“ಕೌಶಲ್ಯ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ವಿಶೇಷವಾದುದು”


ಕನ್ಯಾನ : “ಕೌಶಲ್ಯ ಭಾರತದ ಜೀವಾಳ ಕೈಗಾರಿಕಾ ತರಬೇತಿ ಕೇಂದ್ರಗಳು. ಕೌಶಲ್ಯ ಭಾರತ ನಿರ್ಮಾಣದಲ್ಲಿ ಯುವಕರು ಮುಂದೆ ಬರಬೇಕು, ಆದರ್ಶರಾಷ್ಟç ನಿರ್ಮಾಣದ ರೂವಾರಿಗಳಾಗಲಿ. ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಉದ್ಯೋಗಪೂರ್ಣರಾಗಬೇಕು. ನುರಿತ ತರಬೇತುದಾರರಿಂದ ಇದು ಸಾಧ್ಯವಾಗುತ್ತದೆ. ಯುವಸಮುದಾಯ ದುಶ್ಚಟಕ್ಕೆ ಬಲಿಯಾಗದೆ, ಇತಿಮಿತಿಯ ಬದುಕು ನಡೆಸಿದಾಗ ಸಾರ್ಥಕತೆ ಹೊಂದಲು ಸಾಧ್ಯ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಗುರುದೇವ ಐ.ಟಿ.ಐ. ಕನ್ಯಾನ ಇದರ ವಾರ್ಷಿಕೋತ್ಸವದಲ್ಲಿ ಆರ್ಶೀವಚನ ನೀಡಿ, ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆಗಳ ಬಹುಮಾನ ವಿತರಿಸಿದರು.
ಸಾಧ್ವಿ ಶ್ರೀ ಮಾತಾನಂದಮಯೀಯವರು ಆರ್ಶೀವಚನ ನೀಡಿ “ವಿದ್ಯೆಯೊಂದಿಗೆ ವಿನಯ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಪ್ರಾಮಾಣಿಕ ಪ್ರಯತ್ನ, ಆತ್ಮವಿಶ್ವಾಸ ಬೇಕು. ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು. ಎದೆಗುಂದದೆ ಪ್ರಯತ್ನ ಮುಂದುವರಿಸಿದಲ್ಲಿ ಖಂಡಿತಾ ಯಶಸ್ಸು ಪಡೆಯಲು ಸಾಧ್ಯ” ಎಂದು ತಿಳಿಸಿ ಐ.ಟಿ.ಐ. ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಹಾಗೂ ತರಬೇತುದಾರರ ಕ್ರಿಯಾಶೀಲ ಮತ್ತು ಶ್ರದ್ಧೆಯ ಸೇವೆಯನ್ನು ಅವರು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಬಿ.ಎ.ಐ.ಟಿ.ಐ. ತುಂಬೆ ಇದರ ಪ್ರಾಚಾರ್ಯರಾದ ಶ್ರೀ ನವೀನ್ ಕುಮಾರ್ ಕೆ.ಎಸ್ ಮಾತನಾಡುತ್ತಾ “ಐ.ಟಿ.ಐ ಶಿಕ್ಷಣದಿಂದ ಉತ್ತಮ ಪ್ರಜೆಯಾಗಲು ಸಾಧ್ಯ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನೀಡಿ ದುಡಿಮೆಯಲ್ಲಿ ಸಂಬಳವೇ ಮುಖ್ಯವಲ್ಲ, ಅನುಭವ ಮುಖ್ಯ, ಕಠಿಣ ಪರಿಶ್ರಮದಿಂದ ಯಶಸ್ಸು ಹೊಂದಲು ಸಾಧ್ಯ” ಎಂದು ತಿಳಿಸಿದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆÀ ಹಾಗೂ ಒಡಿಯೂರುಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಮಾತೇಶ್ ಭಂಡಾರಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಪ್ರಾಚಾರ್ಯ ಶ್ರೀ ಪ್ರವೀಣ್‌ಕುಮಾರ್ ಎನ್. ಸ್ವಾಗತಿಸಿ, ವರದಿ ವಾಚಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ಶಿವಪ್ರಸಾದ ಎಸ್. ನಿರೂಪಿಸಿ, ಶ್ರೀ ರಾಜಶೇಖರ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
