+91 8255-266211
info@shreeodiyoor.org

ತ್ಯಾಗ – ಸೇವೆಗಳೇ ಆತ್ಮೋನ್ನತಿಗೆ ಸೋಪಾನಗಳು – ಒಡಿಯೂರು ಶ್ರೀ

 “ಭೋಗದ ಬದುಕು ಬದುಕಲ್ಲ, ತ್ಯಾಗದ ಬದುಕೇ ನಿಜ ಬದುಕು. ತ್ಯಾಗ ಮತ್ತು ಸೇವೆಗಳೇ ಆತ್ಮೋನ್ನತಿಗೆ ಸೋಪಾನಗಳು. ಶ್ರೀಮದ್ರಾಮಾಯಣ, ಶ್ರೀಮನ್ಮಹಾಭಾರತ ಇವೆರಡು ಮಹಾಕಾವ್ಯಗಳು ಭಾರತೀಯ ಸಂಸ್ಕøತಿಯನ್ನು ಪ್ರತಿನಿಧಿಸುತ್ತದೆ. ಬದುಕನ್ನು ರೂಪಿಸುವ ಪಠ್ಯಗಳು ಈ ಕಾವ್ಯಗಳಾಗಿವೆ. ಇದೀಗ ಶ್ರೀ ರಾಮನವಮಿ ಹಾಗೂ ಹನುಮಜ್ಜಯಂತಿಯನ್ನು ಆಚರಿಸುವ ಪರ್ವಕಾಲ. ವಸಂತ ಋತು, ಚೈತ್ರ ಮಾಸದಲ್ಲಿ ಬರುವಂತಹ ಈ ದಿನಗಳು ಆರಾಧನಾ ಯೋಗ್ಯವಾಗಿರುವುದು. ರಾಮಾಯಣ, ಮನುಷ್ಯನ ಭೂತ, ವರ್ತಮಾನ, ಭವಿಷ್ಯತ್ತುಗಳನ್ನು ತಿಳಿಸಿಕೊಡುತ್ತದೆ. ಅಂದರೆ ಕಳೆದ, ನಡೆಯುತ್ತಿರುವ ಹಾಗೂ ಭವಿಷ್ಯತ್ತಿನ ವಿಚಾರಗಳು ಗೋಚರಕ್ಕೆ ಬರುತ್ತವೆ. ಉಳಿದುದು ಉತ್ತಮವಾಗಿರಬೇಕಾದರೆ, ವರ್ತಮಾನ ಚೆನ್ನಾಗಿರಬೇಕು. ಅಂದರೆ ವರ್ತಮಾನದಲ್ಲಿ ನಡೆಸುವ ಕರ್ಮಗಳು ಧರ್ಮಯುಕ್ತವಾಗಿದ್ದರೆ ಅದು ಭವಿಷ್ಯತ್ತಿಗೆ ಮುಡಿಪು. ಬದುಕಿನ ಆಗು-ಹೋಗುಗಳು ವರ್ತಮಾನವನ್ನು ಅವಲಂಬಿಸಿರುತ್ತದೆ, ಕಳೆದುದನ್ನು ಮರುಕಳಿಸುತ್ತದೆ. ಆದ್ದರಿಂದ ಒಳಿತಾಗಿಸುವ ಅಥವಾ ಕೆಡುಕಾಗಿಸುವ ಪ್ರಕ್ರಿಯೆಗಳು ವರ್ತಮಾನದಲ್ಲಿ ಅಡಗಿದೆ.

ಅದಕ್ಕಾಗಿಯೇ ರಾಮನು ನಡೆದ, ಕೃಷ್ಣನು ನುಡಿದ ಎಂದು ತ್ರೇತಾಯುಗ, ದ್ವಾಪರಯುಗಗಳು ನೆನಪಿಸುತ್ತದೆ. ಇಂತಹ ಮಹಾಕಾವ್ಯಗಳು ಆತ್ಮವಿಶ್ವಾಸವನ್ನು ಜನರಲ್ಲಿ ಹೆಚ್ಚಿಸುತ್ತದೆ. ಆರೋಗ್ಯವನ್ನು ಕಾಪಾಡುತ್ತದೆ. ಮನುಷ್ಯನು ಆಹಾರ-ವಿಹಾರಗಳಲ್ಲಿ, ನಡೆ-ನುಡಿಗಳಲ್ಲಿ ಮೌಲ್ಯಗಳನ್ನು ಕಾಯ್ದುಕೊಳ್ಳುವುದರಿಂದ ಅಂತಃಸತ್ವಗಳು ಹೆಚ್ಚಾಗುತ್ತದೆ. ಇದೀಗ ದೇವಾಲಯಗಳಲ್ಲಿ ಸಾರ್ವಜನಿಕವಾಗಿ ಸೇವೆಗೆ ಅವಕಾಶಗಳಿಲ್ಲದಿದ್ದರೂ ಭಯಗೊಳ್ಳಬೇಕಾಗಿಲ್ಲ. ಪ್ರಾರ್ಥನೆಗಳು, ಜಯಂತ್ಯುತ್ಸವಗಳೆಲ್ಲ ವಿಶ್ವಕಲ್ಯಾಣಕ್ಕಾಗಿಯೇ ಹೊರತಾಗಿ ಸ್ವಾರ್ಥಕ್ಕಲ್ಲ.

ಜನರನ್ನು ಕಾಡುತ್ತಿರುವ ಮಹಾಮಾರಿಯ ಎರಡನೇ ಅಲೆ ಎದ್ದಿರುವುದು ಎಲ್ಲರನ್ನೂ ಭಯಭೀತರನ್ನಾಗಿಸಿದೆ. ಆದರೆ ಎಚ್ಚೆತ್ತುಕೊಳ್ಳಬೇಕಾದಂತಹ ಅನಿವಾರ್ಯತೆ ಇದೆ. ನಿರ್ಭೀತರಾಗಿ ಬದುಕೋಣ. ಆತ್ಮವಿಶ್ವಾಸದಿಂದ ಬದುಕೋಣ. ಈಗಾಗಲೇ ಸರಕಾರ ಘೋಷಿಸಿರುವಂತಹ ಲಸಿಕೆಗಳನ್ನು ಹಾಕಿಸಿಕೊಳ್ಳವುದರಿಂದ ಉತ್ತಮ ಫಲಿತಾಂಶ ದೊರೆಯಬಹುದು. ಎಲ್ಲದಕ್ಕೂ ಮುಖ್ಯವಾಗಿ ಮುಂಜಾಗ್ರತಾಕ್ರಮ ಅಗತ್ಯವಾಗಿರುವುದು. ಅಸಡ್ಡೆ, ಆಲಸ್ಯ, ಉದಾಸೀನತೆ ಸಲ್ಲದು. ಆರೋಗ್ಯಪೂರ್ಣ ಸಮಾಜವನ್ನು ಕಟ್ಟೋಣ.. ಬೆಳೆಸೋಣ. ರಾಮನ ಆದರ್ಶ ಆಂಜನೇಯನ ಸೇವಾಕೈಂಕರ್ಯ ಆದರ್ಶ ರಾಷ್ಟ್ರ ನಿರ್ಮಾಣಕ್ಕೆ ಸೋಪಾನ. ಅದಕ್ಕಾಗಿಯೇ ರಾಮಾಯಣವು ಜೀವನಮೌಲ್ಯಕ್ಕೆ ಇನ್ನೊಂದು ಹೆಸರು. ನಾಣ್ಯದ ಚಲಾವಣೆಗೆ ಹೇಗೆ ಎರಡು ಮುಖಗಳು ಅಗತ್ಯ. ಹಾಗೆಯೇ ರಾಮ ಮತ್ತು ಹನುಮ ಬದುಕಿನ ವಿಕಾಸಕ್ಕೆ ಅಗತ್ಯ. ಸುಸಂಸ್ಕøತರಾಗಿ ಬದುಕೋಣ. ಆದರ್ಶ ರಾಷ್ಟ್ರ ನಿರ್ಮಾಣಕ್ಕೆ ಪ್ರಜ್ಞಾವಂತ ಪ್ರಜೆಗಳಾಗೋಣ” ಎಂದು ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಹನುಮ ಜಯಂತಿಯ ಸಂದೇಶ ನೀಡಿದರು.

ಶ್ರೀ ಸಂಸ್ಥಾನದಲ್ಲಿ ಸರಕಾರದ ಕೋವಿಡ್ ನಿಯಮದನ್ವಯ ಸರಳವಾಗಿ ಶ್ರೀ ಮದ್ರಾಮಾಯಣ ಯಜ್ಞದೊಂದಿಗೆ ಶ್ರೀ ಹನುಮೋತ್ಸವವನ್ನು ಆಚರಿಸಲಾಯಿತು. ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top