+91 8255-266211
info@shreeodiyoor.org

“ಕೌಶಲ್ಯದ ಬದುಕು ಶ್ರೇಷ್ಠ ಬದುಕು”- ಪುಣೆಯಲ್ಲಿ ಒಡಿಯೂರು ಶ್ರೀ

 

“ಬದುಕು ಮತ್ತು ಜೀವನ ಮೌಲ್ಯವನ್ನು ಸಂಸ್ಕಾರಯುತವಾಗಿ ವಿಕಸನಗೊಳಿಸಬಹುದು. ಪರಿಶುದ್ಧ ಹೃದಯದಿಂದ ಸಂಸ್ಕಾರಯುತವಾಗಿ ಬಾಳುವ ಆತ್ಮವಿಶ್ವಾಸದೊಂದಿಗೆ ನಾವು ನಮ್ಮ ಬದುಕನ್ನು ಅಧ್ಯಾತ್ಮದಿಂದ ವೃದ್ಧಿಸಲು ಸಾಧ್ಯ. ಅದಕ್ಕೆ ನಮ್ಮಲ್ಲಿರುವ ಮನಸ್ಸು ಮತ್ತು ಚಿಂತನೆಗಳು ನಿರ್ಮಲವಾಗಿರಬೇಕು. ಮನಸ್ಸು ಎಂಬುವುದು ನಮ್ಮ ದೇಹದ ಒಂದು ಅಗೋಚರ ವಸ್ತು. ಮನಸ್ಸು ಶುಚಿಯಾಗಿ ಶ್ರದ್ಧೆಯಿಂದ ಯಾವುದೇ ಸತ್ಕಾರ್ಯ ಮಾಡಿದರೂ ಅದು ಅಷ್ಟೇ ಶುದ್ಧವಾಗಿ ಸಫಲವಾಗುತ್ತದೆ. ಆತ್ಮಜ್ಞಾನದಿಂದ ಬದುಕುವ ಕಲೆಯಲ್ಲಿ ಧರ್ಮದ ಪಾಲನೆ ಅತಿ ಮುಖ್ಯವಾಗಿದೆ. ಮನುಷ್ಯ ತನ್ನ ಜೀವನದಲ್ಲಿ ಹಲವಾರು ಯೋಚನೆ-ಯೋಜನೆಗಳನ್ನು ಹಾಕಿಕೊಳ್ಳುತ್ತಾನೆ. ಅದು ಬಾಹ್ಯವಾಗಿರುತ್ತದೆ. ಅಂತರಾತ್ಮಕ್ಕೂ ಯೋಚನೆ-ಯೋಜನೆಗಳು ಅಗತ್ಯ. ಸಂಸ್ಕಾರದಿಂದ, ಸತ್ಸಂಗ, ಅಧ್ಯಾತ್ಮಿಕತೆಯಿಂದ ಕೂಡಿದ ಬದುಕುವ ಶೈಲಿಯನ್ನು ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಮೌಲ್ಯ ವೃದ್ಧಿಯಾಗಲು ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಪುಣೆ ಘಟಕದ 15ನೇ ವಾರ್ಷಿಕೋತ್ಸವದಲ್ಲಿ ಆಶೀರ್ವಚನಗೈದರು.

ಪುಣೆ ಮಹಾನಗರದ ತಿಲಕ್ ಸ್ಮಾರಕ ರಂಗಮಂದಿರದಲ್ಲಿ ಜರಗಿದ ಸಮಾರಂಭವನ್ನು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದ ಪೂಜ್ಯ ಶ್ರೀಗಳವರು “ಅಧ್ಯಾತ್ಮಿಕತೆಯೊಂದಿಗೆ ಧರ್ಮದ ಪಾಲನೆ ಮುಖ್ಯ. ಜೀವನ ಮೌಲ್ಯಗಳಿಗೆ ಕ್ರಮಸಂಖ್ಯೆಗಳಿಲ್ಲ. ಅದರ ಶ್ರೇಷ್ಠತೆಯು ನಮ್ಮ ಧರ್ಮ ಪಾಲನೆ ಮತ್ತು ಜೀವನ ಪದ್ಧತಿಯಿಂದ ನಿರ್ಧರಿತವಾಗುತ್ತದೆ. ನಂಬಿಕೆಯ ತತ್ತ್ವದ ಮೇಲೆ ನಾವು ಮಾಡುವ ಸಮಾಜಮುಖಿ ಕಾರ್ಯಗಳು ನಡೆಯಬೇಕು. ಅಧ್ಯಾತ್ಮ ಚಿಂತನೆಯೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಸಂಘಟನೆಯಿಂದ ಜನರಿಗೆ ಫಲ ತಲಪಬಹುದು” ಎಂದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದು “ನಿಸ್ವಾರ್ಥ ಸೇವೆಯಿಂದ ದೇವರ, ಗುರುವರ್ಯರ ಅನುಗ್ರಹ ಪಡೆಯಲು ಸಾಧ್ಯ. ಪುಣೆ ಬಳಗದ ಪ್ರತಿಯೋರ್ವನ ನಿಸ್ವಾರ್ಥ ಸೇವೆ ದೇವರ, ಗುರುವಿನ ಕೃಪೆಗೆ ಪಾತ್ರವಾಗಲಿದೆ. ಸೇವೆ ತ್ಯಾಗಪೂರ್ಣವಾಗಿರಬೇಕು. ಭಗವಂತ ಕರುಣಿಸಿರುವ ಸದವಕಾಶ ಇದಾಗಿದೆ. ತಾಯಿ ನಿಜವಾದ ತ್ಯಾಗಮಯೀ. ಸುಜ್ಞಾನವನ್ನು ದಯಪಾಲಿಸುವ ಗುರುಗಳು ನಮಗೆ ತಾಯಿ ಸಮಾನರು” ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ಧ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಉಡುಪಿ ಘಟಕದ ಅಧ್ಯಕ್ಷ ಶ್ರೀ ಪ್ರಭಾಕರ ಕೆ. ಶೆಟ್ಟಿಯವರು ಮಾತನಾಡಿ “ಸಮಾಜಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗಬಹುದು. ಆದರೆ ಮಾಡುವಂತಹ ಮನಸ್ಸು ದೊಡ್ಡದಿರಬೇಕು. ಅದಕ್ಕೆ ಮುಖ್ಯವಾಗಿ ಮಾರ್ಗದರ್ಶನ ಅಗತ್ಯ. ಅಂತಹ ಮಾರ್ಗದರ್ಶನಕ್ಕೆ ಒಡಿಯೂರು ಶ್ರೀಗಳ ಸಮಾಜಮುಖಿ ಸೇವಾಕಾರ್ಯಗಳನ್ನು ಕಂಡಾಗ ತನ್ನಿಂದ ತಾನೇ ಅದರಲ್ಲಿ ತೊಡಗಿಸಿಕೊಳ್ಳುವ ಭಾಗ್ಯ ನಮಗೆ ಒದಗಿ ಬಂದಿದೆ. ಸಮಾಜ ಸೇವೆ ಕೇವಲ ಹಣ ಇದ್ದರೆ ಮಾತ್ರ ಸಾಧ್ಯ ಎಂಬುದೇನಿಲ್ಲ. ಮನಸ್ಸಿದ್ದರೆ ಹಲವಾರು ಮಾರ್ಗಗಳಿವೆ. ಅದಕ್ಕೆ ಉತ್ತಮ ಸಂಸ್ಕಾರ, ಅಧ್ಯಾತ್ಮಿಕತೆಯ ಧರ್ಮದ ದಾರಿಯನ್ನು ಒಡಿಯೂರು ಶ್ರೀಗಳವರು ಹಾಕಿಕೊಟ್ಟಿದ್ದಾರೆ. ಆ ಪ್ರಕಾರವಾಗಿ ಉಡುಪಿ ವಲಯದಲ್ಲಿ ಕೇವಲ 6 ತಿಂಗಳುಗಳಲ್ಲಿ 230ಕ್ಕೂ ಹೆಚ್ಚಿನ ಗ್ರಾಮ ವಿಕಾಸ ಯೋಜನೆಯ ಸಂಘಗಳು, 9 ಘಟಸಮಿತಿಗಳು ಸ್ಥಾಪಿತಗೊಂಡು ಆ ಮೂಲಕ ಸೇವಾ ಕಾರ್ಯಗಳು ನಡೆಯುತ್ತಿವೆ” ಎಂದರು.

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಪುಣೆ ಘಟಕದ ಅಧ್ಯಕ್ಷ ಶ್ರೀ ಸದಾನಂದ ಶೆಟ್ಟಿಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಒಡಿಯೂರು ಶ್ರೀ ಗುರುದೇವ ಸೇವಾಬಳಗ ಮುಂಬೈ ಘಟಕದ ಅಧ್ಯಕ್ಷ ನ್ಯಾಯವಾದಿ ಶ್ರೀ ಕೃಷ್ಣ ಎಲ್. ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ, ಪುಣೆ ಘಟಕದ ಅಧ್ಯಕ್ಷೆ ಶ್ರೀಮತಿ ಪ್ರೇಮಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ಅರವಿಂದಕುಮಾರ್ ರೈ ಮತ್ತು ಶ್ರೀಮತಿ ದೀಪಾ ಎ. ರೈ ದಂಪತಿಗಳು ಪಾದಪೂಜೆ ನೆರವೇರಿಸಿದರು.
ಇದೇ ಸಂದರ್ಭ ಕಾರ್ಗಿಲ್ ಯುದ್ಧದಲ್ಲಿ ಹಿಮಪಾತಕ್ಕೆ ಬಿದ್ದು ಎರಡು ಕಾಲುಗಳ ಸ್ವಾಧೀನ ವನ್ನು ಕಳೆದುಕೊಂಡು ವ್ಹೀಲ್‍ಚಯರ್‍ನಲ್ಲಿ ಜೀವನನಡೆಸುವ ಪುಣೆಯ ಶ್ರೀ ಶ್ಯಾಮರಾವ್ ಭಟ್ ಅವರನ್ನು ಪುಣೆ ಬಳಗದ ವತಿಯಿಂದ ಪೂಜ್ಯ ಶ್ರೀಗಳವರು ಸನ್ಮಾನಿಸಿ ಫಲಮಂತ್ರಾಕ್ಷತೆಯಿತ್ತು ಹರಸಿದರು.

ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶ್ರೀ ವಿಠ್ಠಲ ನಾಯಕ್ ಕಲ್ಲಡ್ಕ ಇವರಿಂದ ‘ಗೀತಾ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಜರಗಿತು. ಬಳಗ ಹಾಗೂ ಮಹಿಳಾವಿಕಾಸ ಕೇಂದ್ರದ ಸದಸ್ಯೆಯರಿಂದ ಭಜನೆ, ತುಳುನಾಡ ವೈಭವ ನೃತ್ಯ ರೂಪಕ ನಡೆಯಿತು.

ಬಳಗದ ಪ್ರಧಾನ ಕಾರ್ಯದರ್ಶಿ ಶ್ರೀ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿದರು. ಹಿರಿಯ ಪರ್ತಕರ್ತ ಶ್ರೀ ಯಶವಂತ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಬಳಗದ ಜತೆ ಕಾರ್ಯದರ್ಶಿ ಶ್ರೀ ಹರೀಶ್ ಮೂಡಬಿದ್ರೆ ವಂದಿಸಿದರು. ನೆರೆದ ಎಲ್ಲಾ ಗುರುಬಂಧುಗಳಿಗೆ ಪೂಜ್ಯ ಶ್ರೀಗಳವರು ಫಲಮಂತ್ರಾಕ್ಷತೆಯಿತ್ತು ಹರಸಿದರು

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top