+91 8255-266211
info@shreeodiyoor.org

ಚಾರಿತ್ರ್ಯದ ಆಧಾರತತ್ತ್ವ

ಜನನವೆಂಬುದು ದುಃಖ, ಮರಣವೆಂಬುದು ಸುಖ. ಆದರೆ ಈ ಸತ್ಯಕ್ಕೆ ವಿಪರೀತವಾಗಿ ಜನನವೇ ಸುಖ, ಮರಣವೇ ದುಃಖ ಎಂದು ನಾವು ತಿಳಿದುಕೊಳ್ಳುವುದು ಅಚಾತುರ್ಯ. ಲೌಕಿಕ ಸುಖದ ಭ್ರಾಂತಿ ನಮ್ಮನ್ನು ಶಾಶ್ವತ ಸುಖದ ಚಿಂತನೆಯಿಂದ ವಂಚಿತವನ್ನಾಗಿ ಮಾಡಿದೆ. ಉಣ್ಣುವುದಕ್ಕಾಗಿ ಬದುಕು ಎನ್ನುವುದಕ್ಕಿಂತ ಬದುಕಾಲಾಷ್ಟೇ ಉಣ್ಣಬೇಕು ಎನ್ನುವ ಮನೋಧರ್ಮವೇ ಹೆಚ್ಚು ಒಪ್ಪುತ್ತದೆ.

 

ಹಿರಿಯರು ನಡೆಸಿಕೊಟ್ಟ ಸತ್ಕಾರ್ಯಗಳು ನಮಗೆಲ್ಲ ಮಾರ್ಗದರ್ಶಿಗಳಾಗಿವೆ. ಈ ಜಗತ್ತು ಮಂಗಲ ಮಾಯವಾದುದು. ಆ ಶಿವಸ್ವರೂಪವನ್ನು ಕಂಡುಕೊಳ್ಳುವುದಕ್ಕೆ ಜ್ಞಾನಾಚಕ್ಷುವೇ ಬೇಕು. ಆ ಕಣ್ಣು ತೆರೆಯಿಸುವ ಸ್ಥಾನವೇ ಸದ್ವಿಚಾರ ಗೋಷ್ಟಿ.ಜಗತ್ತು ಧರ್ಮದ ಮೇಲೆ ನಿಂತಿದೆ.

 

ಧರ್ಮೇ ಮಾತಿರ್ಭವತು ವಃ ಸತತೋತ್ಥಿ ತಾನಾಂ

ಸ ಹೇಕ ಏವ ಪರಲೊಕಗತಸ್ಯ ಬಂಧುಃ ||

 

‘ಸದಾ ಎಚ್ಚರದಲ್ಲಿರುವ ನಿಮಗೆ ಧರ್ಮದಲ್ಲಿ ಆಸಕ್ತಿ ಇರಲಿ. ಧರ್ಮವೊಂದೇ ಪರಲೋಕವನ್ನು ಸೇರಿದವನಿಗೆ ಬಂಧು” ಈ ಮಾತು ಮಹಾಭಾರತದ ಆದಿ ಪರ್ವದಲ್ಲಿ ಬರುವ ಆಪ್ತ ವಚನ. ಶ್ರಧ್ಧೆ – ಭಕ್ತಿಯ ಬುನಾದಿಯಲ್ಲಿ ಧರ್ಮದ ನೆಲೆಯಿದೆ. ಅಧಿಕಾರ, ಹಣ, ಧ್ವೇಷ-ರೋಷಗಳಿಂದ ಜಗತ್ತನ್ನು ಗೆಲ್ಲಬಹುದೆಂಬ ತಿಳುವಳಿಕೆ ಅವಿವೇಕದ ಪರಮಾವಧಿ. ಪ್ರೀತಿಯಿಂದ ವಿಶ್ವವನ್ನು ಜಯಿಸುವ ಸಂಕಲ್ಪ ನಮ್ಮದಾದಾಗ ವಿಶ್ವಬಾಂಧವ್ಯ ಸಾಕಾರ ಹೊಂದುವುದು. ನಮ್ಮನ್ನು ದ್ವೇಷಿಸುವವರನ್ನೂ ನಾವು ಪ್ರೀತಿಸಬೇಕು. ಅದು ಗುಣ ವಿಶೇಷ. ಎಲ್ಲ ಜೀವಿಗಳಲ್ಲೂ ದಯೆ ತೋರುವುದು, ದೊರಕಿರುವುದಲ್ಲಿ ತೃಪ್ತಿ ಪಡುವುದು, ಇಂದ್ರಿಯಗಳನ್ನು ನಿಗ್ರಹಿಸುವುದು-ಇವುಗಳಿಂದ ಪರಮಾತ್ಮನು ಪ್ರಸನ್ನನಾಗುತ್ತಾನೆ. ಆದುದರಿಂದ ಈ ಚಾರಿತ್ಯ್ರದ ಆಧಾರ ತತ್ವಗಳನ್ನು ನಮ್ಮದ್ದಾಗಿಸಿಕೊಳ್ಳೋಣ.

 

ಬದುಕಲೋಸುಗ ಉಣ್ಣು, ಉಣಲೆಂದು ಬದುಕದಿರು |

ಹೃದಯ ಮಿಡಿಯುತ್ತಿರಲಿ ಹರಿಯ ದರ್ಶನಕೆ ||

ಪ್ರೀತಿಯಲಿ ದ್ವೇಷವನು ಗೆಲುವ ಸಂಕಲ್ಪ ತೊಡು |

ಭೂತಾತ್ಮ ಕರಕೊಳ್ಳುವವನು ಪರಮ ಪದಕೆ ||

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top