ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಕಳೆಂಜಿಮಲೆಯ ಕಬಂಧ ಬಾಹುಗಳ ಮಧ್ಯೆ ಒಡಿಯೂರಿನಲ್ಲಿ 15-2-1989ರಲ್ಲಿ ಸಾತ್ವಿಕ ಶಕ್ತಿಯ ಸಾಕಾರ ರೂಪವಾಗಿ ಅಪೂರ್ವ ಸಾಧಕ ನಾರಾಯಣ ಸ್ವಾಮಿ ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಓಂ ಶ್ರೀ ವೀರಾಂಜನೇಯ ಸ್ವಾಮೀ ಕ್ಷೇತ್ರ ಮುಂದೆ ಶ್ರೀ ಗುರುದೇವದತ್ತ ಸಂಸ್ಥಾನವಾಯಿತು. ಸಾಧಕರು ಶ್ರೀ ಗುರುದೇವಾನಂದ ಸ್ವಾಮೀಜಿ ಆದರು. ಮೂರು ದಶಕದ ಹಿಂದೆ ಕಲ್ಲು, ಮುಳ್ಳುಗಳ, ಗಿಡ ಗಂಟಿಗಳ ನೆಲವಾಗಿತ್ತು ಒಡಿಯೂರು. ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಅನನ್ಯ ಪಾತ್ರದಿಂದ ಸೃಷ್ಟಿಯಾದ, ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಬಹಳ ಕ್ಷಿಪ್ರಾವಧಿಯಲ್ಲಿ ಬಹುರೂಪಿಯಾಗಿ ಬೆಳೆದು ನಿಂತಿದೆ. ದಕ್ಷಿಣದ ಗಾಣಗಾಪುರವಾಗಿ ಮತೀಯ ಸಾಮರಸ್ಯದ ನೆಲೆಯಾಗಿದೆ.