ಶ್ರೀ ದತ್ತಾಂಜನೇಯ ಕ್ಷೇತ್ರ, ದಕ್ಷಿಣ ಗಾಣಗಾಪುರ

ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಕಳೆಂಜಿಮಲೆಯ ಕಬಂಧ ಬಾಹುಗಳ ಮಧ್ಯೆ ಒಡಿಯೂರಿನಲ್ಲಿ 15-2-1989ರಲ್ಲಿ ಸಾತ್ವಿಕ ಶಕ್ತಿಯ ಸಾಕಾರ ರೂಪವಾಗಿ ಅಪೂರ್ವ ಸಾಧಕ ನಾರಾಯಣ ಸ್ವಾಮಿ ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಓಂ ಶ್ರೀ ವೀರಾಂಜನೇಯ ಸ್ವಾಮೀ ಕ್ಷೇತ್ರ ಮುಂದೆ ಶ್ರೀ ಗುರುದೇವದತ್ತ ಸಂಸ್ಥಾನವಾಯಿತು. ಸಾಧಕರು ಶ್ರೀ ಗುರುದೇವಾನಂದ ಸ್ವಾಮೀಜಿ ಆದರು. ಮೂರು ದಶಕದ ಹಿಂದೆ ಕಲ್ಲು, ಮುಳ್ಳುಗಳ, ಗಿಡ ಗಂಟಿಗಳ ನೆಲವಾಗಿತ್ತು ಒಡಿಯೂರು. ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಅನನ್ಯ ಪಾತ್ರದಿಂದ ಸೃಷ್ಟಿಯಾದ, ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಬಹಳ ಕ್ಷಿಪ್ರಾವಧಿಯಲ್ಲಿ ಬಹುರೂಪಿಯಾಗಿ ಬೆಳೆದು ನಿಂತಿದೆ. ದಕ್ಷಿಣದ ಗಾಣಗಾಪುರವಾಗಿ ಮತೀಯ ಸಾಮರಸ್ಯದ ನೆಲೆಯಾಗಿದೆ.

ಇದು ಬರಿಯ ಶ್ರೀ ದತ್ತಾಂಜನೇಯ ದೇವಾಲಯವಷ್ಟೇ ಆಗಿ ಉನ್ನತಿ ಸಾಧಿಸಿದುದಲ್ಲ ಒಂದು ಸಾಂಸ್ಕೃತಿಕ ಕೇಂದ್ರವಾಗಿ ಜ್ಞಾನ ಸತ್ರದ ಪುಣ್ಯ ನೆಲೆಯಾಗಿ, ಗುರುತತ್ವದ ಪ್ರಚಾರದ ದತ್ತ ಪೀಠವಾಗಿ, ನೊಂದು ಬೆಂದವರ ಶಾಂತಿ ಧಾಮವಾಗಿ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತದ ಆಸರೆಯಾಗಿ, ತುಳು ಭಾಷಾಭಿಮಾನ ಬೆಳೆಸುವ ದೇಗುಲವಾಗಿ ಬೃಹದೆತ್ತರಕ್ಕೆ ವ್ಯಾಪಿಸಿದೆ.

ಶ್ರೀ ಸಂಸ್ಠಾನದ ಸಾಧನೆಯ ಹಿಂದೆ ಶ್ರೀಗಳ ಅದ್ಭುತ ಅಲೌಕಿಕ ಶಕ್ತಿ ಕೈಯಾಡಿಸಿದೆ. ಸಾಧನೆ, ಸಿದ್ಧಿಗಳು ಮೇಳೈಸಿದೆ. ತ್ಯಾಗ, ಸಾಹಸದ ಸಾಕ್ಷಿ ಮೈತಳೆದಿದೆ. ಸಾಮಾಜಿಕ ಚಿಂತನೆ, ಆತ್ಮ ಶಕ್ತಿಯ ಆಕರ್ಷಣೆಯ ಜತೆಗೆ ಸೇವಾ ಪರಾಯಣತೆ ಸಮನ್ವಯಗೊಂಡಿದೆ.