‘ಭಗವಂತ ನೀಡಿದ ಆಯುಷ್ಯವನ್ನು ಸನ್ನಡತೆ-ಸತ್ಕರ್ಮದಲ್ಲಿ ಕಳೆಯೋಣ’- ಪೂಜ್ಯ ಶ್ರೀಗಳವರ ಜನ್ಮದಿನೋತ್ಸವದ ಪ್ರಯುಕ್ತ ಗುರುವಂದನಾ ಸಮಾರಂಭದಲ್ಲಿ – ಒಡಿಯೂರು ಶ್ರೀ ಆಶೀರ್ವಚನ
“ತ್ಯಾಗದ ಬದುಕಿನಲ್ಲಿ ನಿಜವಾದ ಸುಖವಿದೆ. ಬದುಕು ಬದುಕಾಗಲು ಅಧ್ಯಾತ್ಮ ಅಗತ್ಯ. ಧರ್ಮದ ಚೌಕಟ್ಟಿನಲ್ಲಿ ಶ್ರೇಯಸ್ಸಿನ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಭಗವಂತ ನೀಡಿದ ಆಯುಷ್ಯವನ್ನು ಸನ್ನಡತೆ, ಸತ್ಕರ್ಮದಲ್ಲಿ ಕಳೆಯಬೇಕು. ಆತ್ಮೋನ್ನತಿಯ ಜೊತೆಗೆ ಸಮಾಜೋನ್ನತಿಯೂ ಆಗಬೇಕು. ಆತ್ಮನಿಷ್ಠ ಸಂಸ್ಕøತಿಯಿಂದ ಯಾವುದೇ ಅಪಾಯ ಆಗದು. ಇಂದು ಆಟಿ ಅಮಾವಾಸ್ಯೆಯ ದಿನ. ಸಪ್ತವರ್ಣ(ಹಾಲೆ) ಮರದ ರಸದಲ್ಲಿ ಔಷಧೀಯ ಅಂಶವಿದೆ. ಬದುಕಿಗೆ ಭೀಮ ಬಲ ಬರಲು ಇಂತಹ ಆಚರಣೆಗಳ ಅಗತ್ಯವೂ ಇದೆ. ಕೊರೋನಾದ ಬಗ್ಗೆ ನಿರ್ಲಕ್ಷ್ಯ ಬೇಡ. ಭಯವೂ ಬೇಡ. ಜಾಗರೂಕರಾಗಿರೋಣ. ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀ ಸಂಸ್ಥಾನದ ಸಹಸಂಸ್ಥೆಗಳು ಹಾಗೂ ಗುರುಬಂಧುಗಳು ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವದಂಗವಾಗಿ ಆಯೋಜಿಸಿದ್ದ ಶ್ರೀ ಗುರುಪಾದುಕಾರಾಧನೆ-ಗುರುವಂದನಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೈದು ಶುಭಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಶ್ರೀ ಗುರುಪಾದುಕಾಧನೆಗೈದರು. ವೈದಿಕರಾದ ಶ್ರೀ ಶಿವ ಭಟ್ ಹಾಗೂ ಶ್ರೀ ನಂದನ ಭಟ್ ಅವರು ಸಹಕರಿಸಿದರು.
ಸರಕಾರದ ಕೋವಿಡ್ 19ರ ನಿಯಮದನ್ವಯ ಜರಗಿದ ಸರಳ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರ ತುಳು ಲಿಪಿಯ ಹಸ್ತಾಕ್ಷರದ ‘ಹನುಮಾನ್ ಚಾಲೀಸಾ’ ಹಾಗೂ ಶ್ರೀಮತಿ ರಾಜಶ್ರೀ ಟಿ.ರೈ ಪೆರ್ಲ ಇವರು ಬರೆದ ಮೂಲಿಕಾ ಗಿಡಗಳ ಪರಿಚಯದ ‘ಕಲ್ಪತರು’ ಎಂಬ ಕೃತಿಯನ್ನು ಪೂಜ್ಯ ಶ್ರೀಗಳವರು ಬಿಡುಗಡೆಗೊಳಿಸಿದರು.
ಸಮಾರಂಭದ ಆರಂಭದಲ್ಲಿ ಶ್ರೀ ಬೊಂಟಡ್ಕ ಚಂದ್ರಕಾಂತ ಭಟ್ ಅವರಿಂದ ಹರಿಕಥಾ ಸತ್ಸಂಗ -ಜರಗಿತು.
ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮುಂಬೈ ಸಮಿತಿಯ ಅಧ್ಯಕ್ಷ ಶ್ರೀ ವಾಮಯ್ಯ ಬಿ. ಶೆಟ್ಟಿ, ಮುಂಬೈ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಕೃಷ್ಣ ಎಲ್. ಶೆಟ್ಟಿ., ಕಾರ್ಯದರ್ಶಿಗಳಾದ ಶ್ರೀ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ, ಕೇಂದ್ರ ಸಮಿತಿಯ ಕೋಶಾಧಿಕಾರಿಗಳಾದ ಶ್ರೀ ಎ. ಸುರೇಶ್ ರೈ, ಕಾಸರಗೋಡು ಸಮಿತಿಯ ಅಧ್ಯಕ್ಷ ಶ್ರೀ ಕೆ.ಎನ್. ವೆಂಕಟರಮಣ ಹೊಳ್ಳ, ಕಾಟುಕುಕ್ಕೆ ಸಮಿತಿಯ ಅಧ್ಯಕ್ಷ ಶ್ರೀ ತಾರಾನಾಥ ರೈ ಪಡ್ಡಂಬೈಲ್‍ಗುತ್ತು, ಪುಣೆ ಸಮಿತಿಯ ಶ್ರೀ ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು, ತಿರುವನಂತಪುರದ ಶ್ರೀ ಅಜಿತ್‍ಕುಮಾರ್ ಪಂದಳಮ್, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್‍ಕುಮಾರ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಮುಂಬೈನ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ ಇವರುಗಳು ಉಪಸ್ಥಿತರಿದ್ದರು. ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.