+91 8255-266211
info@shreeodiyoor.org

‘ನಿಃಸ್ವಾರ್ಥ ಸೇವೆಯಿಂದ ರಾಷ್ಟ್ರೋದ್ಧಾರ’ ಒಡಿಯೂರು ಶ್ರೀ

 

“ಸೇವೆಗೆ ಇನ್ನೊಂದು ಹೆಸರು ಆಂಜನೇಯ. ರಾಮನ ಸೇವೆ ಎಂದರೆ ಪರಮೋಚ್ಛವಾದುದು. ಸೇವೆಯಿಂದ ರಾಷ್ಟ್ರದ ಉದ್ಧಾರವಾಗುತ್ತದೆ. ಭಗವಂತನ ಸೇವೆಯನ್ನು ಕರ್ತವ್ಯವೆಂದೇ ಮಾಡಬೇಕು. ರಾಮಾಯಣ ಮತ್ತು ಮಹಾಭಾರತ ದೇಶದ ಸಂಸ್ಕøತಿಯ ಎರಡು ಕಣ್ಣುಗಳು. ಆನಂದದ ನೆಲೆ, ಸಂತೋಷದ ಸೆಲೆ ಅಧ್ಯಾತ್ಮದಲ್ಲಿ ಅಡಗಿದೆ. ಲೌಕಿಕ ಪ್ರಪಂಚದಲ್ಲಿದ್ದುಕೊಂಡೊ ಅಲೌಕಿಕವನ್ನು ಅನುಭವಿಸುವುದು ಸುಲಭವಲ್ಲ. ಕರ್ತವ್ಯಪ್ರಜ್ಞೆಯೊಂದಿಗೆ ಬದುಕು ನಡೆಸಬೇಕು. ಅರ್ಪಣಾಭಾವದ ಸೇವೆಯನ್ನು ಭಗವಂತ ಮೆಚ್ಚುತ್ತಾನೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶುಕ್ರವಾರ ಜರಗಿದ ಹನುಮೋತ್ಸವದ ಧರ್ಮಸಭೆಯಲ್ಲಿ ‘ವೀರಾಂಜನೇಯ ವೈಭವ’(ಸಮಗ್ರ ಹನುಮಾಯನ) ಯಕ್ಷಗಾನ ಕೃತಿಯನ್ನು ಬಿಡುಗಡೆ ಮಾಡಿ ಧರ್ಮಸಂದೇಶ ನೀಡಿದರು.

ಪೂಜ್ಯ ಶ್ರೀಗಳವರು ಈ ಸುಸಂದರ್ಭ ಮನೆಗೆ ಸಂರಕ್ಷಣೆ ನೀಡುವ ಹನುಮಧ್ವಜವನ್ನು ಲೋಕಾರ್ಪಣೆ ಮಾಡಿದರು.ಸಮಾರಂಭದಲ್ಲಿ ‘ವೀರಾಂಜನೇಯ ವೈಭವ’ ಕೃತಿಯನ್ನು ರಚಿಸಿದ ಶ್ರೀ ಹೊಸ್ತೋಟ ಮಂಜುನಾಥ ಭಾಗವತ ಅವರನ್ನು ಪೂಜ್ಯ ಶ್ರೀಗಳವರು ಸನ್ಮಾನಿಸಿದರು. ವೇದಿಕೆಯಲ್ಲಿ ಮುಂಬೈನ ಉದ್ಯಮಿಗಳಾದ ಶ್ರೀ ವಾಮಯ್ಯ ಬಿ. ಶೆಟ್ಟಿ, ಶ್ರೀ ದಾಮೋದರ ಎಸ್. ಶೆಟ್ಟಿ, ಶ್ರೀ ಕೃಷ್ಣ ಎಲ್. ಶೆಟ್ಟಿ, ಡಾ. ಅದೀಪ್ ಕೆ. ಶೆಟ್ಟಿ, ಬೆಂಗಳೂರಿನ ಉದ್ಯಮಿ ಶ್ರೀ ಬಾಲಚಂದ್ರ ಎಂ., ಹಿರಿಯ ಪತ್ರಕರ್ತ ಶ್ರೀ ಮಲಾರು ಜಯರಾಮ ರೈ, ಮುಂಬೈನ ಶ್ರೀಮತಿ ರೇವತಿ ವಿ. ಶೆಟ್ಟಿ, ಮಂಗಳೂರಿನ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಲ| ಎ. ಸುರೇಶ್ ರೈ, ಶ್ರೀ ಎ. ಅಶೋಕ್ ಕುಮಾರ್ ಬಿಜೈ, ಶ್ರೀ ಅಜಿತ್‍ಕುಮಾರ್ ಪಂದಳಮ್, ಶ್ರೀ ಸಿದ್ದರಾಮಪ್ಪ ದಾವಣಗೆರೆ, ಶ್ರೀ ಭರತ್‍ಭೂಷಣ್, ಮಂಗಳೂರು ಇವರು ಉಪಸ್ಥಿತರಿದ್ದರು.

ಶ್ರೀ ರಾಜಗೋಪಾಲ ಕನ್ಯಾನ ಕೃತಿ ಪರಿಚಯ ಮಾಡಿದರು. ಶ್ರೀ ಯಶವಂತ್ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು. ಶ್ರೀ ಸಂತೊಷ್ ಭಂಡಾರಿ ವಂದಿಸಿದರು.

ಪ್ರಾತಃಕಾಲ ಅಖಂಡ ಭಗವನ್ನಾಮ ಸಂಕೀರ್ತನೆಯು ಸಮಾಪನಗೊಂಡಿತು. ಸುಮಾರು 100ಕ್ಕೂ ಮಿಕ್ಕಿ ಭಜನ ಮಂಡಳಿಗಳು ಭಾಗವಹಿಸಿದ್ದವು. ಬಳಿಕ ದೀಪಾರಾಧನೆ, ಶ್ರೀ ಗಣಪತಿ ಹವನ ನಡೆದು, ಶ್ರೀಮದ್ರಾಮಾಯಣ ಮಹಾಯಜ್ಞ ಆರಂಭಗೊಂಡಿತು. ನಾಗದೇವರಿಗೆ ವಿಶೇಷ ನಾಗತಂಬಿಲ, ಪಂಚಾಮೃತ ಅಭಿಷೇಕ ನಡೆಯಿತು. ಮಧ್ಯಾಹ್ನ ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ಜರಗಿತು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ವಿಶ್ವಭಾರತಿ ಯಕ್ಷಸಂಜೀವಿನಿ ಮುಡಿಪು ಇವರಿಂದ ‘ಶ್ರೀರಾಮ ದರ್ಶನ’ ಯಕ್ಷಗಾನ ತಾಳಮದ್ದಳೆ ನಡೆಯಿತು.

ರಾತ್ರಿ ಶ್ರೀ ಹನುಮದ್ವ್ರತ ಪೂಜೆ, ರಂಗಪೂಜೆ, ವಿಶೇಷ ಬೆಳ್ಳಿ ರತೋತ್ಸವ, ಉಯ್ಯಾಲೆ ಸೇವೆ ಸಂಪನ್ನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top