+91 8255-266211
info@shreeodiyoor.org

ಮುದ್ದುಕೃಷ್ಣ ವೇಷ ಸ್ಪರ್ಧೆ

 

ಭಗವಾನ್ ಶ್ರೀಕೃಷ್ಣನು ಜಗತ್ತಿಗೇ ಅಧ್ಯಾತ್ಮದ ಬೆಳಕನ್ನು ತೋರಿಸಿದವನು. ಕೃಷ್ಣತತ್ತ್ವವನ್ನು ಮೈಗೂಡಿಸುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ಭಾರತದ ಸಂಸ್ಕೃತಿಯ ಅಂದ-ಚಂದವನ್ನು ಮನಗಾಣಬೇಕಾದರೆ ಮಹಾಭಾರತ, ರಾಮಾಯಣವನ್ನು ಅರಿತುಕೊಳ್ಳಬೇಕು. ನಾವೆಲ್ಲ ಕೃಷ್ಣನ ಕೈಯಲ್ಲಿರುವ ಬೆಣ್ಣೆಗಳಾಗಬೇಕು; ಅಂದರೆ ನಿಷ್ಕಲ್ಮಶ, ಪರಿಶುದ್ಧತೆಯ, ಪ್ರೇಮತತ್ತ್ವದ ಮನೋಭಾವದವರಾಗಬೇಕು. ಕೊಳಲ ಪ್ರತೀಕವಾಗಿ ಷಡ್ವೈರಿಗಳನ್ನು ದೂರೀಕರಿಸಿ ಸುಶ್ರಾವ್ಯಯುತ ಜೀವನವು ನಮ್ಮದಾಗಲಿ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು.

ಅವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜೈ ಗುರುದೇವ ಕಲಾಕೇಂದ್ರ ಒಡಿಯೂರು ಇವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಿದ್ದ ಮುದ್ದುಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಆಶೀರ್ವಚನಗೈದರು.

ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಶ್ರೀ ಕೃಷ್ಣನ ನೆನಪು ಸದಾ ನಮ್ಮಲ್ಲಿದ್ದರೆ ಚೈತನ್ಯ ತುಂಬುತ್ತದೆ. ಅವನ ಸ್ಮರಣೆಯಿಂದಲೂ ಅನುಸ್ಮರಣೆಯೇ ಶ್ರೇಷ್ಠವಾದುದು. ಆ ಮೂಲಕ ನಮ್ಮಲ್ಲಿರುವ ಕ್ಲೇಶಗಳು ದೂರಾಗಿ ಬದುಕಿನಲ್ಲಿ ಸುಖ ಪ್ರಾಪ್ತಿಯಾಗುತ್ತದೆ. ಕೃಷ್ಣ ಎಂದರೆ ಆಕರ್ಷಣೆ, ಸಂತೋಷವನ್ನು ಸೃಷ್ಟಿ ಮಾಡುವ ವ್ಯಕ್ತಿತ್ವ, ಅಂತೆಯೇ ದುರ್ಭಾವನೆಗಳನ್ನು ಹೋಗಲಾಡಿಸಿ ಸದ್ಭಾವನೆಗಳನ್ನು ಪ್ರಚೋದಿಸುವ ಶಕ್ತಿ ಇದೆ. ಮುದ್ದು ಮಕ್ಕಳೆಂದರೆ ಮುಗ್ಧತೆ. ಮುಗ್ಧತೆ ಎಲ್ಲಿದೆಯೋ ಅಲ್ಲಿ ಭಗವಂತನ ಆವಾಸ. ಈ ಮೂಲಕ ಶ್ರೀಕೃಷ್ಣನನ್ನು ಮಕ್ಕಳಲ್ಲಿ ಕಾಣುವಂತಹ ಮುದ್ದುಕೃಷ್ಣ ವೇಷ ಸ್ಪರ್ಧೆಯ ಆಚರಣೆ ವೈಶಿಷ್ಟ್ಯಪೂರ್ಣವಾದುದು. ಕೃಷ್ಣನ ಬದುಕೇ ಸಮಾಜಕ್ಕೊಂದು ಆದರ್ಶ ಎಂದರು.

ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಶ್ರೀ ಯಶವಂತ್ ವಿಟ್ಲ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಕಾರ್ಯದರ್ಶಿ ಶ್ರೀಮತಿ ಆಶಾ ಭಾಸ್ಕರ ಶೆಟ್ಟಿ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು, ಶ್ರೀ ಪದ್ಮನಾಭನ್ ಚೆರುವತ್ತೂರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಿಯರಾದ ಕು| ಯಶಸ್ವಿನಿ ಹಾಗೂ ಕು| ತೇಜಸ್ವಿನಿ ಪ್ರಾರ್ಥನೆಗೈದರು. ಜೈ ಗುರುದೇವ್ ಕಲಾಕೇಂದ್ರದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಒಡಿಯೂರು ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯೋಪಾಧ್ಯಾಯರಾದ ಶ್ರೀ ಜಯಪ್ರಕಾಶ್ ಶೆಟ್ಟಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಹಾಗೂ ಮುದ್ದುಕೃಷ್ಣ ವೇಷ ಸ್ಪರ್ಧೆಯ ವಿಜೇತರ ಪಟ್ಟಿ ವಾಚಿಸಿದರು. ಶ್ರೀ ಸಂತೋಷ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ಶ್ರೀ ಶರತ್ ಆಳ್ವ ಹಾಗೂ ಕು| ಶ್ರದ್ಧಾ ಜೆ. ಶೆಟ್ಟಿ ಒಡಿಯೂರು ಇವರು ಸಹಕರಿಸಿದರು.

ಮುದ್ದುಕೃಷ್ಣ ವೇಷ ಸ್ಪರ್ಧೆಯ ಗುರುಕುಲ (ಎಲ್.ಕೆ.ಜಿ. & ಯು.ಕೆ.ಜಿ.) ವಿಭಾಗದಲ್ಲಿ ಸನತ್ ಕುಮಾರ್ ಕನ್ಯಾನ ಪ್ರಥಮ ಹಾಗೂ ಪ್ರಣಿತ್ ಮತ್ತು ಮನಸ್ವಿ ದ್ವಿತೀಯ ಬಹುಮಾನ ಪಡೆದರು. ಒಂದನೇ ತರಗತಿ ವಿಭಾಗದಲ್ಲಿ ಸೌರವ್ ಎನ್.ಡಿ. ನಂದರಬೆಟ್ಟು ಪ್ರಥಮ ಹಾಗೂ ಶ್ರೀಜನ್ಯಾ ಶಿರಂತಡ್ಕ ದ್ವಿತೀಯ ಬಹುಮಾನ ಪಡೆದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top