ಸಂತ ಸಮಾಜಮುಖಿಯಾಗಿದ್ದಾಗ ಎಲ್ಲರಿಗೆ ಹಿತವಾಗುತ್ತದೆ

ವಿಟ್ಲ: ಸಂತ ಸಮಾಜಮುಖಿಯಾಗಿದ್ದಾಗ ಎಲ್ಲರಿಗೆ ಹಿತವಾಗುತ್ತದೆ. ದೀನರ ಸೇವೆಯಿಂದ ಭಗವಂತ ಸಂತೃಪ್ತನಾಗಿ ಅನುಗ್ರಹಿಸುತ್ತಾನೆ. ಭಾವನೆ ತುಂಬಿಕೊಂಡ ಸಂಗೀತ ಸಾಹಿತ್ಯ ಸೇರಿಕೊಂಡು ಭಾರತವಾಗಿದೆ. ನಮ್ಮ ಎಂಬ ಭಾವನೆಯಲ್ಲಿ ಕೆಲಸ ಕಾರ್ಯಗಳು ನಡೆಯಬೇಕು. ಆಧ್ಯಾತ್ಮವಿದ್ದಲ್ಲಿ ದ್ವೇಷಭಾವ ಇರಲು ಸಾಧ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಶ್ರೀ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಫೆ.6 ಮತ್ತು 7 ರಂದು 25ನೇ ವರ್ಷದ ವಾರ್ಷಿಕ ಉತ್ಸವವಾದ ತುಳುನಾಡ ಜಾತ್ರೆ- ಶ್ರೀಒಡಿಯೂರುರಥೋತ್ಸವ ಅಂಗವಾಗಿ ನಡೆದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು.

ಪಕೃತಿಯಲ್ಲಿ ಆರೋಗ್ಯ ಕಾಪಾಡುವ ಶಕ್ತಿಯಿದ್ದು, ಬಳಸಿಕೊಳ್ಳುವ ಮನೋಭಾವ ಬರಬೇಕಾಗಿದೆ. ಅತಿಥಿಗಳ ಸತ್ಕಾರ ಉತ್ತಮವಾಗಿ ನಡೆದಾಗ ಸಭೆ ಯಶಸ್ಸಿಯಾಗುತ್ತದೆ. ದೇವರು ಎರಡು ಗ್ರಾಮಗಳ ಬೇಟಿಯನ್ನು ರಥೋತ್ಸವದ ಮೂಲಕ ನಡೆಯಲಿದೆ. 12ಕಿಮೀ ರಥ ಎಳೆಯುವುದು ವೈಭವದಿಂದ ನಡೆಬೇಕು. ತುಳು ಸಾಹಿತ್ಯ ಸಮ್ಮೇಳನದ ಬೆಳ್ಳಿ ಹಬ್ಬ ಕಾರ್ಯಕ್ರಮ ಸಂಪನ್ನವಾಗಲಿದೆ. ಆಧ್ಯಾತ್ಮ ಕೇಂದ್ರ ಲೋಕಾರ್ಪಣೆಯ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ವಿವಿಧ ಸಮಿತಿಗಳನ್ನು ರಚಿಸಲಾಯಿತು. ಫೆ.4ರಂದು ಹೊರೆಕಾಣೆಕೆ ಸಮರ್ಪಣೆಯ ಕಾರ್ಯ ನಡೆಯಲಿದೆ.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ, ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಪ್ರಮುಖರಾದ ವಸಂತ ಕುಮಾರ್ ಪೆರ್ಲ, ಕದ್ರಿ ನವನೀತ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಲೋಕನಾಥ ಶೆಟ್ಟಿ, ವೆಂಕಟ್ರಮಣ ಹೊಳ್ಳ, ಲೀಲಾಕ್ಷ ಕರ್ಕೇರ, ಸುಧಾಕರ ಪೂಂಜಾ ಮತ್ತಿತರರು ಉಪಸ್ಥಿತರಿದ್ದರು.

ಯಶವಂತ ವಿಟ್ಲ ಸ್ವಾಗತಿಸಿದರು. ಸಂತೋಷ್ ಭಂಡಾರಿ ವಂದಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.