“ಅತಿಯಾದುದಕ್ಕೆ ಇತಿ ಹಾಡಿದಾಗ ಜೀವನ ವಿಕಾಸ ಸಾಧ್ಯ”
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಅ.14: “ಇಂದು ದಿನ ವಿಶೇಷ. ಪೌರ್ಣಮಿ, ಸಂಕ್ರಮಣದ ಜೊತೆಗೆ ಜೀವನಮೌಲ್ಯವನ್ನು ಜಗತ್ತಿಗೆ ತಿಳಿಸಿದ ಮಹಾನ್ ಕವಿ ವಾಲ್ಮೀಕಿಯ ಜಯಂತಿ. ರಾಮಮಂತ್ರದ ಮಹಿಮೆಯನ್ನು ಅರಿತು ಶ್ರೀಮದ್ರಾಮಾಯಣ ಎಂಬ ಸಾರ್ವಕಾಲಿಕ ಮಹಾಕಾವ್ಯವನ್ನು ಜಗತ್ತಿಗೆ ನೀಡಿದವರು. ರಾಮಾಯಣ ಮತ್ತು ಮಹಾಭಾರತ ನಮ್ಮ ಬದುಕು ಹೇಗಿರಬೇಕೆಂಬುದನ್ನು ತಿಳಿಸುತ್ತದೆ. ನಾವೆಲ್ಲ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಆದರೆ ಆಚರಿಸುವ ಸಂದರ್ಭ ಸತ್ಕಾರ್ಯಗಳನ್ನು ಮಾಡುವುದು ಆದರ್ಶವಾಗಬಲ್ಲದು. ಸಂಸ್ಕಾರದ ವಿಷಯಗಳನ್ನು ತಿಳಿಸುವ ಕಾರ್ಯ ಕ್ಷೀಣಿಸುತ್ತಾ ಇದೆ. ಇಂದು ನಾವು ಕಾಣುವ ಸಮಾಜದ ಗೊಂದಲಗಳಿಗೆ ಪರಿಹಾರ ಭಜನೆಯಲ್ಲಿದೆ. ನಮ್ಮ ಪರಿವರ್ತನೆಗೆ ತಿರುವು ಎಂಬುದಿದೆ. ಸುಸಂಸ್ಕೃತ ಬದುಕು ಮಾಡಲು ಕಲಿಯಬೇಕು. ಸಂಪತ್ತಿನ ಜೊತೆ ಸಂಸ್ಕಾರ ಬೇಕು. ಬದುಕಿಗೊಂದು ಚೌಕಟ್ಟು ಬೇಕು” ಎಂದು ಒಡಿಯೂರು ಶ್ರೀ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ ಸಂಸ್ಕಾರ’ ಕಾರ್ಯಕ್ರಮದಲ್ಲಿ ಆಶೀರ್ವಚನಗೈದ ಪೂಜ್ಯ ಶ್ರೀಗಳವರು “ಮುಂದೆ ಬರುವಂತಹ ಹಬ್ಬ ದೀಪಾವಳಿ. ದೀಪಾವಳಿ ಹಬ್ಬದ ಸಂದೇಶವನ್ನು ಅವಲೋಕಿಸಿದರೆ ಕಣ್ಣ ಮುಂದೆ ಬರುವುದು ವಾಮನಮೂರ್ತಿ. ನಾವೆಲ್ಲ ಬಲಿಯನ್ನು ಬಲ್ಲವರು. ಅತಿಯಾದ ದಾನದಿಂದಲಾಗಿ ಪಾತಾಳವನ್ನು ಸೇರಬೇಕಾಯಿತು. ಮೂರು ಹೆಜ್ಜೆಗಳ ದಾನವನ್ನು ಕೇಳಿದ ವಾಮನಾವತಾರಿ ವಿಷ್ಣುವು ಮೂರು ಹೆಜ್ಜೆಗಳ ವಿಸ್ತಾರವನ್ನು ಹೀಗೆ ತೋರಿಸಿದ – ಒಂದನೇ ಹೆಜ್ಜೆಯಲ್ಲಿ ಆಕಾಶವನ್ನೇ ತುಂಬಿಕೊಂಡ. ಎರಡನೇ ಹೆಜ್ಜೆಯಲ್ಲಿ ಭೂಮಂಡಲದಲ್ಲಿ ವಿಸ್ತರಿಸಿದ. ಮೂರನೇ ಹೆಜ್ಜೆಯಲ್ಲಿ ಬಲಿಯ ತಲೆಯನ್ನೇ ಆವರಿಸಿದ. ಇಲ್ಲಿ ನಮಗೆ ಕಂಡುಬರುವ ವಿಚಾರ – ಯಾವುದೂ ಅತಿಯಾಗಕೂಡದು. ಅತಿಯಾದುದಕ್ಕೆ ಇತಿ ಹಾಡಿದಾಗ ಜೀವನ ವಿಕಾಸ ಸಾಧ್ಯ” ಎಂದರು.
ಉಡುಪಿ ವಲಯದ ಕಾರ್ಕಳ ತಾಲೂಕಿನ ಯೋಜನೆಯ ಬಂಧುಗಳು ನಿರ್ವಹಿಸಿದ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಉಡುಪಿ ವಲಯಾಧ್ಯಕ್ಷ ಶ್ರೀ ಕೆ. ಪ್ರಭಾಕರ್ ಶೆಟ್ಟಿ, ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಉಡುಪಿ ಘಟಕದ ಸದಸ್ಯರಾದ ಶ್ರೀ ಜಿ.ಎನ್. ಕೋಟ್ಯಾನ್, ಶ್ರೀ ಕೃಷ್ಣ ಶೆಟ್ಟಿಗಾರ್, ಅಜೆಕ್ಕಾರು ಘಟಸಮಿತಿಯ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಕೇರ್ವಾಶೆ ಘಟಸಮಿತಿಯ ಕಾರ್ಯದರ್ಶಿ ಸುನೀತಾ ಇವರು ದೀಪ ಬೆಳಗಿಸಿದರು.
ನಂತರ ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ ಜರಗಿದವು. ಸೇವಾದೀಕ್ಷಿತೆ ರೂಪ ಸ್ವಾಗತಿಸಿ, ಸಂಯೋಜಕಿ ಶ್ರೀಮತಿ ಚಂದ್ರಿಕಾ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.