“ಮನಸ್ಸಿನ ಸಮತೋಲನಕ್ಕೆ ಶ್ರೇಯಸ್ಸಿನ ಮಾರ್ಗವೇ ಸೂಕ್ತ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸoಸ್ಕಾರ’ ಕಾರ್ಯಕ್ರಮದಲ್ಲಿ
ಪೂಜ್ಯ ಒಡಿಯೂರು ಶ್ರೀಗಳವರಿಂದ ಆಶೀರ್ವಚನ
“ಉಪನಿಷತ್ತು ತಿಳಿಸಿದಂತೆ ಬದುಕಿನಲ್ಲಿ ಶ್ರೇಯಸ್ಸು ಮತ್ತು ಪ್ರೇಯಸ್ಸು ಎಂಬ ಎರಡು ಮಾರ್ಗಗಳಿವೆ. ಇಂದ್ರಿಯ ಗೋಚರವಾದದ್ದು ಪ್ರೇಯಸ್ಸು. ಇದರಿಂದ ಅಪಾಯವಿದೆ. ಬೋಗದ-ಲೌಕಿಕ ಬದುಕು ಎನ್ನುತ್ತಾರೆ. ಅತಿಯಾದ ಮೋಹವೂ ಸಲ್ಲದು. ಅಲೌಕಿಕವಾದ ಅಧ್ಯಾತ್ಮ ಬದುಕೇ ಶ್ರೇಯಸ್ಸಿನ ಮಾರ್ಗ. ಅದು ಶಾಶ್ವತವಾದುದು. ಅದು ಭಗವಂತನ ಅನುಸಂಧಾನಕ್ಕೆ ಪೂರಕವಾಗಿರುತ್ತದೆ. ಮನಸ್ಸಿನ ಸಮತೋಲನಕ್ಕೆ ಶ್ರೇಯಸ್ಸಿನ ಮಾರ್ಗ ಸೂಕ್ತ. ಇದಕ್ಕೆಲ್ಲ ಸಂಸ್ಕಾರ ಪ್ರಾಮುಖ್ಯವಾಗಿ ಬೇಕು. ಅದು ಮನೆಯಿಂದಲೇ ಸಿಗಬೇಕು. ಬದುಕಿನಲ್ಲಿ ಸಂಸ್ಕಾರವೇ ಒಂದು ಭವ್ಯ ಸಂಪತ್ತು. ಆರ್ಥಿಕ ಗಳಿಕೆ, ಕ್ರೋಢೀಕರಣವೇ ಮುಖ್ಯವಲ್ಲ. ಸಂಸ್ಕಾರ ತುಂಬಿದ ಜೀವನವೇ ಶ್ರೇಷ್ಠ. ಜ್ಞಾನಶಕ್ತಿ, ಕ್ರಿಯಾಶೀಲತೆ, ಇಚ್ಛಾಶಕ್ತಿಯಿದ್ದರೆ ಯಶಸ್ಸು ನಿಶ್ಚಿತ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ ಸಂಸ್ಕಾರ’ ಮಾಸಿಕ ಕಾರ್ಯಕ್ರಮದಲ್ಲಿ ಆಶೀರ್ವಚನಗೈದರು.
ಪುತ್ತೂರು ತಾಲೂಕಿನ ಯೋಜನೆಯ ಬಂಧುಗಳು ನಿರ್ವಹಿಸಿದ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊoಡಿತು. ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಮಂಗಳೂರು ತಾಲೂಕು ಯೋಜನಾ ನಿರ್ದೇಶಕ ಕಿರಣ್ ಉರ್ವ, ಈಶ್ವರಮಂಗಲ ವಲಯ ಅಧ್ಯಕ್ಷ ಶಿವರಾಮ ಪೂಜಾರಿ ಕೆರೆಮಾರ್, ದೇಲಂಪಾಡಿ ಘಟಸಮಿತಿ ಅಧ್ಯಕ್ಷ ಸೀತಾರಾಮ ರೈ ಇವರುಗಳು ದೀಪ ಪ್ರಜ್ವಲಿಸಿದರು.
ಸುಮಾರು ೧೬ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ಲಾಭಾಂಶದ ಚೆಕ್ಕನ್ನು ಪೂಜ್ಯ ಸ್ವಾಮೀಜಿಯವರು ನೀಡಿ ಹರಸಿದರು.
ಆರಂಭದಲ್ಲಿ ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ ಜರಗಿದವು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಈಶ್ವರಮಂಗಲ ವಲಯ ಸಂಯೋಜಕಿ ಪ್ರೇಮಲತಾ ಎಸ್.ರೈ ಸ್ವಾಗತಿಸಿ, ಪುತ್ತೂರು ವಲಯ ಸಂಯೋಜಕಿ ಶಶಿ ಡಿ. ವಂದಿಸಿದರು. ಪುತ್ತೂರು ತಾಲೂಕು ಮೇಲ್ವಿಚಾರಕಿ ಸವಿತಾ ರೈ ಕಾರ್ಯಕ್ರಮ ನಿರೂಪಿಸಿದರು.
