ದೀಪಾವಳಿಯ ಆಚರಣೆಯ ಮೂಲಕ ಅಂತರಂಗದ ಜ್ಯೋತಿ ಅರಳಲಿ
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ
ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ಕಾಮ ಕ್ರೋಧ ಲೋಭ ಮೀರಿದರೆ ಬದುಕು ಸಾರ್ಥಕ. ಆ ಮೂಲಕ ಭಗವಂತನ ಅನುಸಂಧಾನ ಸಾಧ್ಯ. ಒಂದು ದೀಪದಿಂದ ಹಲವು ದೀಪ ಉರಿಸಬಹುದು. ನಾವು ಸಹ ಒಂದೊ0ದು ದೀಪಗಳಾಗಬೇಕು. ಹೃದಯದ ದೀಪ ಅರಳಿಸುವ ಕೆಲಸವಾಗಬೇಕು. ಅರಿಷಡ್ವೇಕಗಳನ್ನು ತೊಲಗಿಸುವ ಮೂಲಕ ಹೃದಯದ ದೀಪ ಅರಳಿಸಲು ಸಾಧ್ಯ. ದೀಪಕ್ಕೂ ಸಂಸ್ಕಾರ ನೀಡಿದಾಗ ಚೆನ್ನಾಗಿ ಉರಿಯಬಲ್ಲುದು. ಹಾಗೆಯೇ ಬದುಕಿಗೆ ಸಂಸ್ಕಾರ ಸಿಕ್ಕಿದಾಗ ಜೀವನ ವಿಕಾಸವಾಗಬಹುದು. ನಮ್ಮ ಬದುಕಿನ ನಡವಳಿಕೆಯ ಜೀವಾಳವೇ ಜ್ಞಾನ. ಹೋದರೆ ಬಾರದ ಮಾನವನ್ನು ಕಾಪಾಡಿಕೊಳ್ಳಬೇಕು. ಬಂದರೆ ಹೋಗದ ಜ್ಞಾನವನ್ನು ಶರೀರದಲ್ಲಿ ತುಂಬಿಸಿಕೊಳ್ಳಬೇಕು. ಇರುವೆಯು ಬಹಳ ಸೂಕ್ಷ್ಮಾಣು ಜೀವಿಯಾಗಿದ್ದು, ಶಿಸ್ತುಬದ್ಧವಾಗಿ ಜೀವನ ನಡೆಸುತ್ತದೆ. ನಾವೂ ಸಹ ಶಿಸ್ತುಬದ್ಧ ಆದರ್ಶ ಜೀವನ ನಡೆಸಬೇಕು. ಜಾಢ್ಯವನ್ನು ದೂರೀಕರಿಸಿ ಕ್ರಿಯಾಶೀಲರಾಗೋಣ. ಕೇವಲ ಆರ್ಥಿಕ ವ್ಯವಹಾರವೇ ಮುಖ್ಯವಲ್ಲ. ಧರ್ಮಶ್ರದ್ಧೆಯೂ ಬಹಳ ಮುಖ್ಯ. ದೀಪಾವಳಿ ಹಬ್ಬವು ಎಲ್ಲರ ಅಂತರ0ಗ ಜ್ಯೋತಿ ಬೆಳಗಿಸಲು ಪೂರಕವಾಗಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ ಸಂಸ್ಕಾರ’ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನ ಸುಮಾರು ೧೮ ಸಂಘಗಳಿಗೆ ಸುಮಾರು ೮,೬೪,೧೧೨.೦೦ ರೂಪಾಯಿಗಳ ಲಾಭಾಂಶದ ಚೆಕ್ ವಿತರಿಸಿ ಆಶೀರ್ವಚನಗೈದರು.
ಪುತ್ತೂರು ತಾಲೂಕಿನ ಯೋಜನೆಯ ಬಂಧುಗಳು ನಿರ್ವಹಿಸಿದ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊ0ಡಿತು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಕಾವು ಬಿ’ ಘಟಸಮಿತಿ ಅಧ್ಯಕ್ಷ ಶಿವರಾಮ ಪೂಜಾರಿ, ಕಾವು ಎ’ ಘಟಸಮಿತಿಯ ಅಧ್ಯಕ್ಷ ಅವಿನಾಶ್ ಕೆ., ಬಂದಡ್ಕ ಘಟಸಮಿತಿ ಅಧ್ಯಕ್ಷ ಸುರೇಶ್ ಕುಮಾರ್, ಪಡುಮಲೆ ಘಟಸಮಿತಿ ಅಧ್ಯಕ್ಷೆ ಸೇಸಮ್ಮ, ಸುಳ್ಯಪದವು ಘಟಸಮಿತಿ ಅಧ್ಯಕ್ಷೆ ಶ್ರೀಮತಿ, ದೇಲಂಪಾಡಿ ಘಟಸಮಿತಿ ಅಧ್ಯಕ್ಷ ಸೀತಾರಾಮ ರೈ, ಪುತ್ತೂರು ಘಟಸಮಿತಿ ಅಧ್ಯಕ್ಷೆ ಲೀನಾ ಡಿ’ಸೋಜ, ಕೆದಂಬಾಡಿ ಘಟ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಇವರುಗಳು ದೀಪ ಪ್ರಜ್ವಲಿಸಿದರು.
ಆರಂಭದಲ್ಲಿ ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ, ಕುಣಿತ ಭಜನೆ, ನೃತ್ಯ ಜರಗಿದವು.
ಸೇವಾದೀಕ್ಷಿತೆ ಮಹಿತಾ ರೈ ಸ್ವಾಗತಿಸಿ, ಕಡಬ ಸೇವಾದೀಕ್ಷಿತೆ ಸುಜಾತ ಜಿ. ವಂದಿಸಿದರು. ಪುತ್ತೂರು ವಲಯ ಸಂಯೋಜಕಿ ಶಶಿ ಡಿ. ಇವರು ಕಾರ್ಯಕ್ರಮ ನಿರೂಪಿಸಿದರು.