ಗುರುವಂದನೆ ಕಾರ್ಯಕ್ರಮ
“ಕಷ್ಟದ ಪರಿಚಯವಾದಾಗ ಸುಖದ ಅನುಭವವಾಗುವುದು” – ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳ ಗುರುವಂದನೆ ಸ್ವೀಕರಿಸಿ ಒಡಿಯೂರು ಶ್ರೀ ಆಶೀರ್ವಚನ
“ಒಳ್ಳೆಯ ಮನಸ್ಸಿದ್ದರೆ ಏನನ್ನಾದರೂ ಸಾಧನೆ ಮಾಡಬಹುದು. ಆತ್ಮಸುಖ ಲೋಕ ಹಿತದಲ್ಲಿ ಅಡಗಿದೆ. ಎಲ್ಲರನ್ನೂ ನಮ್ಮಂತೆ ಕಾಣುವ ಮನಸ್ಸು ನಮ್ಮದಾಗಬೇಕು. ಸಂಸ್ಕಾರ-ಸಹಕಾರ-ಸಂಘಟನೆ-ಸಮೃದ್ಧಿಯ ಹಾದಿಯಲ್ಲಿ ನಡೆದಾಗ ನಮ್ಮ ಬದುಕು ಸದೃಢವಾಗಲು ಸಾಧ್ಯ. ವ್ಯಕ್ತಿ ವಿಕಾಸವೇ ದೇಶ ವಿಕಾಸದ ಮಂತ್ರ. ಕಷ್ಟದ ಪರಿಚಯವಾದಾಗ ಸುಖದ ಅನುಭವವಾಗುತ್ತದೆ” ಎಂದು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಪೂಜ್ಯ ಒಡಿಯೂರು ಶ್ರೀಗಳವರ ಷಷ್ಟ್ಯಬ್ದ ಸಂಭ್ರಮದ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳು ಆಯೋಜಿಸಿದ ಗುರುವಂದನೆ ಸ್ವೀಕರಿಸಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದು “ಪೂಜ್ಯ ಶ್ರೀಗಳವರ ಸತ್ಸಂಕಲ್ಪವನ್ನು ಸಾಕಾರಗೊಳಿಸುವುದೇ ನಾವು ನೀಡುವ ಗುರುಕಾಣಿಕೆ. ಮನುಷ್ಯ ಜನ್ಮ ಪವಿತ್ರವಾದದ್ದು ಇದನ್ನು ನಾವು ಸಮಾಜದ ಉನ್ನತಿಗಾಗಿ ಬಳಸಿದಾಗ ಸಾರ್ಥಕ ಬದುಕು ನಮ್ಮದಾಗುವುದು. ನಿಸ್ವಾರ್ಥ ಸೇವೆ ನಮ್ಮದಾಗಬೇಕು. ನಾನು ಎನ್ನುವುದರ ಬದಲು ನಾವು ಎಂದಾಗ ಖಂಡಿತವಾಗಿ ಉತ್ತಮ ಪ್ರತಿಫಲ ಲಭಿಸುವುದು” ಎಂದರು.
ಇರಾ ಘಟಸಮಿತಿಯ ಅಧ್ಯಕ್ಷ ಮಂಜುನಾಥ ಡಿ.ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರೂ, ಷಷ್ಟ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಕೋಶಾಧಿಕಾರಿ ಎ. ಸುರೇಶ್ ರೈಯವರು ಮಾತನಾಡಿ ಯೋಜನೆಯು ಇನ್ನಷ್ಟು ವಿಸ್ತೃತವಾಗಿ ಕಾರ್ಯಾಚರಿಸುವ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯದರ್ಶಿ ಯಶವಂತ ವಿಟ್ಲ ಇವರು ಷಷ್ಟ್ಯಬ್ದ ಸಂಭ್ರಮವು ಯಶಸ್ವಿಯಾಗಿ ಸಂಪನ್ನಗೊಂಡ ವಿವಿಧ ಕಾರ್ಯಕ್ರಮಗಳ ವಿವರ ನೀಡಿದರು. ಸಹಕಾರಿಯ ಉಪಾಧ್ಯಕ್ಷರಾದ ಲಿಂಗಪ್ಪ ಗೌಡ ಪನೆಯಡ್ಕ ಉಪಸ್ಥಿತರಿದ್ದರು.
ಯೋಜನೆಯ ಎಲ್ಲಾ ಸಿಬ್ಬಂದಿಗಳು ಪೂಜ್ಯ ಶ್ರೀಗಳವರಿಗೆ ಫಲಪುಷ್ಪ ಸಮರ್ಪಿಸಿ ಗುರುವಂದನೆ ಸಲ್ಲಿಸಿದರು. ಫಲಪುಷ್ಪಗಳಿಗೆ ಹಾಲೆರೆದು ಸ್ವೀಕರಿಸಿದ ಪೂಜ್ಯ ಶ್ರೀಗಳವರು ಎಲ್ಲರನ್ನು ಫಲಮಂತ್ರಾಕ್ಷತೆಯಿತ್ತು ಹರಸಿದರು. ಉಡುಪಿ ವಲಯದ ವತಿಯಿಂದ ಪೂಜ್ಯ ಶ್ರೀಗಳವರ ಭಾವಚಿತ್ರವನ್ನು ಪೂಜ್ಯ ಶ್ರೀಗಳಿಗೆ ಸಮರ್ಪಿಸಿದರು.
ಸಾಮೂಹಿಕ ಪ್ರಾರ್ಥನೆ ಮತ್ತು ಧ್ಯಾನ-ಪ್ರಾಣಾಯಾಮ, ಹನುಮಾನ್ ಚಾಲೀಸ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಉಡುಪಿ ವಲಯದ ಅಧ್ಯಕ್ಷ ಪ್ರಭಾಕರ ಶೆಟ್ಟಿಯವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಯೋಜನೆಯ ನಿರ್ದೇಶಕ ಕಿರಣ್ ಉರ್ವ ಇವರು ಯೋಜನೆ ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದರು. ಗ್ರಾಮವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಯಶೋಧರ ಸಾಲ್ಯಾನ್ ಸ್ವಾಗತಿಸಿ, ಸಂಯೋಜಕಿ ಶ್ರೀಮತಿ ಲೀಲಾ ಕೆ. ಧನ್ಯವಾದವಿತ್ತರು, ಶ್ರೀಮತಿ ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.