“ಲೋಕದ ಉನ್ನತಿಗೆ ಸಹಕಾರಿಯ ಪಾತ್ರ ಮಹತ್ತರವಾದುದು”


ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಸೆ.೧೯: “ಲೋಕದ ಉನ್ನತಿಗೆ ಸಹಕಾರಿಯ ಪಾತ್ರ ಮಹತ್ತರವಾದದ್ದಾಗಿದೆ. ಸ್ವಾಭಿಮಾನಿ ಬದುಕಿಗೆ ಬೆಳಕು ಚೆಲ್ಲುವ ಕಾರ್ಯ ಸಹಕಾರಿ ಸಂಘಗಳಿ0ದ ಆಗುತ್ತಿದೆ. ಸಹಕಾರಿ ತತ್ತ್ವವು ಜೀವನ ತತ್ತ್ವವಾಗಿದೆ. ಸಿಬ್ಬಂದಿಗಳ ನಗುಮುಖದ ಸೇವೆ, ಸದಸ್ಯರುಗಳ ಸಹಕಾರ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಸಹಕಾರಿಯು ಸಮಾಜಕ್ಕೆ ಮುಖ ಮಾಡಿರುವುದರಿಂದ ಬೆಳವಣಿಗೆ ಸಾಧ್ಯವಾಗಿದೆ. ಬದುಕಿನ ಸೂತ್ರ ಸರಿಯಾಗಿದ್ದರೆ ಯಶಸ್ಸು, ಆದರ್ಶವಾದ ಕಾರ್ಯಕ್ಕೆ ಗೆಲುವು ಬಲು ಸುಲಭ” ಎಂದು ಪೂಜ್ಯ ಸ್ವಾಮೀಜಿಯವರು ಶ್ರೀ ಸಂಸ್ಥಾನದ ರಾಜಾಂಗಣದ ಆತ್ರೇಯ ಮಂಟಪದಲ್ಲಿ ಜರಗಿದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ೧೪ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಉಪಸ್ಥಿತರಿದ್ದರು.
ಸಹಕಾರಿಯ ಅಧ್ಯಕ್ಷ ಲ| ಎ. ಸುರೇಶ್ ರೈಯವರು ಮಾತನಾಡಿ ಪೂಜ್ಯ ಸ್ವಾಮೀಜಿಯವರ ಕನಸಿನ ಕೂಸಾಗಿರುವ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ತಮ್ಮೆಲ್ಲರ ಸಹಕಾರದಿಂದಾಗಿ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿದೆ. ಒಟ್ಟು ೨೩ ಶಾಖೆಯನ್ನು ಹೊಂದಿರುವ ಸಂಘದಲ್ಲಿ ವರ್ಷಾಂತ್ಯಕ್ಕೆ ೪೧,೪೮೧ ಸದಸ್ಯರಿದ್ದು, ರೂ.೨,೩೦,೪೪,೯೦೦ ಪಾಲು ಬಂಡವಾಳವನ್ನು ಹೊಂದಿದೆ. ರೂ. ೩೬೬.೬೩ ಕೋಟಿ ಠೇವಣಿ ಹೊಂದಿದೆ. ಒಟ್ಟು ರೂ.೨.೨೨೭ ಕೋಟಿ ವ್ಯವಹಾರ ನಡೆಸಿ ರೂ.೫.೫೦ ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ೨೧% ಡಿವಿಡೆಂಡ್ ನೀಡಲಾಗುವುದು. ಅಡಿಟ್ ವರ್ಗೀಕರಣದಲ್ಲಿ ಆರಂಭದ ದಿನಗಳಿಂದಲೇ ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಈಗಾಗಲೇ ಕೇಂದ್ರ ಕಚೇರಿ ಸೇರಿದಂತೆ ಆರು ಶಾಖೆಗಳು ಸ್ವಂತ ಕಟ್ಟಡದಲ್ಲಿದ್ದು, ಪುತ್ತೂರು ಶಾಖೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಜಾಗ ಖರೀದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೆಲವು ಕಡೆಗಳಲ್ಲಿ ಶಾಖೆಯನ್ನು ತೆರೆಯಲಾಗುವುದು ಎಂದರು.
೨೦೨೪-೨೫ನೇ ಸಾಲಿನಲ್ಲಿ ವ್ಯವಹಾರದಲ್ಲಿ ಪ್ರಥಮ ಸ್ಥಾನ ಪಡೆದ ವಿಟ್ಲ ಶಾಖೆ, ಹೆಚ್ಚು ಠೇವಣಿ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಪಡೆದ ಬಿಜೈ ಶಾಖೆ, ಸಾಲ ವಿತರಣೆಯಲ್ಲಿ ಪ್ರಥಮ ಸ್ಥಾನ ಪಡೆದ ಉಡುಪಿ ಶಾಖೆಯ ವ್ಯವಸ್ಥಾಪಕರನ್ನು ಗುರುತಿಸಲಾಯಿತು.
ವಿಕಾಸವಾಹಿನಿ ಸ್ವ-ಸಹಾಯ ಸಂಘದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಲೆಕ್ಕ ಪರಿಶೋಧಕರಾದ ಸಿಎ | ರಾಮ್‌ಮೋಹನ್ ರೈ, ನಿರ್ದೇಶಕರಾದ ಶ್ರೀ ವೇಣುಗೋಪಾಲ ಮಾರ್ಲ, ಶ್ರೀ ತಾರನಾಥ ಶೆಟ್ಟಿ, ಶ್ರೀ ಲೋಕನಾಥ ಜಿ. ಶೆಟ್ಟಿ, ಶ್ರೀಮತಿ ಶಾರದಾಮಣಿ ಎಸ್.ರೈ, ಶ್ರೀಮತಿ ಸರಿತಾ ಅಶೋಕ್, ಶ್ರೀ ಮೋನಪ್ಪ ಪೂಜಾರಿ ಕೆರೆಮಾರ್ ಕಾವು, ಶ್ರೀ ಸೋಮಪ್ಪ ನಾಯ್ಕ್ ಕಡಬ, ಶ್ರೀ ಗಣೇಶ್ ಅತ್ತಾವರ, ಶ್ರೀ ಭವಾನಿಶಂಕರ ಶೆಟ್ಟಿ, ಶ್ರೀ ಅಶೋಕ್ ಕುಮಾರ್ ಯು.ಎಸ್., ಶ್ರೀ ಜಯಪ್ರಕಾಶ್ ರೈ ಎನ್., ಶ್ರೀ ಕರುಣಾಕರ ಜೆ. ಉಚ್ಚಿಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕ ಶ್ರೀ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದಯಾನಂದ ಶೆಟ್ಟಿ ಬಾಕ್ರಬೈಲು ವರದಿ ವಾಚಿಸಿದರು. ನಿರ್ದೇಶಕ ಶ್ರೀ ಎಂ. ದೇವಪ್ಪ ನಾಯಕ್ ಉಪ್ಪಳಿಗೆ ವಂದಿಸಿದರು. ಪುತ್ತೂರು ಶಾಖೆಯ ವ್ಯವಸ್ಥಾಪಕಿ ಶ್ರೀಮತಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.