+91 8255-266211
info@shreeodiyoor.org

ಶ್ರೀ ಒಡಿಯೂರು ರಥೋತ್ಸವ

“ಧಾರ್ಮಿಕ ಕೇಂದ್ರಗಳಲ್ಲಿ ಭಾರತದ ನೈಜ ಅಂತಃಸತ್ವ ಅಡಗಿದೆ”
ಒಡಿಯೂರು ಸಂಸ್ಥಾನದಲ್ಲಿ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ – ತುಳು ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ – ಒಡಿಯೂರು ಶ್ರೀ

 

“ನಾವು ನಮ್ಮ ದೇಶ, ರಾಜ್ಯದ ಬಗ್ಗೆ ಯೋಚನೆ ಮಾಡಬೇಕಾದ ಕಾಲಘಟ್ಟದಲ್ಲಿದ್ದೇವೆ. ಸಮಾಜದ ಹಿತವನ್ನು ಕಾಯುವ ಕೆಲಸ ಎಲ್ಲರಿಂದಲೂ ಆಗಲಿ. ಜನಹಿತವನ್ನು ಕಾಪಿಡುವ ಕೆಲಸ ಸರಕಾರದಿಂದ ಆಗಬೇಕಿದೆ. ಜನರ ಸೇವೆಯೇ ಜನಾರ್ದನ ಸೇವೆ. ಪಾರಮಾರ್ಥಿಕ ಚಿಂತನೆ ಇಲ್ಲದಿದ್ದರೆ ಯಶಸ್ಸಾಗಲು ಸಾಧ್ಯವಿಲ್ಲ. ಈಗಿನ ಪೀಳಿಗೆಗೆ ಆಧ್ಯಾತ್ಮ ಶಿಕ್ಷಣದ ಅವಶ್ಯಕತೆಯಿದೆ. ರಾಷ್ಟ್ರಪ್ರೇಮದೊಂದಿಗೆ ದೇವರ ಭಕ್ತಿ ತುಂಬುವ ಕೆಲಸವಾಗಬೇಕು. ರಾಸಾಯನಿಕ ಬಿಟ್ಟು ಸಾವಯವದತ್ತ ಒಲವು ತೋರುವ ಅಗತ್ಯವಿದೆ. ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯ. ಅಧರ್ಮವನ್ನು ಮೆಟ್ಟಿ ನಿಲ್ಲುವ ಕೆಲಸ ತಾಯಂದಿರಿಂದ ಆಗಬೇಕು. ಯುವ ಸಮುದಾಯ ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕೆ ಪಣತೊಡಬೇಕು. ಪ್ರತೀ ಮನೆ ಧಾರ್ಮಿಕ ಶಿಕ್ಷಣಕೇಂದ್ರಗಳಾಗಬೇಕು. ನಮ್ಮ ಜೀವನ ಪಥ ಸರಿಯಾಗಿರಬೇಕು. ಧರ್ಮ ಶಿಕ್ಷಣದತ್ತ ವಿದ್ಯಾರ್ಥಿಗಳ ಚಿತ್ತ ಹರಿಯಬೇಕು. ಸತ್ಪಥದಲ್ಲಿ ಸಾಗುವ ಪ್ರಯತ್ನ ಎಲ್ಲರಿಂದಲೂ ಆಗಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಭಾರತದ ನೈಜ ಅಂತಃಸತ್ವ ಅಡಗಿದೆ. ಭಾರತೀಯತೆಯ ಶಕ್ತಿ ಅಪಾರ. ಅಧ್ಯಾತ್ಮಿಕ ತತ್ವಕ್ಕೆ ವಿಶೇಷ ಸ್ಥಾನಮಾನವಿದೆ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜ.31ರಂದು ನಡೆದ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಹಾಗೂ ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.ಸಾಧ್ವೀ ಶ್ರೀ ಶ್ರೀ ಮಾತಾನಂದಮಯೀ ರವರು ದಿವ್ಯ ಸಾನಿಧ್ಯ ಕರುಣಿಸಿದ್ದರು.ಮುಖ್ಯ ಅತಿಥಿ ಸಂಸದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಮಲಾರು ಜಯರಾಮ ರೈ ಬರೆದ ಒಡಿಯೂರು ಶ್ರೀಗಳ ಪ್ರವಚನಗಳ ದ್ರಷ್ಟಾ೦ತ ಕತೆಗಳ ಮಾಲಿಕೆ ‘ಕತೆ ಪಂಡೆನ ಜೋಗಿ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ “ವ್ಯಕ್ತಿ ನಿರ್ಮಾಣದ ಮೂಲಕ ರಾಮರಾಜ್ಯ ನಿರ್ಮಾಣ ಸಾಧ್ಯ. ಒಡಿಯೂರು ಶ್ರೀಗಳ ಗ್ರಾಮಾಭಿವೃದ್ಧಿಯ ಪರಿಕಲ್ಪನೆಗಳು ಅಭಿನಂದನೀಯ. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಮನೆಮನೆಗಳಲ್ಲಿ ರಾಮನ ಸೃಷ್ಟಿ ಆಗಬೇಕು. ಗಾಂಧೀಜಿ ಅವರ ಗ್ರಾಮರಾಜ್ಯದ ಪರಿಕಲ್ಪನೆ ಗ್ರಾಮವಿಕಾಸದ ಮೂಲಕ ಒಡಿಯೂರು ಶ್ರೀಗಳವರಿಂದ ನನಸಾಗಿದೆ, ಭಾರತವಿಂದು ಸಾಂಸ್ಕೃತಿಕವಾಗಿ ಎದ್ದು ನಿಲ್ಲುವ ಅಗತ್ಯತೆ ಬಹಳಷ್ಟಿದೆ. ತುಳು, ಭಾಷೆ, ಪರಂಪರೆಗೆ ಧರ್ಮಸ್ಥಳ ಮತ್ತು ಒಡಿಯೂರು ಕ್ಷೇತ್ರದ ಕೊಡುಗೆ ಅಪಾರ. ತುಳು ಭಾಷೆ ¸ಸಂಕೃತಿ ಉಳಿವಿಗೆ ಶ್ರೀ ಸಂಸ್ಥಾನದ ಕೊಡುಗೆ ಅಭಿನಂದನಾರ್ಹ” ಎಂದರು.
ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ “ಪೂಜ್ಯ ಸ್ವಾಮೀಜಿಯವರು ಧಾರ್ಮಿಕತೆಯೊಂದಿಗೆ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿರುವುದು ಅಭಿನಂದನೀಯ. ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿಯಲ್ಲಿ ನಾವು ಸದಾ ಕೈಜೋಡಿಸುತ್ತೇವೆ. ನಮಗೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ” ಎಂದರು.ಮುಂಬೈ ಹೇರಂಭ ಇಂಡಸ್ಟ್ರೀಸ್‍ನ ಮಾಲಕರಾದ ಶ್ರೀ ಸದಾಶಿವ ಶೆಟ್ಟಿ ಕೂಳೂರುಕನ್ಯಾನ ಇವರು ಮಾತನಾಡಿ “ಒಡಿಯೂರಿನ ಹೆಸರು ಹತ್ತೂರಿನಲ್ಲಿ ಪಸರಿಸಿದ ಶ್ರೀಗಳ ಪ್ರಯತ್ನ ಅಪಾರ. ನಮ್ಮ ಭಾರತ ದೇಶದಲ್ಲಿ ಆದ್ಯಾತ್ಮಿಕ ಶಕ್ತಿ ಬಹಳಿಷ್ಟಿದೆ. ಹಿರಿಯರ ಸಂಸ್ಕøತಿ ಸಂಸ್ಕಾರವನ್ನು ನಾವು ಮೈಗೂಡಿಸಿಕೊಳ್ಳಬೇಕು. ಭಕ್ತಿ ಶ್ರದ್ದೆ ನಮ್ಮಲ್ಲಿರಬೇಕು. ಇಲ್ಲಿ ಗುರು ಶಕ್ತಿಯ ಸಂಚಯನವಾಗುತ್ತದೆ. ನಿಸ್ವಾರ್ಥ ತ್ಯಾಗದಲ್ಲಿ ಗುರುಕೃಪೆ ಇದೆ. ಕಷ್ಟದಲ್ಲಿರುವವರ ಕಣ್ಣೀರೊರೆಸುವ ಕೆಲಸ ಸಂಸ್ಥಾನದಿಂದ ಆಗುತ್ತಿದೆ” ಎಂದರು.ಮುಂಬೈ ಸಂಜೀವನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಸುರೇಶ್ ಎಸ್.ರಾವ್ ಇವರು ಮಾತನಾಡಿ “ಇಲ್ಲಿನ ಶಕ್ತಿ ಅಪಾರ. ಇಂತಹ ಗುರುಗಳನ್ನು ಪಡೆದ ಈ ಗ್ರಾಮಸ್ಥರು ಧನ್ಯರು. ತಾಳ್ಮೆಯ ಪ್ರತಿರೂಪ ಶ್ರೀಗಳು. ಕ್ಷೇತ್ರದ ಬೆಳವಣಿಗೆಗೆ ಶ್ರೀಗಳ ಶ್ರಮ ಅಪಾರ. ಎಲ್ಲರನ್ನು ಜೊತೆಯಾಗಿ ಕೊಂಡೊಯ್ಯುವ ಅವರ ಜಾಣ್ಮೆ ಮೆಚ್ಚಲೇಬೇಕು” ಎಂದರು.ತುಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ವಸಂತಕುಮಾರ ಪೆರ್ಲರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇವರನ್ನು ಶ್ರೀ ಸಂಸ್ಥಾನದ ವತಿಯಿಂದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಇಬ್ಬರು ಅರ್ಹ ಫಲಾನುಭವಿಗಳಿಗೆ ಗಾಲಿಕುರ್ಚಿಯನ್ನು ವಿತರಿಸಲಾಯಿತು. ದಾವಣಗೆರೆ ಹೂವಿನಹಡಗಲಿಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ವತಿಯಿಂದ ನಿರ್ಮಾಣಗೊಳ್ಳಲಿರುವ ಗುರು ಮಂದಿರ ನಿರ್ಮಾಣದ ಶಿಲಾನ್ಯಾಸದ ಆಮಂತ್ರಣ ಪತ್ರಿಕೆಯನ್ನು ಪೂಜ್ಯ ಶ್ರೀಗಳವರು ಬಿಡುಗಡೆಗೊಳಿಸಿದರು.ಶ್ರೀಮತಿ ವಿಜಯಲಕ್ಷ್ಮೀ ಡಾ. ಸುರೇಶ್ ಎಸ್.ರಾವ್, ಮುಂಬೈನ ಉದ್ಯಮಿಗಳಾದ ವಾಮಯ್ಯ ಬಿ. ಶೆಟ್ಟಿ ಚೆಂಬೂರು, ದಯಾನಂದ ಹೆಗ್ಡೆ ಮುಂಬೈ, ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತುಳುಸಿರಿ ಮಾನಾದಿಗೆ:
ಇದೇ ಸಂದರ್ಭದಲ್ಲಿ ಹಿರಿಯ ಮೃದಂಗ ವಾದಕ ವಿದ್ವಾನ್ ಬಾಬು ರೈ ಕಾಸರಗೋಡು, ತುಳು ಸಾಹಿತಿ ಡಾ. ಸಾಯಿಗೀತಾ ತೋಕೂರುಗುತ್ತು, ಸಹಕಾರಿಯ ಸಾಧಕ ಎಸ್.ಬಿ. ಜಯರಾಮ ರೈ, ತುಳುನಾಡಿನ ಹಳೆಯ ವಸ್ತುಗಳ ಸಂಗ್ರಾಹಕ ಸುಧಾಕರ ಶೆಟ್ಟಿ ಹಿರ್ಗಾನ, ಸಾವಯವ ಕೃಷಿಕ ರಾಮಣ್ಣ ಗೌಡ ಕಣಿಯೂರು ಇವರಿಗೆ ‘ತುಳುಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶಿಕ್ಷಕಿಯರಾದ ಜ್ಯೋತಿ, ಸವಿತಾ, ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಯಾನಂದ ಶೆಟ್ಟಿ, ಲೀಲಾ ಪಾದೆಕಲ್ಲು, ಗ್ರಾಮವಿಕಾಸ ಯೋಜನೆಯ ಮೇಲ್ವಿಚಾರಕ ಯಶೋಧರ ಸಾಲ್ಯಾನ್ ಸನ್ಮಾನ ಪತ್ರ ವಾಚಿಸಿದರು.
ತುಳುನಾಟಕೋತ್ಸವ – ತುಳು ನಾಟಕ ಸ್ಪರ್ದೆಯ ಬಹುಮಾನ ವಿತರಣೆ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಶ್ರೀ ಗುರುದೇವಾನಂದ ಸ್ವಾಮಿಗಳ ಮಾರ್ಗದರ್ಶನದಲ್ಲಿ ಡಿ. 1ರಿಂದ ಡಿ.7ರ ತನಕ ಶ್ರೀದತ್ತ ಜಯಂತಿ ಮಹೋತ್ಸವ – ಶ್ರೀದತ್ತ ಮಹಾಯಾಗ ಸಪ್ತಾಹದ ಅಂಗವಾಗಿ ನಡೆದ ಒಡಿಯೂರು ತುಳು ನಾಟಕೋತ್ಸವ-ತುಳು ನಾಟಕ ಸ್ಪರ್ಧೆಯಲ್ಲಿ ಪೊ| ಅಮೃತ ಸೋಮೇಶ್ವರ ರಚಿಸಿ, ವಿದ್ದು ಉಚ್ಚಿಲ್ ನಿರ್ದೇಶನದ, ಜರ್ನಿ ಥೇಟರ್ ಮಂಗಳೂರು ಇವರು ಪ್ರಸ್ತುತ ಪಡಿಸಿದ ‘ಗೋಂದೊಳು’ ಪ್ರಥಮ ಬಹುಮಾನ ಪಡೆದುಕೊಂಡಿತ್ತು. ನವೀನ್ ಸಾಲ್ಮಾನ್ ಪಿತ್ರೋಡಿ ರಚಿಸಿ, ಪ್ರಭಾಕರ ಆಚಾರ್ಯ ಮೂಡುಬೆಳ್ಳೆ ನಿರ್ದೇಶಿಸಿದ, ಕಲಾಚಾವಡಿ (ರಿ.), ಅಂಬಲಪಾಡಿ ಇವರು ಪ್ರದರ್ಶಿಸಿದ ನಾಟಕ ‘ಮೋಕೆದ ಮದಿಮಾಲ್’ ದ್ವಿತೀಯ ಬಹುಮಾನ ಹಾಗೂ ಬಾಲಕೃಷ್ಣ ಶಿಬಾರ್ಲ ರಚಿಸಿ, ದಿವಾಕರ ಕಟೀಲು ನಿರ್ದೇಶಿಸಿದ, ಸುಮನಸ ಕೊಡವೂರು ಇವರು ಪ್ರದರ್ಶನಗೈದ ‘ಕಾಪ’ ನಾಟಕ ತೃತೀಯ ಬಹುಮಾನವನ್ನು ಪಡೆದುಕೊಂಡಿತ್ತು. ವಿಜೇತ ತಂಡಗಳಿಗೆ ಹಾಗೂ ನಾಟಕ ಸ್ಪರ್ದೆಯಲ್ಲಿ ವೈಯ್ಯಕ್ತಿಕ ಬಹುಮಾನವನ್ನು ಪಡೆದವರಿಗೆ ಪೂಜ್ಯ ಸ್ವಾಮೀಜಿಯವರು ಬಹುಮಾನ ವಿತರಿಸಿದರು. ನಾಟಕಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಮಂಜು ವಿಟ್ಲ, ಮಹಾಭಲೇಶ್ವರ ಹೆಬ್ಬಾರ್, ಮಧು ಬಂಗೇರ ಸುರತ್ಕಲ್ ರವರನ್ನು ಪೂಜ್ಯ ಸ್ವಾಮೀಜಿಯವರು ಗೌರವಿಸಿದರು. ಕದ್ರಿ ನವನೀತ ಶೆಟ್ಟಿ ಸ್ಪರ್ಧಾ ವಿಜೇತರ ಪಟ್ಟಿವಾಚಿಸಿದರು.ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಒಡಿಯೂರುದ ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಮಾತೇಷ್ ಭಂಡಾರಿ ವಂದಿಸಿದರು.

 

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top