“ಕ್ರಿಯಾಶೀಲತೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ”

The current image has no alternative text. The file name is: 1-1.jpg

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಅಳಿಕೆ ಗ್ರಾಮಸಮಿತಿ ಹಾಗೂ ಘಟಸಮಿತಿಯ ೧೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಫೆ.೨೬: “ಬಾಲ್ಯದಲ್ಲಿ ಉತ್ತಮ ಸಂಸ್ಕಾರ ಸಿಕ್ಕಿದಾಗ ಮನುಷ್ಯನಲ್ಲಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ವ್ಯಕ್ತಿವಿಕಾಸವಾದಾಗ ಗ್ರಾಮ ವಿಕಾಸ, ಗ್ರಾಮ ವಿಕಾಸದಿಂದಲೇ ರಾಷ್ಟç ವಿಕಾಸ. ಸಹಕಾರ, ಸಂಘಟನೆ, ಸಮೃದ್ಧಿಯ ಪರಿಕಲ್ಪನೆ ಇರಬೇಕು. ಕ್ರಿಯಾಶೀಲತೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅಳಿಕೆ ಗ್ರಾಮದ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಜರಗಿದ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಅಳಿಕೆ ಗ್ರಾಮ ಸಮಿತಿ ಹಾಗೂ ಘಟಸಮಿತಿಯ ೧೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಎಸ್. ಪದ್ಮನಾಭ ಪೂಜಾರಿ, ಎಮ್.ಎಸ್. ರಾಮಯ್ಯ ದಂತ ವೈದ್ಯಕೀಯ ಕಾಲೇಜಿನ ಅಸಿಸ್ಟೆಂಟ್ ಪ್ರೋಫೆಸರ್ ಡಾ. ಬಾಬಾಶಂಕರ್ ಆಳ್ವ ಮಿತ್ತಳಿಕೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎ. ಸುರೇಶ್ ರೈ, ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀ ಧನಂಜಯ ಪಿ, ಮಾಣಿಲ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲತಾ ಪಿ ಶೆಟ್ಟಿ, ಅಳಿಕೆ ಗ್ರಾಮಸಮಿತಿ ಅಧ್ಯಕ್ಷ ಶ್ರೀ ಕಾನ ಈಶ್ವರ ಭಟ್, ದೇವಸ್ಥಾನದ ಅಭಿವೃದ್ದಿ ಸಮಿತಿಯ ಕಾರ್ಯದರ್ಶಿ ಶ್ರೀ ಸುರೇಶ್ ಭಟ್ ಮಡಿಯಾಲ ಉಪಸ್ಥಿತರಿದ್ದರು.
ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯ ಯೋಗ ಶಿಕ್ಷಕ ಶ್ರೀ ಆನಂದ ಶೆಟ್ಟಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ರಘು ಟಿ.ವೈ., ಎರುಂಬು ಶ್ರೀ ಶಂಕರನಾರಾಯಣ ದೇವಸ್ಥಾನದ ಅರ್ಚಕ ಶ್ರೀ ಬಾಲಕೃಷ್ಣ ಕಾರಂತ, ಹಿರಿಯ ದರ್ಜಿ ಶ್ರೀ ಬಾಬು ಮೂಲ್ಯ ಕಲ್ಲಜೇರ, ಸಮಾಜ ಸೇವಕ ಶ್ರೀ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು, ಅಂಚೆ ನೌಕರ ಶ್ರೀ ಚಂದ್ರಶೇಖರ ಮಡಿಯಾಲ, ದೈವನರ್ತಕ ಶ್ರೀ ಬಾಬು ಕಲ್ಲೆಂಚಿಪಾದೆ, ಚುಟುಕು ಸಾಹಿತಿ ಶ್ರೀ ನಾರಾಯಣ ಕುಂಬ್ರ, ನಾಟಿ ಪ್ರಸೂತಿ ತಜ್ಞೆ ಶ್ರೀಮತಿ ಚಿತ್ರಾ, ಪತ್ರಕರ್ತೆ ಹರ್ಷಿತಾ ವಿ. ಇವರನ್ನು ಸನ್ಮಾನಿಸಲಾಯಿತು.
ವೇ|ಮೂ| ಚಂದ್ರಶೇಖರ ಉಪಾಧ್ಯಾಯ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯದತ್ತ ವ್ರತಪೂಜೆ ನಡೆಯಿತು.
ಘಟಸಮಿತಿ ಅದ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ಅಳಿಕೆ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿಯವರು ಪ್ರಸ್ತಾವನೆಗೈದರು.
ಇದೇ ಸಂದರ್ಭ ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಿಸಲಾಯಿತು.
ಶ್ರೀಮತಿ ಲೀಲಾವತಿ ಮತ್ತು ಶ್ರೀಮತಿ ಅಮಿತ ಅವರು ಸನ್ಮಾನ ಪತ್ರವನ್ನು ಓದಿದರು. ಸೇವಾದೀಕ್ಷಿತೆ ಪ್ರತಿಮಾರವರು ವಾರ್ಷಿಕ ವರದಿಯನ್ನು ಮಂಡಿಸಿದರು. ಅಳಿಕೆ ಗ್ರಾಮ ಸಮಿತಿಯ ಕಾರ್ಯದರ್ಶಿ ಶ್ರೀ ಮಹೇಶ್ ದೂಜಮೂಲೆ ಧನ್ಯವಾದವಿತ್ತರು. ಮೇಲ್ವಿಚಾರಕಿ ಶ್ರೀಮತಿ ಲೀಲಾ ಕೆ. ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.