“ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ” – ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶರದೃತು ಸಂಸ್ಕಾರ ಶಿಬಿರ 2021 ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ

ಅ.11: “ಮಕ್ಕಳೆಲ್ಲರೂ ಸಾಮಾನ್ಯರಲ್ಲ, ಅಸಾಮಾನ್ಯರು. ಭವ್ಯ ಭಾರತ ನಿರ್ಮಾಣದ ರೂವಾರಿಗಳು. ದೇಶ ಪ್ರೇಮ ಹೇಗೆ ಬೆಳೆಸಿಕೊಳ್ಳಬೇಕು? ಬದುಕನ್ನು ರೂಪಿಸಲು ಬೇಕಾದಂತಹ ವಿಚಾರಗಳು ತಿಳಿಯಬೇಕಾದರೆ ಸಂಸ್ಕಾರ ಶಿಕ್ಷಣ ಅಗತ್ಯ. ಆ ಮೂಲಕ ಆದರ್ಶ ರಾಷ್ಟ್ರ ನಿರ್ಮಾಣವಾಗಬಹುದು. ಸಂಸ್ಕøತಿಯ ಅಂತರ್ಯವೇ ಸಂಸ್ಕಾರ. ಮಾತು ಎಂದರೆ ವ್ಯಕ್ತಿತ್ವದ ಕೈಗನ್ನಡಿ. ವ್ಯಕ್ತಿತ್ವ ವಿಕಸನವೇ ಶಿಬಿರದ ಮುಖ್ಯ ಉದ್ದೇಶ. ಮಾತು ಮನಸ್ಸು ಹತ್ತಿರವಾಗಿರುವಂತದ್ದು. ಮನಸ್ಸಿನ ಭಾವನೆ ಮುಖದಲ್ಲಿ ಅನಾವರಣಗೊಳ್ಳುವುದು. ಹೃದಯದ ಮಾತಿನಿಂದ ಸಂತೋಷವಿದೆ. ಮುಗ್ಧ ಮನಸ್ಸಿಗೆ ಭಗವಂತನೂ ಮೆಚ್ಚಿಕೊಳ್ಳುತ್ತಾನೆ. ಅಂತಹ ಮನಸ್ಸನ್ನು ಮಕ್ಕಳಲ್ಲಿ ಕಾಣಬಹುದು. ಮನಶುದ್ಧಿಯ ಜೊತೆಗೆ ಕಲೆಯನ್ನು ಮೈಗೂಡಿಸಿಕೊಳ್ಳಿ. ಇಂತಹ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗುರುದೇವ ವಿದ್ಯಾಪೀಠದ ಆಶ್ರಯದಲ್ಲಿ ಜರಗಿದ ಮೂರು ದಿನಗಳ ಶರದೃತು ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನಗೈದರು.
6ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಆಯೋಜಿಸಿದ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ, ಮುಂಬೈ ಸಮಿತಿಯ ಅಧ್ಯಕ್ಷ ಶ್ರೀ ವಾಮಯ್ಯ ಬಿ.ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ, ಹಿರಿಯ ಪತ್ರಕರ್ತ ಶ್ರೀ ಯಶವಂತ ವಿಟ್ಲ, ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀ ಎ. ಜಯಪ್ರಕಾಶ್ ಶೆಟ್ಟಿ, ಶಾಲಾ ಹಳೆವಿದ್ಯಾರ್ಥಿಗಳಾದ ಕು| ಬಿಂದುಶ್ರೀ ಮೇಲಂಟ, ಕು| ಜಿತೇಶ್ ಶೆಟ್ಟಿ, ಕು| ಪ್ರತೀಕ್ಷಾ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಸ್ವಾಗತಿಸಿ ಪ್ರಸ್ತಾವನೆಗೈದರು. ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ಹಾಡಿದರು. ಶಿಕ್ಷಕಿ ಶ್ರೀಮತಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಭಾರತೀ ವಂದನಾರ್ಪಣೆಗೈದರು.