ಸುಖ-ದುಃಖದಿಂದ ಕೂಡಿದ ಬದುಕನ್ನು ಸಮತೋಲನದಲ್ಲಿಡಲು ದಾರಿಯೇ ಅಧ್ಯಾತ್ಮಿಕತೆ

The current image has no alternative text. The file name is: Sharadruthu.jpg

“ಸುಖ-ದುಃಖದಿಂದ ಕೂಡಿದ ಬದುಕನ್ನು ಸಮತೋಲನದಲ್ಲಿಡಲು ದಾರಿಯೇ ಅಧ್ಯಾತ್ಮಿಕತೆ”
ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ‘ಶರದೃತು ಸಂಸ್ಕಾರ ಶಿಬಿರ’ವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ಶರದೃತುವಿನಲ್ಲಿ ಪರಿಶುದ್ಧವಾದ ವಾತಾವರಣವನ್ನು ಕಾಣಬಹುದು. ನಮ್ಮ ಮನಸ್ಸು ಪರಿಶುದ್ಧವಾಗಿರಬೇಕು. ಪ್ರಪಂಚವು ಪಂಚಭೂತಗಳಿ0ದ ಕೂಡಿದೆ. ಆಕಾಶ ವಿಶಾಲವಾಗಿರುತ್ತದೆ. ಭೂಮಿ ತಾಳ್ಮೆಯಿಂದಿರುವುದು. ಅಗ್ನಿ ಕೆಟ್ಟದನ್ನು ಸುಡುವುದು. ಗಾಳಿ ವ್ಯಾಪಕವಾಗಿರುವುದು. ನೀರು ನಿರಂತರ ಹರಿಯುತ್ತಿರುವುದು. ಇವೆಲ್ಲವೂ ತನ್ನ ಧರ್ಮವನ್ನು ಮರೆಯುವುದಿಲ್ಲ. ನಾವು ಸಹ ಪ್ರಕೃತಿಯ ಜೊತೆಗೆ ಸಾಗಬೇಕಾದ ಅನಿವಾರ್ಯತೆ ಇದೆ. ಸಂಸ್ಕಾರ ನಮ್ಮಲ್ಲಿದ್ದರೆ ಸುಸಂಸ್ಕೃತಭರಿತರಾಗಬಹುದು. ಬದುಕು ಕನ್ನಡಿಯಿದ್ದಂತೆ. ಸುಖ-ದುಃಖದಿಂದ ಕೂಡಿದ ಬದುಕನ್ನು ಸಮತೋಲನದಲ್ಲಿಡುವ ದಾರಿಯೇ ಅಧ್ಯಾತ್ಮಿಕತೆ. ಯೋಗದಲ್ಲಿ ಆರೋಗ್ಯ ಅಡಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ೬ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ಮಕ್ಕಳಿಗೆ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠವು ಆಯೋಜಿಸಿದ ಶರದೃತು ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿದ್ದರು. ಸಂಪನ್ಮೂಲ ವ್ಯಕ್ತಿ, ಮಂಗಳೂರು ಸೈಂಟ್ ಆಗ್ನೇಸ್ ಶಾಲೆಯ ಶಿಕ್ಷಕ ನವೀನ್ ಅಡ್ಯಾರು, ಮೂರ್ಕಜೆ ಮೈತ್ರೇಯೀ ಗುರುಕುಲದ ಭಗಿನಿ ಪದ್ಮಾ, ಶಾಲಾ ನಾಯಕಿ ಕು| ನಿಶಾ, ನಾಯಕ ಮಾ| ರಕ್ಷಿತ್ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಸೇರಾಜೆ ಗಣಪತಿ ಭಟ್ ಪ್ರಸ್ತಾವನೆಗೈದರು. ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಶಿಬಿರಗೀತೆ ಹಾಡಿಸಿದರು. ಮೂರ್ಕಜೆ ಮೈತ್ರೇಯಿ ಗುರುಕುಲದ ಭಗಿನಿಯರು ಯೋಗಾಭ್ಯಾಸ ಮಾಡಿಸಿದರು. ಶಿಕ್ಷಕಿ ಶ್ರೀಮತಿ ಹೇಮಾವತಿ ವಂದಿಸಿ, ಶಿಕ್ಷಕಿ ಶ್ರೀಮತಿ ಅನಿತಾ ನಿರೂಪಿಸಿದರು.