ಬಿ. ಶೆಟ್ಟಿ ಮುಂಬೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮೋತ್ಸವದ ಪ್ರಯುಕ್ತ ನಡೆದ ಅಂತರ್–ಕಾಲೇಜು ವಿದ್ಯಾರ್ಥಿಗಳ ವರ್ತಮಾನದ ತಲ್ಲಣಗಳು ಕಿರು ನಾಟಕ ಸ್ಪರ್ಧೆಯ ಪ್ರಶಸ್ತಿಯನ್ನು ನೀಡಲಾಯಿತು.
ನವನಿಕೇತನ ಯೋಜನೆಯಡಿ ಸದರಿ ವರ್ಷದ ಫಲಾನುಭವಿ ಶಂಭೂರಿನ ಶ್ರೀಮತಿ ಮಾಲಿನಿ ದಿನೇಶ್ ಅವರಿಗೆ ನೂತನ ಮನೆಯ ಕೀಲಿಕೈಯನ್ನು ಪೂಜ್ಯ ಶ್ರೀಗಳವರು ನೀಡಿ ಆಶೀರ್ವದಿಸಿದರು.
ಗ್ರಾಮೋತ್ಸವದ ಪ್ರಯುಕ್ತ ಜರಗಿದ ವಿವಿಧ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ಸಾಧ್ವೀ ಶ್ರೀ ಮಾತಾನಂದಮಯೀಯವರು ವಿತರಿಸಿದರು.
ಸಮಾರಂಭದ ಗಣ್ಯರು ವಿವಿಧ ರೀತಿಯ ಸಹಾಯಹಸ್ತ ವಿತರಣೆ ಮಾಡಿದರು. ಸುಮಾರು ೯೮೦ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಮಾಡಲಾಯಿತು.
ಒಡಿಯೂರು ಶ್ರೀಗುರುದೇವ ಸೇವಾಬಳಗ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಶ್ರೀ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವೈದಿಕ–ಸಾಂಸ್ಕೃತಿಕ ಕಾರ್ಯಕ್ರಮ
ಬೆಳಿಗ್ಗೆ ಶ್ರೀ ಗಣಪತಿ ಹವನ, ಮಹಾಪೂಜೆಯ ಬಳಿಕ ರಾಜಾಂಗಣದ ಆತ್ರೇಯ ಮಂಟಪದಲ್ಲಿ ಶ್ರೀ ರವಿರಾಜ್ ಒಡಿಯೂರು ಮತ್ತು ಬಳಗದವರಿಂದ ನಾಮಸಂಕೀರ್ತನೆ ನಡೆಯಿತು. ಆ ಬಳಿಕ ಪೂಜ್ಯ ಶ್ರೀಗಳವರನ್ನು ಪೂರ್ಣಕುಂಭ, ಚೆಂಡೆ, ಕೊಂಬು, ವಾದ್ಯಗಳೊಂದಿಗೆ ರಾಜಾಂಗಣಕ್ಕೆ ಸ್ವಾಗತಿಸಲಾಯಿತು.
ಸಾಧ್ವೀ ಶ್ರೀ ಮಾತಾನಂದಮಯೀಯವರ ಉಪಸ್ಥಿತಿಯಲ್ಲಿ ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀಗುರುಪಾದುಕಾ ಆರಾಧನೆ ನೆರವೇರಿತು. ಶ್ರೀ ಲೋಕನಾಥ ಜಿ. ಶೆಟ್ಟಿ ಮತ್ತು ಶ್ರೀಮತಿ ಸರಿತಾ ಲೋಕನಾಥ ಜಿ. ಶೆಟ್ಟಿ ದಂಪತಿಗಳು ಸಹಕರಿಸಿದರು.
ಸುಮಂಗಲೆಯರು ಪೂಜ್ಯ ಶ್ರೀಗಳವರನ್ನು ಉಯ್ಯಾಲೆಯಲ್ಲಿ ತೂಗಿದ ಬಳಿಕ ರಜತ ತುಲಾಭಾರ ಮಾಡಲಾಯಿತು. ನೆರೆದ ಎಲ್ಲಾ ಸಂಘ–ಸಂಸ್ಥೆಗಳು, ಸಾವಿರಾರು ಗುರುಬಂಧುಗಳು ಗುರುವಂದನೆ ಸಲ್ಲಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಾದ ಪಡೆದರು.
ಅಪರಾಹ್ನ ೩ ಗಂಟೆಯಿಂದ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆ ಸಂಪನ್ನಗೊಂಡಿತು. ಸಾಯಂಕಾಲ ಮಂಗಳೂರು ಶ್ರೀ ಲಲಿತೆ ಕಲಾವಿದರಿಂದ ಶ್ರೀ ಕದ್ರಿ ನವನೀತ ಶೆಟ್ಟಿ ವಿರಚಿತ ಶನಿ ಮಹಾತ್ಮೆ ನಾಟಕ ಪ್ರದರ್ಶನಗೊಂಡಿತು. ರಾತ್ರಿ ೭ ಗಂಟೆಯಿಂದ ಶ್ರೀ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ, ಬೆಳ್ಳಿ ರಥೋತ್ಸವ, ಮಹಾಪೂಜೆ ನಡೆಯಿತು.