“ಗುರುಸೇವೆಯಿಂದ ಪರಮಾತ್ಮನ ಅನುಸಂಧಾನ ಸಾಧ್ಯ”

ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿಯ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ

ದ.೧೪: “ಪಾಶ್ಚಾತ್ಯ ಸಂಸ್ಕೃತಿ ನಮ್ಮಲ್ಲಿ ವ್ಯಾಪಕವಾಗುತ್ತಿದೆ. ಅವೆಲ್ಲವನ್ನು ಸರಿಪಡಿಸುವ ಕೆಲಸವಾಗಬೇಕು. ನಮ್ಮಲ್ಲಿರುವ ಅಹಂ ದೂರವಾಗಬೇಕು. ನಾನು ಎನ್ನುವ ಭಾವ ದೂರವಾಗಿ ನಮ್ಮದೆನ್ನುವ ಭಾವ ಎಲ್ಲರಲ್ಲು ಬರಬೇಕು. ಭಗವಾನ್ ದತ್ತಾತ್ರೇಯರ ಅವತಾರವೇ  ಜ್ಞಾನಾವತಾರವಾಗಿದೆ.  ವಿಶ್ವವನ್ನು ಗುರುವಾಗಿ ಆಯ್ಕೆ ಮಾಡಿಕೊಂಡವ ನಿಜವಾದ ಶಿಕ್ಷಕ. ಆಗ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ. ತ್ಯಾಗ ಪೂರ್ಣ ಸೇವೆ ನಮ್ಮದಾಗಬೇಕು. ಗುರು ಸೇವೆಯಿಂದ ಪರಮಾತ್ಮನ ಅನುಸಂದಾನ ಸಾಧ್ಯ. ಮಕ್ಕಳಿಗೆ ಮೊಬೈಲ್ ಕೊಡುವ ಬದಲು  ಭಗವದ್ಗೀತೆಯನ್ನು ಕೊಡುವ ಮೂಲಕ ಅವರಲ್ಲಿ ಈ  ಬಗ್ಗೆ ಅರಿವು ಮೂಡಿಸುವ ಕೆಲಸವಾಗಲಿ. ನಂಬಿಕೆ ನಮ್ಮೊಳಗಿದ್ದರೆ ಮಾಡಿದ ಕೆಲಸದಲ್ಲಿ ಯಶಸ್ಸು ಸಾಧ್ಯ. ವಿಶ್ವ ಮಾನವ ಧರ್ಮದ ಚಿಂತನೆ ಎಲ್ಲರಲ್ಲೂ ಮೂಡಬೇಕು. ಸಣ್ಣ ವಿಚಾರಗಳಲ್ಲಿ ನಾವೆಲ್ಲ ಸೋಲುತ್ತಿದ್ದೇವೆ. ಗುರುತತ್ವದ ಆರಾಧನೆ ಮಾಡದಿದ್ದರೆ ಬದುಕು ಬದುಕಾಗದು. ಆಧ್ಯಾತ್ಮಿಕ ವಿದ್ಯೆ ಶ್ರೇಷ್ಟವಾದುದು” ಎಂದು ಪೂಜ್ಯ ಶ್ರೀಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ದತ್ತಜಯಂತಿ ಮಹೋತ್ಸವ, ಶ್ರೀ ದತ್ತಮಹಾಯಾಗ ಸಪ್ತಾಹ, ಹರಿಕಥಾ ಸತ್ಸಂಗ ಮತ್ತು ಯಕ್ಷಗಾನ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದರು.

              ಸಾಧ್ವೀ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಸಮಾರಂಭದ ವೇದಿಕೆಯಲ್ಲಿ ಹರಿದಾಸ ಶ್ರೀ ಚಂದ್ರಕಾಂತ ಭಟ್ ಅಶ್ವತ್ಥಪುರ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಅಧ್ಯಕ್ಷ ಶ್ರೀ ದಾಮೋದರ ಶೆಟ್ಟಿ, ಒಡಿಯೂರು ಶ್ರೀ ಯುವಸೇವಾ ಬಳಗ, ಮುಂಬೈ ಘಟಕಾಧ್ಯಕ್ಷ ಡಾ. ಅದಿಪ್ ಕೆ. ಶೆಟ್ಟಿ,  ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ದಾವಣಗೆರೆ ಘಟಕಾಧ್ಯಕ್ಷ ನ್ಯಾಯವಾದಿ ಶ್ರೀ ಹನುಮಂತಪ್ಪ, ಥಾಣಾದ ಉದ್ಯಮಿ ಶ್ರೀ ಮೋಹನ ಹೆಗ್ಡೆ, ಶ್ರೀಮತಿ ಕಲ್ಪನಾ ಕೆ. ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

              ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ ವಂದಿಸಿದರು.

ವೈದಿಕ ಕಾರ್ಯಕ್ರಮ :

              ಬೆಳಗ್ಗೆ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ,          ಶ್ರೀ ದತ್ತಮಾಲಾಧಾರಿಗಳಿಂದ ದತ್ತನಾಮಸಂಕೀರ್ತನಾ ಶೋಭಾಯಾತ್ರೆ, ಹರಿದಾಸ ಶ್ರೀ ಚಂದ್ರಕಾಂತ ಭಟ್ ಅಶ್ವತ್ಥಪುರ ಅವರಿಂದ ‘ಸಂತ ತುಕಾರಾಮ’ ಹರಿಕಥಾ ಸತ್ಸಂಗ, ಮಧ್ಯಾಹ್ನ ಶ್ರೀ ದತ್ತಮಹಾಯಾಗ ಸಪ್ತಾಹದ ಪೂರ್ಣಾಹುತಿ, ಮಹಾಪೂಜೆ, ಪೂಜ್ಯ ಶ್ರೀಗಳವರಿಂದ ಮಧುಕರೀ-ಮಂತ್ರಾಕ್ಷತೆ ಸಂಪನ್ನಗೊಂಡಿತು.

              ಪ್ರಸಾದ ವಿತರಣೆ, ಮಹಾಸಂತರ್ಪಣೆಯ ಬಳಿಕ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಮಹೀರಾವಣ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು. ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ-ಉಯ್ಯಾಲೆ ಸೇವೆ ಜರಗಿತು.