“ಮೋಹ ಕ್ಷಯವಾಗದೆ ಮೋಕ್ಷ ದೊರಕದು” – ಒಡಿಯೂರು ಶ್ರೀ

 

“ಬದುಕಿನಲ್ಲಿ ಬುದ್ಧಿ-ಸಿದ್ಧಿ, ಲಾಭ-ಶುಭಕ್ಕೆ ಗಣಪತಿ ಆರಾಧನೆ ಅಗತ್ಯ. ಜಲಾಧಿಪತಿಯಾದಂತಹ ಗಣಪತಿಯನ್ನು ಅರಸಿನ, ಗೋಮಯದಲ್ಲಿಯೂ ತಯಾರು ಮಾಡಿ ಆರಾಧಿಸುವುದಿದೆ. ನಮ್ಮಲ್ಲಿ ದೇವತ್ವವನ್ನು ತುಂಬಿಸಿಕೊಳ್ಳುವುದೇ ಆರಾಧನೆಯ ಉದ್ದೇಶ. ಅರ್ಥ, ಕಾಮದ ಮೋಹದಿಂದಾಗಿ ಧರ್ಮವನ್ನು ಮರೆಯಬಾರದು. ಅದು ನಮ್ಮನ್ನು ಅಧಃಪತನಕ್ಕೆ ಕೊಂಡೊಯ್ಯುತ್ತದೆ. ಮೋಹ ಕ್ಷಯವಾಗದೆ ಮೋಕ್ಷ ದೊರಕದು. ನಮ್ಮನ್ನೆಲ್ಲ ಸಂರಕ್ಷಣೆ ಮಾಡುವವನೇ ಗಣಪತಿ. ವಿಶ್ವವನ್ನೇ ಆವರಿಸಿರುವಂತಹ ರೋಗ ಒಂದೆಡೆಯಾದರೆ ಆಡಂಬರ ಬೇಡ, ಭಕ್ತಿ ತುಂಬಿದ ಆರಾಧನೆ ಬೇಕೆನ್ನುವ ಇಚ್ಛೆ ಗಣಪತಿಯದಾಗಿದೆ. ಗಣಪತಿ ತತ್ತ್ವ ಶ್ರೇಷ್ಠವಾದದ್ದು” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಜರಗಿದ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದು, ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಹವನ ನೆರವೇರಿತು.
ಈ ಸುಸಂದರ್ಭ ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ ಜೈ ಗುರುದೇವ ಕಲಾಕೇಂದ್ರ, ಒಡಿಯೂರು ನಾಲ್ಕು ವರ್ಷದೊಳಗಿನ ಪುಟ್ಟ ಮಕ್ಕಳಿಗೆ ಆಯೋಜಿಸಿದ್ದ ಆನ್‍ಲೈನ್ ‘ಮುದ್ದುಕೃಷ್ಣ ವೇಷ ಭಾವಚಿತ್ರ ಪುರಸ್ಕಾರ 2021’ರ ವಿಜೇತರನ್ನು ಪುರಸ್ಕರಿಸಲಾಯಿತು. ಸುಮಾರು 498 ಪುಟಾಣಿಗಳು ಭಾಗವಹಿಸಿದ್ದು, ಪ್ರಥಮ ಲಿತೀಕ್ಷಾ ಬಿ. ಬೆಂಗಳೂರು, ದ್ವಿತೀಯ ವಿವನ್ ಎನ್.ಶೆಟ್ಟಿ ಸಜಿಪಪಡು ಹಾಗೂ ಪಾರ್ಥ ಭಟ್ ಚೊಕ್ಕಾಡಿ, ತೃತೀಯ ರಿಶಿಕಾ ನರಿಮೊಗರು ಹಾಗೂ ಆದ್ಯಾ ಎಸ್.ಶೆಟ್ಟಿ ಕನ್ಯಾನ ಪುರಸ್ಕಾರ ಪಡೆದರು. ಪ್ರೋತ್ಸಾಹಕ ಪುರಸ್ಕಾರ ಪಡೆದ ಆರುಶ್ ಎ. ಯೆಯ್ಯಾಡಿ, ಸಾನ್ವಿ ಎ.ಸೇರ್ವೆಗಾರ್, ಸ್ಕಂದ ಜಿ.ಭಟ್ ಪೋಲ್ಯ, ಸ್ಮಯ ಸನತ್ ವರ್ಕಾಡಿ, ಸಾಯಿಶ್ ಹೇಮಂತ್ ಶೇಟ್ ಕೊಡ್ಮಣ್, ಅವ್ಯುಕ್ತ ಹರೀಶ್ ಕದ್ರಿ, ದಿವಿತ್ ಅಡ್ಯಾರ್, ಆರ್ವಿಕ್ ರಿಯಾಂಶ್ ಮೂರ್ಜೆ, ಗಿಯಾನ ರೈ ಬೆಂಗಳೂರು, ದಿಯಾ ಜೆ.ಕುಲಾಲ್ ಪೆರ್ಣೆ, ತ್ರಿಶಾನ್ ಶೆಟ್ಟಿ ಬಳ್ಳೂರು ಇವರೆಲ್ಲರಿಗೂ ಪ್ರಮಾಣ ಪತ್ರ, ಫಲ ಮಂತ್ರಾಕ್ಷತೆಗಳನ್ನಿತ್ತು ಪೂಜ್ಯ ಶ್ರೀಗಳವರು ಹರಸಿದರು.
ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಒಡಿಯೂರು, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು ಮತ್ತಿತರರು ಉಪಸ್ಥಿತರಿದ್ದರು.