“ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಾಗಬೇಕು. ನಾವು ಯಾರು ಎಂಬ ಅರಿವು ನಮ್ಮಲ್ಲಿ ಮೂಡಿದಾಗ ಬದುಕು ಸುಂದರವಾಗುವುದು. ವ್ಯಕ್ತಿತ್ವವಿಕಸನಕ್ಕೆ ಪೂರಕವಾದ ಇಂತಹ ಶಿಬಿರಗಳಿಂದ, ಸಾಹಿತ್ಯಗಳನ್ನು ಓದುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುವುದು. ಮನಸ್ಸು ಮತ್ತು ಶರೀರದ ಸ್ವಾಸ್ತ್ಯವನ್ನು ಕಾಪಿಡುವುದು ಯೋಗ. ಮನಸ್ಸೇ ನಮಗೆ ಶತ್ರು ಮತತು ಮಿತ್ರ. ಮಿತ್ರತ್ವವನ್ನು ಬೆಳೆಸಿಕೊಂಡಾಗ ಶತ್ರುಗಳಿರುವುದಿಲ್ಲ. ದೇಶಪ್ರೇಮದ ಜೊತೆಗೆ ಧರ್ಮಶ್ರದ್ಧೆಯು ಬೇಕು. ಶರದೃತುವಿನಲ್ಲಿ ಆಕಾಶ ಶುಭ್ರವಾಗಿರುವಂತೆ ನಮ್ಮ ಬದುಕು ಶುಭ್ರವಾಗಿರಬೇಕು. ಕ್ಷಣ ಕ್ಷಣಕ್ಕು ಕಲಿಯುವವರಾಗಬೇಕು. ಆಗ ಮಾತ್ರ ನಾವು ಸುದೃಢರಾಗಲು ಸಾಧ್ಯ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠವು ಆಯೋಜಿಸಿದ ಶರದೃತು ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸುಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ಶ್ರೀ ಮಲಾರು ಜಯರಾಮ ರೈ , ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಗಿರಿ ಕಲ್ಲಡ್ಕ, ಮೈತ್ರೇಯಿ ಗುರುಕುಲದ ಭಗಿನಿ ಕು| ಪಾರ್ವತಿ, ಸ.ಹಿ. ಪ್ರಾ. ಶಾಲೆ ಕುವೆಟ್ಟು ಇಲ್ಲಿಯ ನಿವೃತ್ತ ಶಿಕ್ಷಕ ಶ್ರೀ ಕರುಣಾಕರ ಉಚ್ಚಿಲ್, ಶಿಬಿರಾರ್ಥಿಗಳಾದ ವೈಶಾಖ್ ಮತ್ತು ಮೇಘನಾ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಶ್ರೀರಕ್ಷಾ, ವಿದ್ಯಾಲಕ್ಷ್ಮೀ, ಶ್ರೀರಕ್ಷಾ, ಪಲ್ಲವಿ, ನಿಶ್ಮಿತಾ ಇವರ ಆಶಯಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್.ರೈ ಸ್ವಾಗತಿಸಿ, ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಪ್ರಸ್ತಾವನೆಗೈದರು. ಸಹಶಿಕ್ಷಕಿ ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ, ಅರುಣಾಕುಮಾರಿ ವಂದಿಸಿದರು.