ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ, ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಮಾರಂಭ


“ಅಭಿವೃದ್ಧಿಗೆ ನೀಡಿರುವ ದೇಣಿಗೆಯ ಮೌಲ್ಯ ಮುಖ್ಯವಲ್ಲ ಅವರ ಸೇವಾಭಾವನೆ ಮುಖ್ಯವಾಗಿದೆ”
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ, ಮಹಾರಾಷ್ಟç ಘಟಕದ ರಜತ ಮಹೋತ್ಸವ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ
ಮು0ಬಯಿ, ಜು. ೨೭.: “ಯುವ ಸಮುದಾಯ ಧರ್ಮದ ಹಾದಿಯಲ್ಲಿ ನಡೆಯುತ್ತಾ ಧಾರ್ಮಿಕ ಕಾರ್ಯಗಳಿಗೆ ಬಹಳಷ್ಟು ದೇಣಿಗೆಯನ್ನು ನೀಡುವ ಮನೋಭಾವನೆ ಬೆಳೆಸಿಕೊಂಡಿದೆ. ಅದಕ್ಕೆ ಮುಖ್ಯ ಕಾರಣ ಅವರ ಪಾಲಕರು. ಮನೆಯೇ ಮೊದಲ ಪಾಠಶಾಲೆಯಾದಾಗ ಪ್ರಜ್ಞಾವಂತ ದೇಶಭಕ್ತ ಯುವಕರು ಬೆಳೆಯಲು ಸಾಧ್ಯ. ಅಭಿವೃದ್ಧಿಗೆ ನೀಡಿರುವ ದೇಣಿಗೆಯ ಮೌಲ್ಯ ಮುಖ್ಯವಲ್ಲ ಅವರ ಸೇವಾಭಾವನೆ ಮುಖ್ಯವಾಗಿದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡಿದರು.
ಅವರು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬಯಿ, ಮಹಾರಾಷ್ಟç ಘಟಕದ ರಜತ ಮಹೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನಗೈದ ಪೂಜ್ಯ ಶ್ರೀಗಳವರು “ಭಗವಂತ ನಮ್ಮೊಳಗಿದ್ದರೆ ನಮಗೆ ಸ್ಥಾನ-ಮಾನ, ಅದೇ ನಮ್ಮಿಂದ ದೂರವಾದರೆ ಈ ದೇಹವನ್ನು ಮುಟ್ಟಿದರೆ ಸ್ನಾನ. ಶರೀರ ಮುಖ್ಯವಲ್ಲ ಶರೀರದ ಒಳಗಿರುವ ಭಗವಂತನ ಧ್ಯಾನ ಮುಖ್ಯವಾಗಿದೆ. ಮನುಷ್ಯನಿಗೆ ಆಭರಣವೆಂದರೆ ಕುತ್ತಿಗೆಗೆ ಧರಿಸುವ ಆಭರಣವಲ್ಲ ಆತನ ಕಂಠದಿ0ದ ಬರುವ ಮಾತುಗಳು. ಬಾಲ್ಯದಲ್ಲಿರುವಾಗ ದೇವನಾಗಿರುವ ಮಾನವ ತಾನು ಬೆಳೆದಂತೆ ರಾಕ್ಷಸನಾಗುತ್ತಾನೆ. ಇದಕ್ಕೆ ಕಾರಣ ಸಂಸ್ಕಾರದ ಕೊರತೆ. ಅದಕ್ಕಾಗಿ ಸಂಸ್ಕಾರವನ್ನು ತುಂಬಿಸುವ ಕಾರ್ಯವನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ” ಎಂದರು.
ಸಾದ್ವಿ ಶ್ರೀ ಮಾತಾನಂದಾಮಯಿ ಆಶೀರ್ವಚನ ನೀಡಿ “ಪೂಜ್ಯ ಸ್ವಾಮೀಜಿಯವರು ಯಾವ ಮನೆಗಳಿಗೆ ಹೋಗುತ್ತಾರೋ ಆ ಮನೆ ಜಾಗೃತವಾಗುತ್ತದೆ. ಪಾದಪೂಜೆ ಎಂದರೆ ಅದರ ಹಿಂದೆ ಮಹತ್ವದ ಶಕ್ತಿ ಇದೆ. ಸ್ವಾಮೀಜಿಯವರು ಮಕ್ಕಳೊಂದಿಗೆ ಮಕ್ಕಳಂತೆ, ಭಕ್ತರೊಂದಿಗೆ ಗುರುಗಳಂತೆ ಇರುತ್ತಾರೆ. ಪ್ರತಿಯೊಬ್ಬರೂ ಆತ್ಮೋನ್ನತಿಯ ಕಡೆಗೆ ಹೋಗಬೇಕೆನ್ನುವ ಉದ್ದೇಶ ಅವರದಾಗಿದೆ. ಕಳೆದ ೨೫ ವರ್ಷಗಳಿಂದ ಮುಂಬೈಯ ಭಕ್ತರು ನೀಡಿರುವಂತಹ ಗುರುಕಾಣಿಕೆ ಎಲ್ಲವೂ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ” ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬಂಟರ ಸಂಘ, ಮುಂಬೈ ಇದರ ಅಧ್ಯಕ್ಷ ಶ್ರೀ ಪ್ರವೀಣ್ ಭೋಜ ಶೆಟ್ಟಿ, ಸಫಲ್ಯ ಸೇವಾ ಸಂಘ ಮುಂಬೈ ಇದರ ಅಧ್ಯಕ್ಷ ಶ್ರೀ ಶ್ರೀನಿವಾಸ ಸಫಲ್ಯ, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರ ಆರ್. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಪುಣೆ ಘಟಕಾಧ್ಯಕ್ಷ ಶ್ರೀ ಪ್ರಭಾಕರ್ ವಿ.ಶೆಟ್ಟಿ ಶುಭಹಾರೈಸಿದರು.
ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಬಳಗದ ಅಧ್ಯಕ್ಷ ಶ್ರೀ ದಾಮೋದರ ಎಸ್. ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬಯಿ ಘಟಕದ ಅಧ್ಯಕ್ಷೆ ಶ್ರೀಮತಿ ಶ್ವೇತಾ ಚಂದ್ರಹಾಸ ರೈ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಯುವ ಸೇವಾ ಬಳಗ, ಮುಂಬೈ ಘಟಕದ ವತಿಯಿಂದ ಶ್ರೀ ಸಂಸ್ಥಾನದ ವಿದ್ಯಾನಿಧಿಗೆ ಸುಮಾರು ೨೧ ಲಕ್ಷ ರೂಪಾಯಿಗಳ ಮೊತ್ತವನ್ನು ಘಟಕದ ಅಧ್ಯಕ್ಷ ಡಾ. ಅದಿಪ್ ಕೆ. ಶೆಟ್ಟಿ ಇವರ ನೇತೃತ್ವದಲ್ಲಿ ಸಮರ್ಪಿಸಿದರು.
ಬಳಗದ ರಜತ ಸಮಾರಂಭದ ಕಾರ್ಯಾಧ್ಯಕ್ಷ ನ್ಯಾಯವಾದಿ ಶ್ರೀ ಪ್ರಕಾಶ್ ಎಲ್. ಶೆಟ್ಟಿ ಕಡಂದಲೆಪರಾರಿ ಪ್ರಸ್ತಾವನೆಗೈದರು. ರಜತ ಸಂಭ್ರಮದ ಸವಿನೆನಪಿಗಾಗಿ ಬೆಳ್ಳಿಯ ೨ ದೀಪಗಳನ್ನು ಮತ್ತು ಸಂಗ್ರಹಿಸಿದ ನಿಧಿಯನ್ನು ಪೂಜ್ಯ ಶ್ರೀಗಳವರಿಗೆ ಸಮರ್ಪಿಸಿದರು.
ಬಳಗದ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ.ಶೆಟ್ಟಿ ಸಂಪೂರ್ಣ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಮಧ್ಯಾಹ್ನ ೨ ಗಂಟೆಗೆ ಆರಂಭಗೊ0ಡ ಕಾರ್ಯಕ್ರಮದ ಮೊದಲಿಗೆ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬಯಿ ಮತ್ತು ಜೈ ಗುರುದೇವ್ ಮಕ್ಕಳ ಭಜನ ಮಂಡಳಿ ನವಿಮುಂಬಯಿ ವತಿಯಿಂದ ಭಜನೆ ಕಾರ್ಯಕ್ರಮ ಜರಗಿತು. ಬಳಿಕ ರಂಗಭೂಮಿ ಫೈನ್ ಆರ್ಟ್ ನವಿಮುಂಬಯಿ ವತಿಯಿಂದ ‘ಶಾಪ ವಿಮೋಚನೆ’ ತುಳು ನಾಟಕ ಪ್ರದರ್ಶನಗೊಂಡು ಎಲ್ಲರನ್ನೂ ಭಾವಪರವಶವಾಗಿಸಿತು.
ಅಪಾರ ಸಂಖ್ಯೆಯಲ್ಲಿ ನೆರೆದ ಗುರುಭಕ್ತರು ಪೂಜ್ಯ ಶ್ರೀಗಳಿಂದ ಮಂತ್ರಾಕ್ಷತೆಯನ್ನು ಪಡೆದು ಅನ್ನಪ್ರಸಾದವನ್ನು ಸ್ವೀಕರಿಸಿದರು.