“ಕರ್ತವ್ಯನಿಷ್ಠೆ ಸಾಧನೆಯ ಬದುಕಿಗೆ ಹೆದ್ದಾರಿ” – ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕøತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ

“ಭಜನೆ ಎಂದರೆ ಸಂಘಟನೆ ಅಥವಾ ಸೇರುವಿಕೆಯೇ ಆಗಿದೆ. ಭಜನೆ ಮಾಡುವ ಹೃದಯದಲ್ಲಿ ರಾಗ-ದ್ವೇಷಗಳಿರುವುದಿಲ್ಲ. ನಮ್ಮಲ್ಲಿ ಸಾತ್ವಿಕಭಾವವನ್ನು ಮೂಡಿಸುತ್ತದೆ. ಭಜನೆ ಮಾಡುವ ಮನೆ ಅಥವಾ ಊರಲ್ಲಿ ಶಾಂತಿ-ನೆಮ್ಮದಿ ಇರುವುದು. ಭಜನೆಯಲ್ಲಿನ ಸಾರವು ಬದುಕನ್ನೆ ಪರಿವರ್ತಿಸುತ್ತದೆ. ಅನ್ಯೋನ್ಯತೆ-ಆತ್ಮೀಯತೆ ಬೆಸೆಯಲು ಇದು ಪೂರಕ. ಯಾರಿಗೆ ಹೇಗೆ ಸಹಕಾರ ಮಾಡಬೇಕೆನ್ನುವ ವಿಚಾರವನ್ನು ಭಜನೆ ತಿಳಿಸುತ್ತದೆ. ನಮ್ಮ ಜೀವನದಲ್ಲಿ ಎಲ್ಲವನ್ನೂ ಪುನಃ ಪುನಃ ಪಡೆಯಬಹುದು. ಆದರೆ ಶರೀರವನ್ನು ಮತ್ತೆ ಮತ್ತೆ ಪಡೆಯಲಾಗದು. ಸದ್ವಿಚಾರಗಳು ಬದುಕನ್ನು ಸಂಪನ್ನವಾಗಿಸುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ದಿವ್ಯ ಸಂದೇಶ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಸ್ಕøತಿ-ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನಗೈದ ಪೂಜ್ಯ ಶ್ರೀಗಳವರು “ಕರ್ತವ್ಯನಿಷ್ಠೆ ಸಾಧನೆಯ ಬದುಕಿಗೆ ಹೆದ್ದಾರಿ. ಅದರ ಹಿಂದೆ ಪ್ರಾಮಾಣಿಕತೆಯೂ ಇರುತ್ತದೆ. ಬದುಕಿನಲ್ಲಿ ಕರ್ತವ್ಯವನ್ನು ಮೆರೆಯಬೇಕು. ಆಗಲೇ ಸಾರ್ಥಕತೆ. ಇಂದು ಮಾಡುವ ಕೆಲಸ ಇಂದೇ ಮಾಡುವ ಎಂಬ ಸಂಕಲ್ಪ ಬೇಕು. ಉತ್ತಮ ಕಾರ್ಯಗಳಿಗೆ ತಂತ್ರಜ್ಞಾನವನ್ನು ಬಳಸಿ, ಸಂದೇಶಗಳನ್ನು ನಾವು ಅಳವಡಿಸಿಕೊಂಡು ಮತ್ತೊಬ್ಬರಿಗೆ ಹಂಚುವ ಕಾರ್ಯ ಮಾಡಿದಾಗ ಸಾರ್ಥಕತೆ. ಸಂಘಟನೆಗಿರುವ ಶಕ್ತಿ ಮತ್ಯಾವುದಕ್ಕೂ ಇಲ್ಲ. ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಿದಾಗ ಆದರ್ಶ ಸಂಘಟನೆಯಾಗುತ್ತದೆ” ಎಂದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸುಳ್ಯ ತಾಲೂಕಿನ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರು ಲಾಭಾಂಶ ವಿತರಿಸಿ, ಫಲ-ಮಂತ್ರಾಕ್ಷತೆಯಿತ್ತು ಹರಸಿದರು.
ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯೋಜನೆಯ ಧ್ಯೇಯೋದ್ದೇಶದ ಬಗ್ಗೆ ಮಾಹಿತಿ ನೀಡಿದರು. ಬಳಿಕ ಯೋಗ-ಪ್ರಾಣಾಯಾಮ ಅಭ್ಯಾಸ, ಶ್ರೀಮದ್ಭವದ್ಗೀತೆ, ಶ್ರೀ ಹನುಮಾನ್ ಚಾಲೀಸಾ ಪಠಣ, ನಾಮಸಂಕೀರ್ತನೆ ನಡೆಯಿತು.
ಉಳಿತಾಯ ಮನೋಭಾವ ಏಕೆ? ಎಂಬ ವಿಚಾರದ ಬಗ್ಗೆ ಶ್ರೀಮತಿ ತ್ರಿವೇಣಿ ಬಾಳಿಲ ಮಾಹಿತಿ ನೀಡಿದರು. ಸುಹಾಸ್ ಅಲೆಕ್ಕಾಡಿಯವರು ಶ್ಲೋಕ ಪಠಿಸಿದರು. ಕೇನ್ಯದ ಸೇವಾದೀಕ್ಷಿತೆ ವನಜ ಅವರು ಶ್ರೀಕೃಷ್ಣನ ಕಥೆ ಹೇಳಿದರು. ಬೆಳ್ಳಾರೆ ಮತ್ತು ಪಂಜ ವಲಯದ ಸದಸ್ಯರಿಂದ ಕುಣಿತ ಭಜನೆ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಕುತ್ಕುಂಜದ ಸೇವಾದೀಕ್ಷಿತೆ ಶ್ರೀಮತಿ ಸರಿತಾ ಸ್ವಾಗತಿಸಿ, ಬೆಳ್ಳಾರೆ ವಲಯು ಸಂಯೋಜಕಿ ಶ್ರೀ ಶೀಬಾ ರೈ ವಂದಿಸಿದರು. ಪುತ್ತೂರು ಮೇಲ್ವಿಚಾರಕಿ ಶ್ರೀಮತಿ ಗೀತಾ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ತಾಲೂಕಿನ ಎಲ್ಲಾ ಸಂಯೋಜಕಿಯರು ಹಾಗೂ ಸೇವಾದೀಕ್ಷಿತೆಯರು ಸಹಕರಿಸಿದರು.