“ತ್ಯಾಗ ಮನೋಭಾವನೆಯ ಹಿರಿಯರಿಂದ ಸಮಾಜಕ್ಕೆ ಹಿತ”
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಇರಾ ಗ್ರಾಮ ಸಮಿತಿ ಮತ್ತು ಘಟಸಮಿತಿಯ ವಾರ್ಷಿಕೋತ್ಸವ-ಸಾರ್ವಜನಿಕ ಶ್ರೀ ಸತ್ಯದತ್ತವ್ರತ ಪೂಜೆಯ ಸಂದರ್ಭ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಇರಾ, ಅ.೦೭.: “ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು’ ಎಂಬ ಸರ್ವಜ್ಞ ವಚನದಂತೆ ನಾವೆಲ್ಲರೂ ಸುಸಂಸ್ಕೃತರಾಗಬೇಕು. ಉತ್ತಮ ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪರಿವರ್ತನೆ ಜಗದ ನಿಯಮ. ಬದುಕು ಎಂದರೆ ದರ್ಪಣದಂತಿರಬೇಕು. ಬದುಕಿನಲ್ಲಿ ಸ್ವಾರ್ಥವಿರಕೂಡದು. ಅಂತರ0ಗದ ಅಂಧಕಾರ ತೊಲಗಬೇಕು. ಶಿಸ್ತುಬದ್ಧ, ವಸ್ತುನಿಷ್ಠ ಬದುಕು ನಮ್ಮದಾಗಲಿ. ಸುಸಂಸ್ಕೃತ ರಾಷ್ಟç ನಿರ್ಮಾಣವಾಗಲಿ. ದೇಶದ ಮೌಲ್ಯ ಭಾವನೆಯಿಂದ ಕೂಡಿರುತ್ತದೆ. ಕ್ರಿಯಾಶೀಲತೆಗೆ ಉದಾಹರಣೆ ಸಮುದ್ರ. ಕ್ರಿಯಾಶೀಲ ಪದಾಧಿಕಾರಿಗಳಿಂದ ಸಮಿತಿಗೆ ಬಲ ಬರುತ್ತದೆ. ತ್ಯಾಗ ಮನೋಭಾವನೆಯ ಹಿರಿಯರಿಂದ ಸಮಾಜಕ್ಕೆ ಹಿತ. ಯುವಶಕ್ತಿ ಗಟ್ಟಿಯಾದರೆ ಹೊಸ ಸಮಾಜ ನಿರ್ಮಾಣವಾಗುತ್ತದೆ. ರಾಮನ ನಡೆ-ಕೃಷ್ಣನ ನುಡಿ ನಮಗೆ ಆದರ್ಶ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಇರಾ ಗ್ರಾಮ ಸಮಿತಿ ಮತ್ತು ಘಟಸಮಿತಿಯ ವಾರ್ಷಿಕೋತ್ಸವ-ಸಾರ್ವಜನಿಕ ಶ್ರೀ ಸತ್ಯದತ್ತವ್ರತಪೂಜೆಯ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಚಿಣ್ಣರ ಲೋಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಚಂದ್ರಹಾಸ ರೈ ಬಾಲಾಜಿಬೈಲು, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಶ್ರೀಮತಿ ಲಲಿತಾ ಜಯರಾಮ್, ಪ್ರಗತಿಪರ ಕೃಷಿಕ ಶ್ರೀ ಪದ್ಮನಾಭ ಶೆಟ್ಟಿ ಅಲ್ಕೀರು ಮೇಗಿನಬೈಲು, ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಗೌರವಾಧ್ಯಕ್ಷ ಶ್ರೀ ನೇಮು ಪೂಜಾರಿ ಇರಾ ಆಚೆಬೈಲು, ಇರಾ ಗ್ರಾಮ ಪಂಚಾಯತ್‌ನ ಸದಸ್ಯರುಗಳಾದ ಶ್ರೀ ಸುಧಾಕರ ಕೆ.ಟಿ. ಮತ್ತು ಶ್ರೀ ರಮೇಶ್ ಪೂಜಾರಿ ಸಂಪಿಲ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ ಉಪಸ್ಥಿತರಿದ್ದರು.
ಮೆಸ್ಕಾಂನ ಸಿಬ್ಬಂದಿ, ನಿವೃತ್ತ ಯೋಧರಾದ ಶ್ರೀ ಉಮೇಶ್ ಕೆ., ಹಾಗೂ ಮೆಸ್ಕಾಂನ ಸಿಬ್ಬಂದಿ ಶ್ರೀ ಸಂತೋಷ್‌ಕುಮಾರ್ ಮಾಮಪಲ್ಲ ಇವರನ್ನು ಗೌರವಿಸಲಾಯಿತು.
೪೨ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಯಕ್ಷಗಾನ, ರಂಗಭೂಮಿಯಲ್ಲಿ ಕಲಾವಿದರಾಗಿ ತೊಡಗಿಸಿಕೊಂಡ ಶ್ರೀ ಡಿ. ಸುರೇಶ್ ರೈ ಪರ್ಲಡ್ಕ ಇವರನ್ನು ಸನ್ಮಾನಿಸಲಾಯಿತು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯದತ್ತವ್ರತ ಪೂಜೆ ಜರಗಿತು.
ಕವಿತಾ ಮತ್ತು ಗೀತಾ ಅವರ ಪ್ರಾರ್ಥನಾಗೀತೆಯೊಂದಿಗೆ ಆರಂಭಗೊ0ಡ ಸಮಾರಂಭದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಇರಾ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ಸುರೇಶ್ ರೈ ಸ್ವಾಗತಿಸಿ, ಇರಾ ಘಟಸಮಿತಿಯ ಅಧ್ಯಕ್ಷ ಶ್ರೀ ಮಂಜುನಾಥ ಶೆಟ್ಟಿ ಅವರು ಪ್ರಸ್ತಾವನೆಗೈದರು. ಕೊಳ್ನಾಡು ವಲಯ ಸಂಯೋಜಕಿ ಶ್ರೀಮತಿ ಚಂದ್ರಿಕಾ ವಂದಿಸಿ, ಶ್ರೀ ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.