“ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕ”
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದ.ಕ. ವಿಟ್ಲ ಸ್ಥಳೀಯ ಸಂಸ್ಥೆಯ ಉತ್ಸವ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ದ.22: “ನಮ್ಮ ಬದುಕಿನಲ್ಲಿ ಶಿಸ್ತು ವಿಶೇಷವಾದ ಪಾತ್ರವನ್ನು ವಹಿಸುತ್ತದೆ; ವಹಿಸಬೇಕು. ಶಿಸ್ತಿನಿಂದಲೇ ಸ್ವಸ್ತಿ. ಶಿಸ್ತು ಇಲ್ಲದಿದ್ದರೆ ಬದುಕು ಬದುಕಾಗುವುದಿಲ್ಲ. ಬದುಕು ನಿಂತ ನೀರಾಗದೆ ನಿರಂತರ ಹರಿಯುವಂತಾಗಬೇಕು. ಬದುಕು ಸುಸೂತ್ರವಾಗಿ ನಡೆಯಬೇಕಿದ್ದರೆ ವ್ಯಕ್ತಿಯಲ್ಲಿ ವ್ಯಕ್ತಿತ್ವ ತುಂಬಿರಬೇಕು. ವ್ಯಕ್ತಿತ್ವವನ್ನು ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕ. ನಾಯಕತ್ವದಿಂದ ಕೂಡಿದ ನಾಯಕರಿರಬೇಕು. ಸೇವೆ, ನಂಬಿಕೆ, ರಾಷ್ಟಿçÃಯತೆಯನ್ನು ಬೆಳೆಸುವ ಉದ್ದೇಶವಿರಿಸಿಕೊಂಡ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ನಾಯಕತ್ವದ ಕೊರತೆಯನ್ನು ನೀಗಿಸುವ ಕೆಲಸ ಮಾಡುತ್ತಿದೆ. ಶಾಂತಿ, ನೆಮ್ಮದಿಗೆ ಪೂರಕವಾದ ಎಲ್ಲ ಸಂಪತ್ತು ಭಾರತ ದೇಶದಲ್ಲಿ ಅಡಗಿದೆ. ದೇವರಲ್ಲಿ ನಂಬಿಕೆ, ದೇಶ ಹಾಗೂ ಸಂಸ್ಕೃತಿಯಲ್ಲಿ ಪ್ರೀತಿಭಾವ ನಮ್ಮಲ್ಲಿರಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿವರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ವಿಟ್ಲ ಸ್ಥಳೀಯ ಸಂಸ್ಥೆಯ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನಗೈದರು.
ವಿಟ್ಲ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಶ್ರೀ ಸುದರ್ಶನ ಪಡಿಯಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶ್ರೀ ಜಯರಾಮ ಬಲ್ಲಾಳ್, ಶ್ರೀಮತಿ ಪುಷ್ಪ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶುಭಾಂಗಿ ಚಿಂದೆ, ಗೈಡ್ಸ್ ಶಿಕ್ಷಕಿ ಶ್ರೀಮತಿ ನೀರಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ಪ್ರತೀಪ್ ಸ್ವಾಗತಿಸಿ, ಸ್ಕೌಟ್ ಪ್ರತಿನಿಧಿ ಶ್ರೀ ನಾರಾಯಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜಯಶ್ರೀ ವಂದಿಸಿದರು.