+91 8255-266211
info@shreeodiyoor.org

ಮಹಿಳಾವಿಕಾಸ ಕೇಂದ್ರದ ವಾರ್ಷಿಕೋತ್ಸವ

 

ತ್ರಿಮೂರ್ತಿ ಸ್ವರೂಪನೂ, ತ್ರಿಗುಣಾತೀತನಾದ ದತ್ತಾತ್ರೇಯ ಸ್ವಾಮಿಯು ಅತ್ರಿ-ಅನಸೂಯಾ ಮುನಿ ದಂಪತಿಗಳ ಭಕ್ತಿಗೊಲಿದು ತನ್ನನ್ನೇ ತಾನು ದತ್ತು ನೀಡಿಕೊಂಡ ಮಹಾನ್ ಶಕ್ತಿ. ಇವರು ಗ್ಲಾನಿಗೊಳಗಾದ ಧರ್ಮವನ್ನು ಸರಿಪಡಿಸಲು, ಧರ್ಮದ ಅಡಿಪಾಯದಲ್ಲಿ ಬದುಕನ್ನು ರೂಪಿಸುವ ಕಲೆಯನ್ನು ತಿಳಿಸಿ ಅಪಾಯದಿಂದ ಲೋಕವನ್ನು ರಕ್ಷಿಸಲು ಅವತರಿಸುತ್ತಿರುತ್ತಾರೆ. ದೊಂಬುಡು ದೆಂಗೆರೆ ನಿರೆಲ್‌ಗ್ ಬಲೆ ಎನ್ನುವ ಗಾದೆಯಂತೆ ಗುರು ಎನ್ನುವ ಧರ್ಮವೃಕ್ಷದ ನೆರಳಿನಲ್ಲಿ ನಾವೂ ಬದುಕಬೇಕೆನ್ನುವ ಸಂದೇಶವನ್ನು ಜನರಿಗೆ ನೀಡಿದರು. ನಾವು ಕೂಡ ಈ ಧರ್ಮವೃಕ್ಷದಂತೆ ಪರೋಪಕಾರವನ್ನು ಮಾಡಿ ನಮ್ಮ ಬದುಕನ್ನು ಜೀವಂತಗೊಳಿಸಬೇಕೆಂದು ಎಚ್ಚರಿಸಿದರು. ಅದಕ್ಕಾಗಿ ಈ ಆಧುನಿಕ ಬದುಕಿನಲ್ಲಿ ಅಧ್ಯಾತ್ಮವನ್ನು ಅಳವಡಿಸಿಕೊಂಡು ಬಾಹ್ಯ ಸುಖಕ್ಕಿಂತ ಅಂತರಂಗದ ಸುಖಕ್ಕೆ ಪ್ರಾಧಾನ್ಯತೆ ನೀಡಬೇಕು. ಒಳಗಿನ ಕಣ್ಣುಗಳನ್ನು ತೆರೆದು ನಮ್ಮತನವನ್ನು ಅರಿಯುವ ಪ್ರಯತ್ನ ಮಾಡಿದಾಗಲೇ ಆತ್ಮಕ್ಕೆ ಸಂಸ್ಕಾರ ಸಿಗುತ್ತದೆ. ಅಂತೆಯೇ ಆರೊಗ್ಯಪೂರ್ಣ ಬದುಕನ್ನು ಕುಂದಿಸುವ ಸಹಜ, ದೋಷಜ, ಆಗಂತುಕ ಹಾಗೂ ಅಂತರ್ಜನ್ಯ ದುಃಖಗಳ ಬಗ್ಗೆ ವಿವರಿಸಿ ಅದಕ್ಕೆ ಬೇಕಾದ ಪರಿಹಾರ ಮಾರ್ಗವೂ ನಮ್ಮಲ್ಲಿದೆಯೆಂದು ಕಣ್ಣು ತೆರೆಸಿದರು. ಬುದ್ಧಿ ಮತ್ತು ವಿವೇಕವನ್ನು ವಿನಿಯೋಗಿಸಿ ಭಗವಂತ ನೀಡಿದ ಶರೀರದಿಂದ ಸಾಧನೆ ಮಾಡಬೇಕೆ ವಿನಹ ಭಿಕ್ಷೆ ಬೇಡಿ ದಂಡ ಮಾಡಬಾರೆದನ್ನುವ ಎಚ್ಚರಿಕೆಯ ಬೋಧನೆಗಳಿಂದ ಮಾನವ ಜನ್ಮ ಸಾರ್ಥಕತೆಯ ಮಾರ್ಗದರ್ಶನಗಳನ್ನು ನೀಡಿದರು. ಸಮಾಜಮುಖಿಯಾಗಿ ಬೆಳೆಯುವ ಸಂಘಟನೆಯಲ್ಲಿ ಭಗವಂತನಿರುತ್ತಾನೆ. ಸಂಕಲ್ಪಧಾರಣೆಯಿಂದ ಸತ್ಕರ್ಮಾಚರಣೆಯಲ್ಲಿ ತೊಡಗಿಕೊಂಡರೆ ಪರಿಪೂರ್ಣವಾಗುತ್ತದೆ ಎನ್ನುವ ಮೌಲ್ಯಾಧಾರಿತ ವಿಚಾರಧಾರೆಗಳನ್ನು ಜನಮನದಲ್ಲಿ ಪ್ರವಹಿಸುತ್ತಾ ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಸದಸ್ಯೆಯರನ್ನು ಕುರಿತು ತ್ರಿಕರಣಪೂರ್ವಕವಾಗಿ ಶ್ರದ್ಧೆಯಿಂದ ಮಾಡುವ ಸೇವೆಯನ್ನು ಭಗವಂತ ಮೆಚ್ಚುತ್ತಾನೆ. ನಾನು, ನನ್ನದು, ನನ್ನಿಂದ ಎನ್ನುವ ಸಂಕುಚಿತತೆಯಿಂದ ಹೊರಬಂದು ನಾವು, ನಮ್ಮದು, ಎನ್ನುವ ಸಮಷ್ಠಿಯ ಭಾವವನ್ನು ಮೈಗೂಡಿಸಿಕೊಳ್ಳಬೇಕು. ಇತರರಲ್ಲಿ ತಪ್ಪನ್ನು ಕಾಣುವುದನ್ನು ಕಡೆಗಣಿಸಿ, ತನ್ನನ್ನು ತಾನು ಶೋಧಿಸಿಕೊಂಡು ಎಲ್ಲವೂ ನೀನೇ, ನಿನ್ನಿಂದಲೇ ಎನ್ನುವ ಶರಣಾಗತಭಾವದಿಂದ ನಮ್ಮನ್ನು ನಾವು ಪರಿಷ್ಕರಿಸುತ್ತಾ ಸೇವಾ ಕೈಂಕರ್ಯವನ್ನು ಮಾಡಿದಾಗಲೇ ಸಂಘಟನೆ ಸೂಕ್ತವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಮೂಲ್ಯವಾದ ಸಲಹೆಗಳಿಂದ ಸಹೃದಯವಂತರಾಗಿ ಪರಿವರ್ತಿಸುವುದರೊಂದಿಗೆ ಇದುವರೆಗೂ ಸದ್ರಿ ಸಂಸ್ಥೆಯು ಏಕಮುಖದಿಂದ ಬಹುಮುಖದ ಸೇವೆಯನ್ನು ಮಾಡಿಕೊಂಡು ಬಂದಿದೆ ಸ್ಫೂರ್ತಿ ತುಂಬಿ ಶ್ರದ್ಧಾಭಕ್ತಿಯ ಸೇವೆಯನ್ನು ಶ್ಲಾಘಿಸುತ್ತಾ ಕೇಂದ್ರವು ಶ್ರೇಯೋಭಿವೃದ್ಧಿಯನ್ನು ಹೊಂದಲಿ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವಾರ್ಷಿಕೋತ್ಸವ-ಸಾಮೂಹಿಕ ಶ್ರೀ ಸತ್ಯದತ್ತವೃತಪೂಜೆಯ ಸಂದರ್ಭ ಆಶೀರ್ವಚನಗೈದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರ ಗೌರವಾಧ್ಯಕ್ಷತೆಯಲ್ಲಿ ಮುನ್ನಡೆಯುವ ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಒಡಿಯೂರು ಇದರ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಜೈ ಗುರುದೇವ ಕಲಾಕೇಂದ್ರ ಹಾಗೂ ಶ್ರೀ ಸಂಸ್ಥಾನದ ವಿವಿಧ ಮಜಲುಗಳಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಗುರುದೇವ ಬಂಧುಗಳೊಂದಿಗೆ ಶ್ರೀ ಸಂಸ್ಥಾನದ ಅಭಿಮಾನಿ ಬಂಧುಗಳೆಲ್ಲರೂ ತನು-ಮನ-ಧನದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಕೃಪೆಗೆ ಪಾತ್ರರಾದರು.

ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ ಉಪಸ್ಥಿತರಿದ್ದು, ಪದಾಧಿಕಾರಿಗಳು ಸಹಕರಿಸಿದರು. ಶ್ರೀಮತಿ ಗೀತಾ ಭರತ್‌ಭೂಷಣ್ ದಂಪತಿ ಪೂಜ್ಯ ಶ್ರೀಗಳವರ ಪಾದಪೂಜೆ ನೆರವೇರಿಸಿದರು. ಕೇಂದ್ರದ ಸದಸ್ಯೆ ಶ್ರೀಮತಿ ತಾರಾ ಸುಂದರ್ ರೈ ಸ್ವಾಗತಿಸಿ, ಶ್ರೀಮತಿ ನಾಗವೇಣಿ ಟಿ. ಶೆಟ್ಟಿ ವಂದನಾರ್ಪಣೆಗೈದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top