ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವ


“ನಾಗಾರಾಧನೆಯಲ್ಲಿ ಆಧ್ಯಾತ್ಮದ ಮೂಲ ವಿಚಾರ ಅಡಗಿದೆ”
ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವದ ಸುಸಂದರ್ಭ ಪೂಜ್ಯ ಶ್ರೀಗಳವರಿಂದ ನಾಗರ ಪಂಚಮಿಯ ಶುಭಸಂದೇಶ
ಜುಲೈ, ೨೯: “ನಾಗರಾಧನೆಯಲ್ಲಿ ಪರಿಶುದ್ಧತೆ ಕಾಪಾಡಬೇಕು. ಭಕ್ತಿಯಿಂದ ವ್ಯಕ್ತಿ ಧಾರ್ಮಿಕನಾಗುತ್ತಾನೆ. ಭಾವನೆಗಳಿಗೆ ಅನುಗುಣವಾಗಿ ಆರಾಧನೆಗಳು ನಡೆಯುತ್ತದೆ. ಪ್ರಕೃತಿಯಲ್ಲಿ ಪರಮಾತ್ಮನ ಅಸ್ತಿತ್ವವನ್ನು ಕಾಣುವುದೇ ಆರಾಧನೆ. ಸಮಾಜವನ್ನು ಬೆಸೆಯುವ ಚುಂಬಕ ಶಕ್ತಿ ಆಧ್ಯಾತ್ಮಕ್ಕಿದೆ. ವಿಜ್ಞಾನ ತಾಂತ್ರಿಕತೆ ಮುಂದುವರಿಯುತ್ತಿದ್ದ0ತೆ ಜನರಲ್ಲಿ ಆಧ್ಯಾತ್ಮಿಕತೆಯು ಬೆಳೆಯಬೇಕು. ಪ್ರೀತಿ ಭಾವದ ಶಕ್ತಿ ಅಪಾರ. ಪ್ರಕೃತಿಯ ಬಗ್ಗೆ ಪ್ರೀತಿ ಎಲ್ಲರಲ್ಲಿ ಬೇಕು. ಧರ್ಮ ಬದುಕಿನ ತಾಯಿಬೇರು. ದೇವತಾರಾಧನೆಯ ಮೂಲಕ ಪ್ರಕೃತಿಯ ಉಳಿವು ನಮ್ಮಿಂದಾಗಲಿ. ನಾಗಾರಾಧನೆಯಲ್ಲಿ ಆಧ್ಯಾತ್ಮದ ಮೂಲ ವಿಚಾರ ಅಡಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವ-ಸಾರ್ವಜನಿಕ ಆಶ್ಲೇಷ ಬಲಿಪೂಜೆ ಸಂದರ್ಭ ಶುಭಸಂದೇಶ ನೀಡಿದರು.
ಸಾಧ್ವೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಬೆಳಿಗ್ಗೆ ಆರಾಧ್ಯ ದೇವರಿಗೆ ಮಹಾಪೂಜೆ, ಶ್ರೀ ಗಣಪತಿ ಹವನ, ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಬಳಿಕ ಸಾಮೂಹಿಕ ಆಶ್ಲೇಷ ಬಲಿಪೂಜೆ ಆರಂಭಗೊಂಡಿತು. ಮಧ್ಯಾಹ್ನ ಕಲ್ಪೋಕ್ತ ಪೂಜೆ, ಮಹಾಪೂಜೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಹಾಸಂತರ್ಪಣೆ ನಡೆಯಿತು.
ಮಧ್ಯಾಹ್ನ ೨ಗಂಟೆಯಿ0ದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ರಾಮ ಯಕ್ಷ ಯಜ್ಞ ಅಭಿಯಾನ ಸಮಿತಿ ಮಂಗಳೂರು ಇವರಿಂದ ಶ್ರೀ ಡಿ. ಮನೋಹರ ಕುಮಾರ್ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ‘ಶ್ರೀ ರಾಮ ಪಟ್ಟಾಭಿಷೇಕ’ ಯಕ್ಷಗಾನ ಬಯಲಾಟ ನಡೆಯಿತು.
ರಾತ್ರಿ ಭಜನೆ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.