+91 8255-266211
info@shreeodiyoor.org

ಶಿವಶಕ್ತಿ ಜಾಗೃತವಾಗಿದ್ದರೆ ನೆಮ್ಮದಿಯ ಬದುಕು – ಒಡಿಯೂರು ಶ್ರೀ

“ಶಿವ ತ್ಯಾಗದ ಸಂಕೇತ. ಶಿವನ ತ್ಯಾಗದಿಂದಾಗಿ ಪ್ರಪಂಚ ಸುಖವಾಗಿದೆ. ವ್ಯಕ್ತಿಯಲ್ಲಿ ಶಿವಶಕ್ತಿ ಜಾಗೃತವಾಗಿದ್ದರೆ ನೆಮ್ಮದಿಯ ಬದುಕು ಸಾಧ್ಯ. ನಾಥಪಂಥದಿಂದ ಕದಿರೆಯಲ್ಲಿ ಧರ್ಮ ಜಾಗೃತಿಯಾಗಿದೆ. ಕದ್ರಿ ಅಧ್ಯಾತ್ಮ ಸಾಧನೆಯ ಕೇಂದ್ರ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಅನುಗ್ರಹ ಸಂದೇಶ ನೀಡಿದರು.

ಅವರು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಉದ್ಘಾಟನಾ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನಗೈಯುತ್ತಾ “ಮನುಷ್ಯನ ಬದುಕಿನಲ್ಲಿ ಭೋಗ ಮತ್ತು ತ್ಯಾಗ ಎಂಬ ಎರಡು ಭಾಗಗಳು.

ಪ್ರಾಪಂಚಿಕ ಮತ್ತು ಪಾರಮಾರ್ಥಿಕ ಬದುಕು. ಪ್ರಾಪಂಚಿಕ ಬದುಕಿನಲ್ಲಿ ಆರಂಭದಲ್ಲಿ ಸುಖ ಕಂಡರೂ ಕೊನೆಗೆ ಶಾಶ್ವತ ದುಃಖ ಕೊಡುತ್ತದೆ. ಪಾರಮಾರ್ಥಿಕ ಬದುಕಿನಲ್ಲಿ ಆರಂಭದಲ್ಲಿ ಕಷ್ಟ ಕಾರ್ಪಣ್ಯ ಕಂಡರೂ ಕೊನೆಗೆ ಅದು ಅಧ್ಯಾತ್ಮದ ಆನಂದವನ್ನು ನೀಡುತ್ತದೆ. ಶಾಶ್ವತ ಸುಖವನ್ನು ಪಡೆಯುತ್ತೇವೆ. ನಾವು ಆತ್ಮನಿಷ್ಠೆಯ ಅಧ್ಯಾತ್ಮದತ್ತ ಒಲವು ಬೆಳೆಸಿಕೊಳ್ಳಬೇಕು” ಎಂದರು.

ಕದ್ರಿ ಯೋಗೀಶ್ವರ ಮಠದ ಮಠಾಧೀಶರಾದ ರಾಜಗುರು ಶ್ರೀ ನಿರ್ಮಲನಾಥಜೀಯವರು ಆಶೀರ್ವಚನ ನೀಡಿ “ಈಶ್ವರನ ಮಾರ್ಗದರ್ಶನದಲ್ಲಿ ಪರಶುರಾಮರು ಸಮುದ್ರದಂಚಿನಲ್ಲಿ ನಿಂತು ಈ ಕರಾವಳಿಯನ್ನು ಸೃಷ್ಟಿಸಿರುವುದರಿಂದ ಇಲ್ಲಿ ಶಾಂತಿ-ನೆಮ್ಮದಿ ನೆಲೆ ನಿಂತಿದೆ. ಸಾಧು-ಸಂತರು 12 ವರ್ಷಗಳಿಗೊಮ್ಮೆ ಝಂಡಿಯಲ್ಲಿ ಸಾಗಿ ಬಂದು ನೆಲೆನಿಲ್ಲುವ ಕದ್ರಿ ಕ್ಷೇತ್ರದಲ್ಲಿ ಈಶ್ವರ ಸಾನಿಧ್ಯವಿರುವುದು ಸಹಜ” ಎಂದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ವೇ|ಮೂ| ವಾಸುದೇವ ಅಸ್ರಣ್ಣ, ಕದ್ರಿ ದೇವಸ್ಥಾನದ ತಂತ್ರಿಗಳಾದ ವೇ|ಮೂ| ಬ್ರಹ್ಮಶ್ರೀ ದೇರೆಬೈಲು ವಿಠ್ಠಲದಾಸ ತಂತ್ರಿಗಳು, ಕದ್ರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ. ಎ. ಜನಾರ್ದನ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ. ಹರ್ಷೆಂದ್ರ ಕುಮಾರ್, ಕರಾವಳಿ ಕಾಲೇಜಿನ ಸ್ಥಾಪಕಾಧ್ಯಕ್ಷ ಶ್ರೀ ಗಣೇಶ್ ರಾವ್, ಕರ್ನಾಟಕ ಬ್ಯಾಂಕಿನ ಪಿ.ಆರ್.ಒ. ಶ್ರೀ ಶ್ರೀನಿವಾಸ ದೇಶಪಾಂಡೆ, ಮುಂಬೈನ ಉದ್ಯಮಿ ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಉರ್ವ ಮಾರಿಗುಡಿ ದೇವಸ್ಥಾನದ ಅಧ್ಯಕ್ಷ ಶ್ರೀ ಹರಿಶ್ಚಂದ್ರ ಕರ್ಕೇರಾ, ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಶ್ರೀ ಗಣೇಶ್ ಕುಂಟಲ್‍ಪಾದೆ, ಸ್ವಾಗತ ಸಮಿತಿಯ ಸಂಚಾಲಕ ಶ್ರೀ ಸುಂದರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top