ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆಯ ಸಂದರ್ಭದಲ್ಲಿ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರವನ್ನು ಲೋಕರ್ಪಣೆಗೊಳಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ಆಧ್ಯಾತ್ಮಿಕ ಕೇಂದ್ರದ ಮೂಲಕ ಆಧ್ಯಾತ್ಮಿಕ ಮೌಲ್ಯಗಳನ್ನು
ತುಂಬುವ ಕಾರ್ಯ ನಡೆಯಲಿದೆ”


ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆಯ ಸಂದರ್ಭದಲ್ಲಿ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರವನ್ನು ಲೋಕರ್ಪಣೆಗೊಳಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಫೆ.೬: “ಭಾರತ ದೇಶದ ಆಂತರ್ಯವೇ ಅಧ್ಯಾತ್ಮ. ಅಧ್ಯಾತ್ಮದಿಂದ ಭಾರತದ ಮೌಲ್ಯ ವರ್ಧನೆ ಸಾಧ್ಯ. ಬದುಕಿನಲ್ಲಿ ಆಧ್ಯಾತ್ಮಿಕ ಶಿಕ್ಷಣವನ್ನು ಅಳವಡಿಸಿಕೊಂಡಾಗ ನಾವು ವಿಸ್ತೃತವಾಗಿ ಬೆಳೆಯಲು ಸಾಧ್ಯವಿದೆ. ಧರ್ಮ, ಸಂಸ್ಕೃತಿಯ ತುಂಬಿದ ದೇಶ ಭಾರತ. ಎಲ್ಲ ಸಮಸ್ಯೆಗಳಿಗೆ ಅಧ್ಯಾತ್ಮದಿಂದ ಪರಿಹಾರವಿದೆ. ಸಮಾಜದಲ್ಲಿ ಕ್ಷೀಣವಾಗುತ್ತಿರುವ ಆಧ್ಯಾತ್ಮಿಕ ಮೌಲ್ಯಗಳನ್ನು ತುಂಬುವ ಕಾರ್ಯ ಈ ಆಧ್ಯಾತ್ಮಿಕ ಕೇಂದ್ರದ ಮೂಲಕ ಆಗಲಿದೆ. ತನ್ನನ್ನು ತಾನು ಅರಿತುಕೊಳ್ಳುವುದೇ ಅಧ್ಯಾತ್ಮ. ಅರ್ಪಣಾ ಭಾವದ ಸೇವೆ ನಮ್ಮಲ್ಲಿರಬೇಕು. ಅಧ್ಯಾತ್ಮದ ಚಿಂತನೆ ನಮ್ಮಲ್ಲಿ ಮೂಡಬೇಕು. ಸನಾತನ ಹಿಂದೂ ಧರ್ಮದ ಉಳಿವಿಗೆ ನಾವೆಲ್ಲರೂ ಕಟಿಬದ್ಧರಾಗಬೇಕು. ಅಧ್ಯಾತ್ಮ ಕೇಂದ್ರದ ಮೂಲಕವಾಗಿ ಅಧ್ಯಾತ್ಮದ ಬಗ್ಗೆ ಒಲವು ಇರುವವರಿಗೆ ನೈತಿಕ, ಯೋಗ, ಶಿಕ್ಷಣ ಕೊಡುವ ಕೆಲಸ ಮಾಡಲಾಗುವುದು. ಆ ಮೂಲಕ ಮಾನವನ ಬದುಕಿಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗುವುದು” ಎಂದು ಶ್ರೀ ಸಂಸ್ಥಾನದಲ್ಲಿ ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆಯ ಸಂದರ್ಭದಲ್ಲಿ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರವನ್ನು ಲೋಕರ್ಪಣೆಗೊಳಿಸಿ, ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯೀಯವರು ಆಶಯಗೀತೆ ಹಾಡಿದರು. ವಿಶೇಷ ಆಹ್ವಾನಿತರಾದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ ಇವರು ಮಾತನಾಡಿ “ಒಡಿಯೂರು ಶ್ರೀಗಳ ಸಾಮಾಜಿಕ ಕಳಕಳಿ ಅನನ್ಯವಾದುದು. ಸಂಸ್ಕೃತಿ – ಸಂಸ್ಕಾರ ಉಳಿಸುವ ಕೆಲಸ ಎಲ್ಲರಿಂದ ಆಗಬೇಕಿದೆ. ಇಂತಹ ಸಂಸ್ಕಾರ ಕೇಂದ್ರಗಳು ನಮ್ಮ ಬಾಳಿಗೆ ಬೆಳಕಾಗಲಿದೆ. ನಮ್ಮೊಳಗಿನ ಧ್ವೇಷ ಭಾವ ದೂರವಾಗಿ ಎಲ್ಲರಲ್ಲೂ ಪ್ರೀತಿ ಭಾವ ಮೂಡಬೇಕು. ಸಂಸ್ಕೃತಿ – ಸಂಸ್ಕಾರವನ್ನು ಉಳಿಸಿ ದೇಶ ಕಟ್ಟುವ ಕೆಲಸ ಮಕ್ಕಳಿಂದ ಆಗಲಿದೆ. ಅಂತಹ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕೆಲಸ ಕ್ಷೇತ್ರದಿಂದ ಆಗುತ್ತಿರುವುದು ಸಂತಸ ತಂದಿದೆ” ಎಂದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಂಗಳೂರು ವಲಯಾಧ್ಯಕ್ಷ ಶ್ರೀ ಜಿತೇಂದ್ರ ಎಸ್. ಕೊಟ್ಟಾರಿ ಇವರು ಮಾತನಾಡಿ ದೇಶದ ಬಗ್ಗೆ ಚಿಂತನೆ ಇರುವ ಕ್ಷೇತ್ರವಿದ್ದರೆ ಅದು ಒಡಿಯೂರು ಕ್ಷೇತ್ರ. ನಮ್ಮ ದೇಶದ ಅದ್ಯಾತ್ಮಿಕ ಶಕ್ತಿ ಅಪಾರವಾದುದು. ಹಿಂದೂ ಧರ್ಮ ಪವಿತ್ರವಾದುದು. ಪ್ರತಿಯೊಂದರಲ್ಲೂ ದೇವರನ್ನು ಕಾಣುವವರು ನಾವುಗಳು. ಆಧ್ಯಾತ್ಮಿಕ ಜಾಗೃತಿ ಮಾಡುವ ಕೆಲಸ ಶ್ರೀ ಸಂಸ್ಥಾನದಿAದ ಆಗುತ್ತಿರುವುದು ಸಂತಸ ತಂದಿದೆ” ಎಂದರು.
ಜಮೈಕಾ ಕಿಂಗ್‌ಸ್ಟನ್‌ನ ಖ್ಯಾತವೈದ್ಯ ಡಾ. ರಮಾನಂದ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಶ್ರೀ ಹರೀಶ್ ಶೆಟ್ಟಿ ಐಕಳ, ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ.ಶೆಟ್ಟಿ ಚೆಂಬೂರು, ಕಣಂಜಾರ್ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ಕಣಂಜಾರ್ ವಿಕ್ರಮ ಹೆಗ್ಡೆ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಅಧ್ಯಕ್ಷ ಶ್ರೀ ದಾಮೋದರ ಎಸ್. ಶೆಟ್ಟಿ, ಮಂಗಳೂರು ಲೋಟಸ್ ಪ್ರಾಪರ್ಟೀಸ್‌ನ ಆಡಳಿತ ಪಾಲುದಾರ ಶ್ರೀ ಸಂಪತ್ ಕುಮಾರ್ ಶೆಟ್ಟಿ, ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಶ್ರೀ ಸಂತೋಷ್ ಹೆಗ್ಡೆ, ಉದ್ಯಮಿ ಶ್ರೀ ದಯಾನಂದ ಹೆಗ್ಡೆ ಮುಲುಂಡ್, ಒಡಿಯೂರು ಶ್ರೀ ಯುವಸೇವಾ ಬಳಗ ಮುಂಬೈ ಸಮಿತಿಯ ಅಧ್ಯಕ್ಷ ಡಾ. ಅದಿಪ್ ಕೆ.ಶೆಟ್ಟಿ, ಉದ್ಯಮಿ ಭರತ್‌ಭೂಷಣ್ ಮಂಗಳೂರು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರರತ್ನ ಶ್ರೀ ಎ. ಸುರೇಶ್ ರೈ, ಒಡಿಯೂರು ಶ್ರೀ ವಜ್ರಮಾತ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ ಉಪಸ್ಥಿತರಿದ್ದರು.
ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಸ್ವಾಗತಿಸಿ, ತುಳು ಸಾಹಿತ್ಯ ಸಮ್ಮೇಳನದ ಸಂಚಾಲಕ ಶ್ರೀ ನವನೀತ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ಸಂಚಾಲಕ ಶ್ರೀ ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು.