ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಜರಗಿದ ಬೃಹತ್ ವೈದ್ಯಕೀಯ ಸೇವಾ ಶಿಬಿರ

“ರೋಗಿಯನ್ನು ದೂಷಿಸಬೇಡಿ; ರೋಗವನ್ನು ದೂಷಿಸಿ”
ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಜರಗಿದ ಬೃಹತ್ ವೈದ್ಯಕೀಯ ಸೇವಾ ಶಿಬಿರ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಜುಲೈ, ೧೩: “ಆರೋಗ್ಯದ ವಿಚಾರದಲ್ಲಿ ನಾವು ಜಾಗೃತರಾಗಿರಬೇಕು. ಋತುಗಳಿಗನುಗುಣವಾದ ಆಹಾರ ಸೇವನೆ ಆರೋಗ್ಯಕ್ಕೆ ಒಳಿತು. ರೋಗಿಯನ್ನು ದೂಶಿಸಬೇಡಿ; ರೋಗವನ್ನು ದೂಶಿಸಿ. ದೇಹ ಮತ್ತು ಮನಸ್ಸು ಒಂದನ್ನೊಂದು ಬಿಟ್ಟಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯ ನಮಗೆ ಮುಖ್ಯ. ಯೋಗದಿಂದ ರೋಗ ದೂರವಾಗಬಹುದು. ಸಮಾಜದ ಸರ್ವರಿಗೂ ಸೇವೆ ದೊರಕಬೇಕೆಂಬ ಉದ್ದೇಶದಿಂದ ಶಿಬಿರದ ಆಯೋಜನೆಯಾಗಿದೆ. ಸಮಾಜದಲ್ಲಿ ಸ್ವಚ್ಚತೆಯ ಕೊರತೆ ಎಲ್ಲೆಡೆ ಕಾಣುತ್ತಿದೆ. ರಕ್ತದಾನ ಮಾಡಿದರೆ ಪ್ರಾಣದಾನ ಮಾಡಿದಂತೆ. ರೋಗಿಗೆ ಹೇಳುವ ಸಾಂತ್ವನದ ಮಾತು ಬಹಳಷ್ಟು ಬಲಯುತವಾಗಿರುತ್ತದೆ. ಜೀವನದಲ್ಲಿ ನಂಬಿಕೆ ಅತೀ ಮುಖ್ಯ. ವೈದ್ಯರು ನೀಡುವ ಔಷಧಿಯ ಬಗ್ಗೆ ರೋಗಿಗೆ ವಿಶ್ವಾಸವಿದ್ದರೆ ರೋಗ ನಿವಾರಣೆ ಸುಗಮವಾಗುತ್ತದೆ” ಎಂದು ಪೂಜ್ಯ ಶ್ರೀಗಳವರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವದ ಸಲುವಾಗಿ ನಡೆದ ಬೃಹತ್ ವೈದ್ಯಕೀಯ ಸೇವೆ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯಸಾನ್ನಿಧ್ಯ ವಹಿಸಿದ್ದರು.
ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ, ಮಂಗಳೂರು ಪ್ರಸಾದ್ ನೇತ್ರಾಲಯ, ಬೆಂಗಳೂರು ಒನ್‌ಸೈಟ್ ಎಸ್ಸಿಲಾರ್ ಲಕ್ಸೋಟಿಕ್ ಫೌಂಡೇಶನ್, ವೆನ್‌ಲಾಕ್ ಆಸ್ಪತ್ರೆ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗ, ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜಂಟಿ ಸಹಯೋಗದಲ್ಲಿ ಜರಗಿದ ಶಿಬಿರದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾ. ನರೇಶ್ ರೈ ಕೆ.ಜಿ., ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಎಂ.ಎಸ್. ರವಿ, ಡಾ. ಇಶಾಕ್, ಡಾ. ಶೀತಲ್, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಆಯುಷ್ ವಿಭಾಗದ ಮುಖ್ಯಸ್ಥೆ ಡಾ. ಹೇಮಮಣಿ, ಮಂಗಳೂರು ಪ್ರಸಾದ್ ನೇತ್ರಾಲಯದ ಡಾ. ಸೈಯದ್, ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಐಶ್ವರ್ಯ, ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ಪ್ರಧಾನ ಕೋಶಾಧಿಕಾರಿ ಶ್ರೀ ಲೋಕನಾಥ ಜಿ.ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಐ.ಟಿ.ಐ. ಪ್ರಾಂಶುಪಾಲ ಶ್ರೀ ಪ್ರವೀಣ್‌ಕುಮಾರ್ ಎನ್. ವಂದಿಸಿದರು.