“ಅಂತರಂಗದ ಆನಂದ ಅನುಭವಿಸಲು ಅಂತರ್‍ದೃಷ್ಟಿ ಅವಶ್ಯ” – ಒಡಿಯೂರು ಶ್ರೀ

ಕನ್ಯಾನದಲ್ಲಿ ಬೃಹತ್ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ
“ಪಂಚೇಂದ್ರಿಯಗಳಲ್ಲಿ ಶ್ರೇಷ್ಠವಾದುದು ಕಣ್ಣು. ಆಧುನಿಕ ಉಪಕರಣಗಳ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಅತಿಯಾಗಿದೆ. ಬಾಹ್ಯ ಕಣ್ಣಿಗಿಂತ ಜ್ಞಾನದ ದೃಷ್ಟಿ ಅಗತ್ಯವಾಗಿ ಮನುಷ್ಯನಿಗೆ ಬೇಕು. ಅಂತರಂಗದ ಆನಂದ ಅನುಭವಿಸಲು ಅಂತರ್‍ದೃಷ್ಟಿಯು ಅವಶ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕನ್ಯಾನ ಶ್ರೀ ಗುರುದೇವ ಕಲ್ಯಾಣ ಮಂಟಪದಲ್ಲಿ ಜರಗಿದ ಬೃಹತ್ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಶ್ರೀ ಮಹಾಬಲ ಸ್ವಾಮೀಜಿ, ಒಡಿಯೂರು ಶ್ರೀ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ, ಎಸ್ಸಿಲಾರ್ ವಿಷನ್ ಫೌಂಡೇಶನ್‍ನ ಹಿರಿಯ ವ್ಯವಸ್ಥಾಪಕರಾದ ಶ್ರೀ ಧರ್ಮಪ್ರಸಾದ್ ರೈ, ಪ್ರಸಾದ ನೇತ್ರಾಲಯದ ವೈದ್ಯರಾದ ಡಾ. ಅವಿನಾಶ್, ಡಾ. ಗುಣಶ್ರೀ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಶ್ರೀ ಪಿ. ಲಿಂಗಪ್ಪ ಗೌಡ, ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ, ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ಶ್ರೀ ಬಾಲಕೃಷ್ಣ ರಾವ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕನ್ಯಾನ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ಕೆ.ಪಿ. ರಘುರಾಮ ಶೆಟ್ಟಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ಕನ್ಯಾನ ಗ್ರಾಮ ಸಮಿತಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರು, ಎಸ್ಸಿಲಾರ್ ವಿಷನ್ ಫೌಂಡೇಶನ್, ಬೆಂಗಳೂರು, ನೇತ್ರಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚ್ಯಾರಿಟೇಬಲ್ ಟ್ರಸ್ಟ್ (ರಿ.), ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಇದರ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಸುಮಾರು 360 ಮಂದಿ ಪಾಲ್ಗೊಂಡು 280 ಜನ ಕನ್ನಡಕ ಅಪೇಕ್ಷಿತರು, ಶಸ್ತ್ರಚಿಕಿತ್ಸೆಗೆ 26 ಶಿಬಿರಾರ್ಥಿಗಳು ಆಯ್ಕೆಯಾದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸೇವಾದೀಕ್ಷತೆ ಶ್ರೀಮತಿ ಗುಲಾಬಿ ಪ್ರಾರ್ಥನಾಗೀತೆ ಹಾಡಿದರು. ಕನ್ಯಾನ ಗ್ರಾಮ ಸಮಿತಿಯ ಗೌರವಾಧ್ಯಕ್ಷ ನ್ಯಾಯವಾದಿ ಶ್ರೀ ಪಿ.ಎಸ್. ರವೀಂದ್ರನಾಥ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಶ್ರೀ ಮಾತೇಶ್ ಭಂಡಾರಿ ವಂದಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸೇವಾದೀಕ್ಷಿತ ಶ್ರೀ ರಾಧಾಕೃಷ್ಣ ಆರ್.ಕೆ. ಕಾರ್ಯಕ್ರಮ ನಿರೂಪಿಸಿದರು.