“ನಾವೆಲ್ಲರೂ ಧರ್ಮ ಸೇನಾನಿಗಳಾಗೋಣ” – ಶ್ರೀ ಲಲಿತಾ ಪಂಚಮಿ ಮಹೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಅ.10: “ತ್ಯಾಗಪೂರ್ಣ ಸೇವೆಗೆ ಬಹಳ ಪ್ರಾಮುಖ್ಯತೆ ಇದೆ. ಧರ್ಮಾಚರಣೆಯ ಮೂಲಕ ಜಾಗೃತಗೊಳಿಸುವ ಕಾರ್ಯ ನಿರಂತರವಾಗಬೇಕು. ದೇಶದ ರಕ್ಷಣೆಗೆ ರಾಷ್ಟ್ರ ಸೇನಾನಿಗಳು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಆರೋಗ್ಯ ಸೇನಾನಿಗಳಂತೆ ನಾವೆಲ್ಲರೂ ಧರ್ಮ ಸೇನಾನಿಗಳಾಗೋಣ. ಸದಾಚಾರವಿಲ್ಲದೆ ಧರ್ಮವಿಲ್ಲ. ಸದಾಚಾರದಿಂದಲೇ ಆರೋಗ್ಯ, ಸಂಪತ್ತು ವೃದ್ಧಿ ಸಾಧ್ಯ. ಸಮಾಜದಲ್ಲಿ ಅನೇಕ ವಿಚಾರಗಳು ವೈರಲ್ ಆಗುವುದಿದೆ. ಆದರ್ಶ ಸಮಾಜ ನಿರ್ಮಾಣಕ್ಕೆ ಪೂರಕವಾದ ಧಾರ್ಮಿಕ ವಿಚಾರಗಳು ವೈರಲ್ ಆಗಬೇಕು. ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ನಮ್ಮಲ್ಲಿರಬೇಕು. ಸಮಾಜದ ಸ್ವಾಸ್ಥ್ಯ ಕಾಪಿಡುವ ಜೊತೆಗೆ ಧರ್ಮಶ್ರದ್ಧೆ ಕಡಿಮೆಯಾಗಬಾರದು. ಅಧ್ಯಾತ್ಮವನ್ನು ಬಿಟ್ಟು ವಿಜ್ಞಾನವಿಲ್ಲ. ಜನರು ದಾರಿತಪ್ಪದಂತೆ ಜಾಗೃತಗೊಳ್ಳಲು ಅಧ್ಯಾತ್ಮವೇ ಅಗತ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ಲಲಿತಾ ಪಂಚಮಿ ಮಹೋತ್ಸವ ಸಂದರ್ಭ ಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದು “ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ತ್ರಿಮೂರ್ತಿಗಳು. ಜಗನ್ಮಾತೆಯನ್ನು ಆರಾಧನೆ ಮಾಡಿದರೆ ಸಮೃದ್ಧಿ, ಶಕ್ತಿ, ಮುಕ್ತಿ ಪ್ರಾಪ್ತಿಯಾಗುತ್ತದೆ. ನಮ್ಮ ಜೀವನದ ಸಮತೋಲನ ಮಾಡುವವಳು ದೇವಿ. ಆ ಮಹಾತಾಯಿಯನ್ನು ನಿಸ್ವಾರ್ಥವಾಗಿ ಶ್ರದ್ಧಾಭಕ್ತಿಯಿಂದ ಆರಾಧಿಸಿದರೆ ಪ್ರಸನ್ನನಾಗುತ್ತಾಳೆ. ಅಸುರತ್ವÀದಿಂದ ಮಾನವತ್ವಕ್ಕೆ, ಮಾನವತ್ವದಿಂದ ದೇವತ್ವಕ್ಕೆ ಸಾಗಬೇಕಾದರೆ ನಮ್ಮೊಳಗೆ ಸಾತ್ವಿಕತೆ, ಸದ್ಗುಣಗಳು ತುಂಬಿರಬೇಕು. ನಿರಾಡಂಬರದ ಆರಾಧನೆಯ ಮೂಲಕ ನವರಾತ್ರಿ ಎಲ್ಲರಿಗೂ ಉತ್ಸಾಹ ಕೊಡುವ ಹಬ್ಬವಾಗಲಿ. ಬಾಹ್ಯ ಪಿಡುಗುಗಳು ದೂರವಾಗಿ ನಮ್ಮ ಅವಗುಣಗಳು ನಿವಾರಣೆಯಾಗಲಿ. ಸಮಾಜ ಧಿಶಕ್ತಿಯಿಂದ ಮುಂದುವರಿಯಲಿ” ಎಂದರು.
ಸಮಾರಂಭದಲ್ಲಿ ಕೋವಿಡ್ 19ರ ಸಂಕಷ್ಟ ಕಾಲದಲ್ಲಿ ಶ್ರಮಿಸಿದ 22 ಮಂದಿ ಕೊರೋನಾ ಸೇನಾನಿಗಳಾದ ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಶ್ರೀ ಸಂಸ್ಥಾನದಿಂದ ಪೂಜ್ಯ ಶ್ರೀಗಳವರು ಗೌರವಿಸಿ ಹರಸಿದರು.
ವೇದಿಕೆಯಲ್ಲಿ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ, ಮುಂಬೈನ ಅಧ್ಯಕ್ಷ ಶ್ರೀ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಉಪಾಧ್ಯಕ್ಷ ನವಿಮುಂಬೈನ ಉದ್ಯಮಿ ಶ್ರೀ ದಾಮೋದರ ಎಸ್. ಶೆಟ್ಟಿ, ಒಡಿಯೂರು ಶ್ರೀ ಯುವಸೇವಾ ಬಳಗ, ಮುಂಬೈನ ಅಧ್ಯಕ್ಷ ಡಾ. ಅದೀಪ್ ಶೆಟ್ಟಿ, ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಫಿಯೋಲಿನ್ ಡಿ’ಸೋಜ, ಎಸ್ಸಿಲೋರ್ ವಿಷನ್ ಫೌಂಡೇಶನ್, ಬೆಂಗಳೂರು ಇದರ ಕಾರ್ಯನಿರ್ವಹಣಾಧಿಕಾರಿ ಶ್ರೀ ಧರ್ಮಪ್ರಸಾದ್ ರೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎ. ಸುರೇಶ್ ರೈ, ಸಾವಯವ ಕೃಷಿಯ ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿಕ್ರಮ್ ಹಾಗೂ ಶ್ರೀಪ್ರಭು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಿಸಿದ ಹಿರಿಯ ಪತ್ರಕರ್ತ ಶ್ರೀ ಯಶವಂತ ವಿಟ್ಲ ಅವರು ಶ್ರೀ ಸಂಸ್ಥಾನದ ಮುಖವಾಣಿ ‘ದತ್ತಪ್ರಕಾಶ’ ದ್ವೈಮಾಸಿಕದ 21 ಸಂಪುಟದ ಎಲ್ಲಾ ಕೃತಿಗಳನ್ನು ಪೋಣಿಸಿ ಶ್ರೀ ಸಂಸ್ಥಾನಕ್ಕೆ ಸಮರ್ಪಿಸಿದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಪ್ರಾರ್ಥನಾಗೀತೆ ಹಾಡಿದರು. ಶ್ರೀ ಮಾತೇಶ್ ಭಂಡಾರಿ ವಂದಿಸಿದರು.
ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಬೆಳಿಗ್ಗೆ ನಾಗದೇವರಿಗೆ ನಾಗತಂಬಿಲ, ಶ್ರೀ ಚಂಡಿಕಾ ಯಾಗ ನೆರವೇರಿತು.
ಮಧ್ಯಾಹ್ನ ಶ್ರೀ ಚಂಡಿಕಾ ಯಾಗದ ಪೂರ್ಣಾಹುತಿ, ಮಹಾಪೂಜೆ ಮಹಾಸಂತರ್ಪಣೆ ಜರಗಿತು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.), ಮಂಗಳೂರು ಇವರ ಪ್ರಾಯೋಕತ್ವದಲ್ಲಿ ‘ಶ್ರೀರಾಮ ದರ್ಶನ’ ಯಕ್ಷಗಾನ ತಾಳಮದ್ದಳೆ ಜರಗಿತು,
ರಾತ್ರಿ ಆರಾಧ್ಯದೇವರಿಗೆ ರಂಗಪೂಜೆ, ಅಷ್ಟಾವಧಾನ ಸೇವೆ ಹಾಗೂ ರಂಗಪೂಜೆ, ಶ್ರೀ ಭದ್ರಕಾಳಿಗೆ ವಿಶೇಷ ಪೂಜೆ ನಡೆಯಿತು.