“ಪ್ರೀತಿ-ವಿಶ್ವಾಸಕ್ಕೆ ಇನ್ನೊಂದು ಹೆಸರೇ ತುಳುವರು”೨೫ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ

“ತುಳುವರು ಮೃದು ಸ್ವಭಾವದ ವ್ಯಕ್ತಿತ್ವದವರು. ಪ್ರೀತಿ ವಿಶ್ವಾಸಕ್ಕೆ ಇನ್ನೊಂದು ಹೆಸರೇ ತುಳುವರು. ಕರಾವಳಿಗರಿಗೆ ಅವರದ್ದೇ ಆದ ಸ್ಥಾನಮಾನವಿದೆ. ಎಲ್ಲಾ ಕಡೆಗಳಿದಲೂ ತುಳು ಭಾಷೆಯ ಉಳಿವಿಗೆ ಪ್ರಯತ್ನವಾಗಬೇಕು. ಸಮ್ಮೇಳನದ ಉದ್ದೇಶವೇ ಸಮಾಜದ ಉನ್ನತಿಗೆ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ತುಳು ಭಾಷೆ ಮತ್ತು ತುಳು ಸಂಸ್ಕೃತಿ ವಿಶ್ವಮಾನ್ಯ. ತುಳುವರಿಗೆ ಎಲ್ಲೆಡೆಯೂ ಗೌರವವಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಹೆತ್ತವರ ಅತಿಯಾದ ಆಂಗ್ಲ ಭಾಷೆಯ ವ್ಯಾಮೋಹ ಮಕ್ಕಳಲ್ಲಿ ತುಳುವಿನ ಬಗೆಗಿನ ವ್ಯಾಮೋಹ ಕಡಿಮೆಯಾಗಲು ಕಾರಣ. ಆಂಗ್ಲ ಭಾಷೆಯೊಂದಿಗೆ ಮಕ್ಕಳಿಗೆ ತುಳುವಿನ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ತುಳು ಪರಂಪರೆ ಕೃಷಿಗೆ ಬಹಳಷ್ಟು ಒತ್ತುಕೊಟ್ಟಿದೆ. ಇಂಟರ್‌ನೆಟ್ ಯುಗದಲ್ಲಿ ನಾವಿದ್ದೇವೆ. ಆದರೆ ನಮ್ಮ ಇನ್ನರ್‌ನೆಟ್ಟನ್ನು ಮರೆಯದಿರೋಣ. ಅಂತರAಗವನ್ನು ಅರಳಿಸುವ ಮೂಲಕ ತುಳುವ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು. ತುಳು ಭಾಷೆಗೆ ಮಾನ್ಯತೆ ಸಿಗುವ ಜೊತೆಗೆ ಅದನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಕೆಲಸವಾಗಬೇಕು. ಎಲ್ಲರ ಸಹಕಾರದಿಂದ ತುಳುವಿನ ಉಳಿವು ಸಾಧ್ಯ” ಎಂದು ಶ್ರೀ ಸಂಸ್ಥಾನದ ರಾಜಾಂಗಣದ ಆತ್ರೇಯ ಮಂಟಪದಲ್ಲಿ ಜರಗಿದ ೨೫ನೇ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಮ್ಮೇಳಾಧ್ಯಕ್ಷ, ತುಳು-ಕನ್ನಡ ಸಾಹಿತಿ ಫ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷೀಯ ನುಡಿಗಳನ್ನಾಡಿ “ತುಳುನಾಡಿನಲ್ಲಿ ಧಾರ್ಮಿಕ, ಸಾಹಿತ್ತಿಕ ಚಟುವಟಿಕೆಗಳ ಮೂಲಕ ಭಾಷೆಯ ಜಾಗೃತಿ ಮೂಡಿಸಲಾಗುತ್ತದೆ. ನಾಲ್ಕು ಕಾಲ ಬದುಕುವ, ಉಳಿಯುವಂತಹ ಸಾಹಿತ್ಯ ರಚನೆಯಾಗಬೇಕು. ನೆಲಮೂಲದ ಗ್ರಾಮ ಸಂಸ್ಕೃತಿಯತ್ತ ಬರಹಗಾರರು ಗಮನಿಸಬೇಕು. ತುಳುವರನ್ನು ಓದಿನೆಡೆಗೆ ಆಕರ್ಷಿಸುವಂತಹ ರಚನಾತ್ಮಕ ಕೆಲಸಗಳು ಸಾಹಿತ್ಯದಲ್ಲಿ ನಡೆಯಬೇಕು. ಬಂಗಾರದ ಬಟ್ಟಲಾಗಿದ್ದ ತುಳುನಾಡು ಈಗ ಬರಡು ನೆಲವಾಗುತ್ತಿದೆ. ಯುವಕರು ಕೃಷಿ ತ್ಯಜಿಸಿ ಪೇಟೆ ಕಡೆಗೆ ಅಥವಾ ವಿದೇಶಕ್ಕೆ ತೆರಳುತ್ತಿರುವುದು ಬೇಸರದ ವಿಚಾರ. ಇಂದು ತುಳು ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಆಗುತ್ತಿದ್ದು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತುಳು ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ” ಎಂದು ವಿಷಾದಿಸಿದರು.
ಮುಖ್ಯ ಅತಿಥಿಗಳಾದ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಶ್ರೀ ಎ.ಸಿ. ಭಂಡಾರಿ ಮಾತನಾಡಿ “ತುಳು ಭಾಷೆಯ ಉಳಿವಿನ ಪ್ರಯತ್ನ ಎಲ್ಲೆಡೆಯಿಂದ ಆಗುತ್ತಿದೆ. ತುಳು ಭಾಷೆಗಿರುವ ಶಕ್ತಿ ಅಪಾರ. ಇನ್ನಷ್ಟು ತುಳು ಸಮ್ಮೇಳನಗಳು ನಡೆಯುವ ಮೂಲಕ ತುಳು ಭಾಷೆಗೆ ಮತ್ತಷ್ಟು ಪುಷ್ಠಿ ನೀಡುವ ಕೆಲಸವಾಗಲಿ” ಎಂದರು.
ತುಳು ತುಲಿಪು ಕಾರ್ಯಕ್ರಮದಲ್ಲಿ – ‘ತುಳುನಾಡ್‌ದ ಸಂತ ಪರಂಪರೆ’ ವಿಚಾರವಾಗಿ ಸಂಶೋಧಕ ಡಾ. ಎಸ್.ಆರ್. ಅರುಣ್‌ಕುಮಾರ್, ‘ತುಳುನಾಡ್‌ದ ಜಾನಪದ ಪರಂಪರೆ’ – ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ‘ತುಳುನಾಡ್‌ದ ಸಾಹಿತ್ಯ ಪರಂಪರೆ’ – ಶ್ರೀಮತಿ ಮಲ್ಲಿಕಾ ಜೆ.ರೈ ವಿಚಾರ ಮಂಡಿಸಿದರು.
ಸಾಧ್ವಿ ಶ್ರೀ ಮಾತಾನಾಂದಮಯೀ ಉಪಸ್ಥಿತರಿದ್ದರು. ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀ ಯೋಗೀಶ್ ಶೆಟ್ಟಿ ಜಪ್ಪು, ತುಳು ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಶ್ರೀ ಕದ್ರಿ ನವನೀತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತುಳುಸಿರಿ ಪ್ರಶಸ್ತಿ ಪ್ರಧಾನ:
ಇದೇ ಸಂದರ್ಭದಲ್ಲಿ ಪಾಡ್ದನ ಕಲಾವಿದೆ ಶ್ರೀಮತಿ ಶಾರದಾ ಯಾನೆ ಕರ್ಗಿ ಶೆಡ್ತಿ ಅಳದಂಗಡಿ, ತುಳು/ ಕನ್ನಡ ಸಿನೆಮಾ ನಿರ್ಮಾಪಕ ಶ್ರೀ ಪುಷ್ಪರಾಜ ರೈ ಮಲಾರುಬೀಡು, ಸಮಾಜ ಸೇವೆಗೆ ಶ್ರೀ ಹರೀಶ್ ಶೆಟ್ಟಿ ಮಾಡ, ಸಾವಯವ ಕೃಷಿಕ ಶ್ರೀ ಕೃಷ್ಣಪ್ಪ ಪುರುಷ ಕೇಪು, ಆರಕ್ಷಕ ಸೇವೆಗಾಗಿ ಶ್ರೀ ಪ್ರವೀಣ್ ರೈ ನಡುಕೂಟೇಲು, ಕೃಷಿ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಸೀತಮ್ಮ ಹಾಲೇಶ್ ಗೌಡ ಎಡಮಂಗಲ ಅವರಿಗೆ ‘ತುಳು ಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಪೂಜ್ಯ ಶ್ರೀಗಳವರು ಹರಸಿದರು.
ಪುಸ್ತಕ ಅನಾವರಣ:
ಸಮ್ಮೇಳನದಲ್ಲಿ ಪೂಜ್ಯ ಸ್ವಾಮೀಜಿಯವರ ಕೈಬರಹದ ತುಳುಲಿಪಿಯ ‘ಶ್ರೀಮದ್ಭಗವದ್ಗೀತಾ’ ಮತ್ತು ಡಾ. ವಸಂತಕುಮಾರ ಪೆರ್ಲ ಅವರ ಸಂಪಾದಕತ್ವದ ‘ಮಾಯಿಪ್ಪಾಡಿಯ ವೀರ ಪುಲ್ಕೂರು ಬಾಚ’ ತುಳು ಕೃತಿಗಳು ಬಿಡುಗಡೆಗೊಂಡಿತು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಕು| ಪ್ರತೀಕ್ಷ, ಒಡಿಯೂರು ಶ್ರೀ ಗುರುದೇವ ಐಟಿಐ ಕನ್ಯಾನ ಇದರ ಪ್ರಾಚಾರ್ಯ ಶ್ರೀ ಪ್ರವೀಣ್ ಕುಮಾರ್ ಎನ್., ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಪುತ್ತೂರು ಶಾಖಾ ವ್ಯವಸ್ಥಾಪಕಿ ಶ್ರೀಮತಿ ಪವಿತ್ರಾ ಪ್ರಸಾದ್ ಆಚಾರ್ಯ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪಿ.ಆರ್.ಒ. ಶ್ರೀ ಮಾತೇಷ್ ಭಂಡಾರಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕ ಶ್ರೀ ಶೇಖರ ಶೆಟ್ಟಿ ಬಾಯಾರ್, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ವಿಟ್ಲ ವಲಯ ಮೇಲ್ವಿಚಾರಕಿ ಶ್ರೀಮತಿ ಲೀಲಾ ಪಾದೆಕಲ್ಲು ಸನ್ಮಾನ ಪತ್ರ ವಾಚಿಸಿದರು.
ಕು| ನಿತ್ಯಶ್ರೀ ಎಸ್.ರೈ ಪ್ರಾರ್ಥನೆ ಹಾಡಿದರು. ತುಳುಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕರಾದ ಡಾ. ವಸಂತಕುಮಾರ್ ಪೆರ್ಲ ಪ್ರಸ್ತಾವನೆಗೈದು ಸ್ವಾಗತಿಸಿದರು. ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿ, ಶ್ರೀ ಮಾತೇಷ್ ಭಂಡಾರಿ ವಂದಿಸಿದರು.