+91 8255-266211
info@shreeodiyoor.org

“ಜಾತ್ರೆ – ಉತ್ಸವಗಳ ಮೂಲಕ ಮಾನವ ಧರ್ಮ ಬಲಗೊಳ್ಳುತ್ತದೆ”

ಶ್ರೀ ಒಡಿಯೂರು ರಥೋತ್ಸವ; ತುಳುನಾಡ್ದ ಜಾತ್ರೆ 2019ರ ಪೂರ್ವಭಾವಿ ಸಭೆಯಲ್ಲಿ – ಒಡಿಯೂರು ಶ್ರೀ

“ಶರೀರವೆಂಬ ರಥಕ್ಕೆ ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕು ಚಕ್ರಗಳು ಅಥವಾ ಕಂಬಗಳು. ಒಂದು ಕಂಬ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಧರ್ಮವೆಂಬ ಕಂಬ ಸಮರ್ಪಕವಾಗಿದ್ದಾಗ ಉಳಿದ ಕಂಬಗಳೆಲ್ಲವೂ ಸಮರ್ಪಕವಾಗಿರುತ್ತವೆ. ಅದು ಬದುಕಿನ ಯಶಸ್ಸು. ಆದುದರಿಂದ ಧರ್ಮದ ಆಧಾರದಲ್ಲಿ ಬದುಕಿನ ರಥ ಸಾಗಬೇಕು. ಜಾತ್ರೆ, ಉತ್ಸವಗಳ ಮೂಲಕ ಮಾನವಧರ್ಮ ಗಟ್ಟಿಯಾಗುತ್ತದೆ. ನಾವು ಮಾನವೀಯ ಮೌಲ್ಯದ ಕೊಂಡಿಯಾಗಬೇಕು. ನಿಸ್ವಾರ್ಥ ಸೇವೆಗೆ ಮುಂದಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆ.14 ಮತ್ತು 15ರಂದು ನಡೆಯಲಿರುವ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2019ರ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದರು.

ಎರಡು ದಿನಗಳ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ ಪೂಜ್ಯ ಶ್ರೀಗಳವರು “ಫೆಬ್ರವರಿ 14ರಂದು ‘ತುಳು ಬದ್ಕ್‍ದ ನಿಲೆ-ಬಿಲೆ’ ಎನ್ನುವ ತುಳು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮಾರಂಭದಲ್ಲಿ ಭಾಗವಹಿಸಿದ ಬಂಧುಗಳಿಗೆ ‘ಅದೃಷ್ಟ ತುಳುವೆ-ಬಂಗಾರ್ ಪೆಜಿವೆ’ ಎಂಬ ಸ್ಪರ್ಧೆ ಆಯೋಜಿಸಲಾಗಿದೆ. ಬೆಳಿಗ್ಗೆ ಘಂಟೆ 9.30ರಿಂದ 12 ಘಂಟೆಯ ಒಳಗಾಗಿ ತುಳುವರು ಈ ಸ್ಫರ್ಧೆಯಲ್ಲಿ ಹೆಸರು ಮತ್ತು ಮೊಬೈಲ್ ನಂಬ್ರವನ್ನು ಬರೆದು ಸೂಕ್ತ ಸ್ಥಳದಲ್ಲಿ ಹಾಕಬೇಕು. 5 ಮಂದಿ ಅದೃಷ್ಟವಂತರನ್ನು ಆಯ್ಕೆ ಮಾಡಲಾಗುತ್ತದೆ. ಅದೃಷ್ಟರಿಗೆ 1 ಗ್ರಾಂ ಚಿನ್ನದ ನಾಣ್ಯ ಬಹುಮಾನವಾಗಿ ಸಿಗಲಿದೆ” ಎಂದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದು, ಸಂಚಾಲಕ ಡಾ. ವಸಂತಕುಮಾರ್ ಪೆರ್ಲ ಇವರು ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳ ಮಾಹಿತಿಯನ್ನು ಸಭೆಯ ಮುಂದಿಟ್ಟರು. ವೇದಿಕೆಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎಂ.ಜೆ.ಎಫ್.| ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಒಡಿಯೂರು ಘಟಕದ ಉಪಾಧ್ಯಕ್ಷ ಶ್ರೀ ದೇವಿಪ್ರಸಾದ್ ಶೆಟ್ಟಿ, ಮಂಗಳೂರು ವಲಯದ ಉಪಾಧ್ಯಕ್ಷ ಶ್ರೀ ವೇಣುಗೋಪಾಲ ಮಾರ್ಲ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕರೋಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ರಘುನಾಥ ಶೆಟ್ಟಿ ಪಟ್ಲಗುತ್ತು, ಕನ್ಯಾನ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ಕೆ.ಪಿ. ರಘುರಾಮ ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಕರೋಪಾಡಿ ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ಶ್ರೀಮತಿ ಬೇಬಿ ಆರ್. ಶೆಟ್ಟಿ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಉಪಸ್ಥಿತರಿದ್ದರು.

ಶ್ರೀ ಸಂಸ್ಥಾನದ ಎಲ್ಲಾ ಸಹಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಶ್ರೀಮತಿ ಭಾರತಿ ಪ್ರಾರ್ಥನೆಗೈದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪತ್ರಕರ್ತ ಶ್ರೀ ಯಶವಂತ್ ವಿಟ್ಲ ಪ್ರಸ್ತಾವನೆಗೈದರು. ಶ್ರೀ ಮಾತೇಶ್ ಭಂಡಾರಿ ವಂದನಾರ್ಪಣೆಗೈದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top