ಅ.22: “ಆಯುಷ್ಯ, ಆರೋಗ್ಯ, ಯಶಸ್ಸು ಕರುಣಿಸುವವನೇ ಧನ್ವಂತರೀ. ಜಲೂಕವನ್ನು ಧರಿಸಿ ಅವತರಿಸಿದ ಧನ್ವಂತರೀ ದೇವರನ್ನು ಕಂಡಾಗ ಎಲ್ಲ ಗಿಡಗಳಲ್ಲಿಯೂ ಔಷಧೀಯ ಗುಣವಿದೆ ಎಂಬುದನ್ನು ತಿಳಿಯಬಹುದು. ನಾವು ಸೇವಿಸುವ ಆಹಾರವೇ ಔಷಧಿಯಾಗಬೇಕು. ವಾರಕ್ಕೊಂದು ಉಪವಾಸ ಮಾಡಲು ದಾಸರು ತಿಳಿಸಿದ್ದಾರೆ. ಇದರ ಉದ್ದೇಶವೇ ಆರೋಗ್ಯವನ್ನು ಕಾಪಿಡುವುದಾಗಿದೆ. ಧನ್ವಂತರೀ ಜಯಂತಿಯ ಆಚರಣೆ ಸಂಸ್ಕೃತಿಯನ್ನು ಉಳಿಸುವುದಾಗಿದೆ. ಸಂಸ್ಕೃತಿಯನ್ನು ಬೆಳೆಸಬೇಕಾದರೆ ಸಂಸ್ಕಾರ ಅಗತ್ಯ. ತುಳುನಾಡಿನ ಸಂಸ್ಕೃತಿಯ ಬಗ್ಗೆ ಅರಿವಿದಲ್ಲದವರು ಅವಹೇಳನ ಮಾಡಬಹುದು. ಲೋಕದ ಹಿತವನ್ನು ಕಾಪಿಡಲು, ಇಹದಿಂದ ಪರಕ್ಕೆ ಸಾಗಬೇಕಾದರೆ ಸತ್ಕರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮುದ್ರ ಮಥನದಿಂದ ಸುವಸ್ತುಗಳ ಜೊತೆಗೆ ಧನ್ವಂತರೀಯ ಅವತಾರವಾಯಿತು. ನಮ್ಮ ಜೀವನದಲ್ಲಿ ಜಲಮಂಥನವಾಗದೆ ಮನ ಮಂಥನವಾಗಬೇಕು. ಜೀವನದಲ್ಲಿ ಬರುವ ಕಷ್ಟಗಳನ್ನು ಸೋಪಾನವನ್ನಾಗಿಸಿದಾಗ ಮೇಲಕ್ಕೇರಲು ಸುಗಮವಾಗುವುದು. ಪರಿಶ್ರಮದಿಂದ ನಮ್ಮ ಬದುಕನ್ನು ನಾವೇ ರೂಪಿಸೋಣ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಜಯಂತಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಜರಗಿದ ಶ್ರೀ ಧನ್ವಂತರೀ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನಗೈದರು.
ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಧನ್ವಂತರೀ ಹವನ ಸಂಪನ್ನಗೊಂಡಿತು. ಈ ಸುಸಂದರ್ಭ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಹಾಗೂ ಗುರುಬಂಧುಗಳು ಉಪಸ್ಥಿತರಿದ್ದರು.