“ಸಮಾಜದ ಗೊಂದಲಗಳಿಗೆ ಸ್ವಾರ್ಥವೇ ಮುಖ್ಯ ಕಾರಣ”
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಸಂದೇಶ
ನ.16: “ಧರ್ಮದ ನಡೆ ಸತ್ಯದ ನುಡಿ ಇದ್ದರೆ ಬದುಕು ಒಳ್ಳೆಯದಾಗಬಹುದು. ಕಷ್ಟ ಬಂದರೂ ಹೆದರಬಾರದು. ಎದುರಿಸುವಂತಹ ಛಲ ಬೇಕು. ಜಗತ್ತಿನ ಸೂಕ್ಷ್ಮತೆಯನ್ನು ಗಮನಿಸಬೇಕು. ಜ್ಞಾನದ ದೃಷ್ಟಿ ನಮ್ಮಲ್ಲಿರಬೇಕು. ಸ್ವಾರ್ಥದ ದೃಷ್ಟಿಯ ಬದಲು ನಿಸ್ವಾರ್ಥದ ಬದುಕು ನಮ್ಮದಾಗಲಿ. ಸಮಾಜದ ಗೊಂದಲಗಳಿಗೆ ಸ್ವಾರ್ಥವೇ ಮುಖ್ಯ ಕಾರಣ. ಒಳ್ಳೆಯ ವಿಚಾರಗಳನ್ನು ತೆಗೆದುಕೊಳ್ಳುವ ಗುಣ ನಮ್ಮದಾಗಲಿ. ಸಂಪತ್ತಿನ ಕ್ರೋಢೀಕರಣದಿಂದ ಅಪಾಯವಿದೆ. ಬದುಕಿನ ಪಾಠ ಸಿಕ್ಕಿದಾಗ ಜೀವನ ಪಾವನವಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ ಸಂಸ್ಕಾರ’ ಕಾರ್ಯಕ್ರಮದಲ್ಲಿ ಆಶೀರ್ವಚನಗೈದರು
ಕಡಬ ತಾಲೂಕಿನ ಯೋಜನೆಯ ಬಂಧುಗಳು ನಿರ್ವಹಿಸಿದ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ ಹಾಗೂ ಘಟಸಮಿತಿಯ ಪದಾಧಿಕಾರಿಗಳು ದೀಪ ಪ್ರಜ್ವಲಿಸಿದರು. ಕಡಬ ತಾಲೂಕಿನ ಸುಮಾರು 13 ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ರೂ.4,34,273.00 ಮೊತ್ತ ಲಾಭಾಂಶದ ಚೆಕ್ಕನ್ನು ಪೂಜ್ಯ ಸ್ವಾಮೀಜಿಯವರು ನೀಡಿ ಹರಸಿದರು.
ನಂತರ ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ ಜರಗಿದವು. ಪಂಜ ವಲಯ ಸಂಯೋಜಕಿ ಜಯಶ್ರೀ ಸ್ವಾಗತಿಸಿ, ಸವಣೂರು ವಲಯದ ಸೇವಾದೀಕ್ಷಿತೆ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಕಡಬ ವಲಯ ಸೇವಾದೀಕ್ಷಿತೆ ಸುಮನ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಸದಸ್ಯರು ಕುಣಿತ ಭಜನೆ, ನೃತ್ಯ ಪ್ರದರ್ಶಿಸಿದರು.