+91 8255-266211
info@shreeodiyoor.org

ಸಾಧು ಸಮಾವೇಶ

“ಹಿಂದೂ ಸಮಾಜ ಮುನ್ನಡೆಯಲು ಮೂಲ ಕಾರಣವೇ ಸಂತರು”
ಸಾಧು ಸಮಾವೇಶ-ಧರ್ಮಸಂದೇಶ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ
ದ.11: “ನಿಷ್ಕಲ್ಮಶ ಭಕ್ತಿಗೆ ಭಗವಂತನೊಲಿಯುತ್ತಾನೆ. ತುಳು ತೇರಿನ ಮೂಲಕ ತುಳುನಾಡಿಗೆ ಒಡಿಯೂರು ಶ್ರೀಗಳ ಕೊಡುಗೆ ಅಪಾರ. ತುಳುನಾಡಿಗೆ ಮೇರು ಕಿರೀಟವಿಡುವ ಕಾರ್ಯವಾಗಿದೆ. ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಪ್ರಸಿದ್ಧಿ ಪಡೆದಿರುವ ಒಡಿಯೂರು ಶ್ರೀಗಳಿಂದ ಇನ್ನಷ್ಟು ಸತ್ಕರ್ಮಗಳಾಗಲಿ. ಸಂತರಿಂದಾಗಿ ಇಂದು ಸಂಸ್ಕೃತಿ 

ಉಳಿದಿದೆ. ಹಿಂದೂ ಸಮಾಜ ಮುನ್ನಡೆಯಲು ಮೂಲ ಕಾರಣವೇ ಎಲ್ಲಾ ಸಂತರು” ಎಂದು ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ‘ಸಾಧು-ಸಮಾವೇಶ’ದಲ್ಲಿ ಮಾತೃಸಂಸ್ಕೃತಿ-ರಾಷ್ಟ್ರಧರ್ಮ ವಿಚಾರದಲ್ಲಿ ಸಂದೇಶ ನೀಡಿದರು.
ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಷಷ್ಠ್ಯಬ್ದ ಸಂಭ್ರಮದ ಸವಿನೆನಪಿನಲ್ಲಿ ಆಯೋಜಿಸಿದ ‘ಸಾಧುಸಮಾವೇಶ’ವನ್ನು ದೀಪೋಜ್ವಲನದೊಂದಿಗೆ ಉದ್ಘಾಟಿಸಿದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು “ಧರ್ಮ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಮತಾಂತರದ ವಿರುದ್ಧ ಸಂತರು ಹಾಗೂ ಸಮಾಜ ಸಂಘಟಿತವಾಗಬೇಕಿದೆ. ತ್ಯಾಗ ಮತ್ತು ಸೇವೆಯಿಂದ ಭಾರತ ಬೆಳಗಿದ್ದು, ತ್ಯಾಗಪೂರ್ಣ ಸೇವೆ ಮಾಡುವ ಮನಸ್ಸು ನಮ್ಮದಾಗಬೇಕು. ಭಗವಂತ ನೀಡಿದ ಶರೀರವನ್ನು ಸತ್ಕರ್ಮಗಳಿಗೆ ಬಳಸಿಕೊಂಡರೆ ಸಾರ್ಥಕತೆ ಸಾಧ್ಯ. ಸಮಾಜದ ತೊಡಕನ್ನು ಸರಿಪಡಿಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕು. ಸಂತನ ಬದುಕು ಲೋಕದ ಹಿತಕ್ಕಾಗಿ. ಭಾವನಾತ್ಮಕ ಸಂಬಂಧ ಇಂದಿಲ್ಲಿ ಬಲವಾಗಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲಿ. ಸಹಕಾರ ತತ್ತ್ವವೊಂದಿದ್ದರೆ ಏನನ್ನೂ ಸಾಧಿಸಬಹುದು” ಎಂದು ಸಂದೇಶ ನೀಡಿದರು.
ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಸಂದೇಶ ನೀಡಿ “ಹೆತ್ತ ತಾಯಿಯೇ ಸಂಸ್ಕೃತಿಯ ಮೂಲವಾಗಿದ್ದು, ಮಾತೃ ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕು. ರಾಷ್ಟ್ರವನ್ನು ಪ್ರೀತಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಾಷ್ಟ್ರವನ್ನು ಪ್ರೀತಿಸಿ ಗೌರವಿಸಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ. ಇಂದಿನ ಕಾಲಘಟ್ಟದಲ್ಲಿ ಸಾಧು ಸಮಾವೇಶದ ಅಗತ್ಯತೆ ಬಹಳಷ್ಟಿದೆ. ಧರ್ಮದ ಪುನರುತ್ಥಾನಕ್ಕೆ ಇದು ಸಕಾಲವಾಗಿದೆ. ನಮ್ಮ ಧರ್ಮದ ಉಳಿವಿಗಾಗಿ ನಮ್ಮನ್ನು ನಾವು ಅರ್ಪಿಸಬೇಕಾಗಿದೆ. ರಾಜಕೀಯ ವ್ಯವಸ್ಥೆಯನ್ನು ನಂಬಿದರೆ ಮಂತಾಂತರ ಪಿಡುಗು ಕೊನೆಯಾಗದು. ನಾವುಗಳು ಒಂದಾಗಿ ನಮ್ಮದೇ ಆದ ರೀತಿಯಲ್ಲಿ ಹೋರಾಟ ಮಾಡಬೇಕಾಗಿದೆ” ಎಂದರು.
ಕದ್ರಿ ಯೋಗೀಶ್ವರ ಮಠದ ಪರಮಪೂಜ್ಯ ಶ್ರೀ ಶ್ರೀ ರಾಜಯೋಗಿ ನಿರ್ಮಲನಾಥ್ ಮಹಾರಾಜ್ ಆಶೀರ್ವಚನ ನೀಡಿ “ಹನುಮಂತನ ಆರಾಧನೆ, ಅರ್ಚನೆ, ಸ್ಮರಣೆ ಮಾಡಿದವರಿಗೆ ಜೀವನದಲ್ಲಿ ಸುಖ ಪ್ರಾಪ್ತವಾಗುತ್ತದೆ. ಮನೆಯಲ್ಲಿ ನೆಮ್ಮದಿ ಇರುತ್ತದೆ” ಎಂದರು.
ಗುರುಪುರ ಶ್ರೀ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ “ಮಾತೃಸಂಸ್ಕೃತಿಯೇ ರಾಜಧರ್ಮ. ರಾಷ್ಟ್ರಧರ್ಮವೆಂದರೆ ಸಂಸ್ಕøತಿಯ ಉಳಿವು. ವಿದೇಶಿ ಸಂಸ್ಕೃತಿಯ ಜೊತೆಗೆ ಬದುಕು ಸಾಗುತ್ತಿದ್ದು, ಮಾತೃಸಂಸ್ಕೃತಿಯ ಜಾಗೃತಿ ಮಾಡುವ ಕಾರ್ಯವಾಗಬೇಕು. ಮಾತೃಸಂಸ್ಕೃತಿಯನ್ನು ತ್ಯಜಿಸಿದರೆ ಜೀವನವಿಲ್ಲ. ಮತಾಂತರ ನಿಷೇಧ ಕಾನೂನು ಶೀಘ್ರ ಜಾರಿಯಾಗಬೇಕು. ಅಭೂತಪೂರ್ವ ಕಾರ್ಯಕ್ರಮಗಳು ಒಡಿಯೂರು ಶ್ರೀಗಳವರಿಂದ ಆಗುತ್ತಿದೆ. ಕೊರೋನ ಮಹಾಮಾರಿ ಜನರಿಗೆ ನಮ್ಮ ಸಂಸ್ಕೃತಿಯನ್ನು ಕಲಿಸಿದೆ” ಎಂದರು.
ಮಾಣಿಲ ಶ್ರೀಧಾಮ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ “ದೇಶದ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಮನದಟ್ಟು ಮಾಡುವ ಕೆಲಸ ಇಂದಿಲ್ಲಿ ಸಾಧು ಸಂತರಿಂದ ಆಗಿದೆ. ದೇಶಕ್ಕಾಗಿ ನಮ್ಮ ತ್ಯಾಗ ಅಗತ್ಯ. ಮಾತೆಯಂದಿರು ತಮ್ಮ ಮಕ್ಕಳನ್ನು ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಕರೆದುಕೊಂಡು ಹೋಗುವ ಮೂಲಕ ಧರ್ಮಪ್ರಜ್ಞೆ ಮೂಡಿಸುವ ಕಾರ್ಯವಾಗಬೇಕು. ಡ್ರಗ್ಸ್ ಮತ್ತು ಮತಾಂತರದ ಜಾಲದಿಂದ ವ್ಯಾಪಕವಾಗಿ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಸಮಾಜದಲ್ಲಿ ಸಂಭವಿಸಬಹುದಾದ ಗಂಡಾಂತರ ತಪ್ಪಿಸಲು ಸಂತರು ಒಂದಾಗಬೇಕು” ಎಂದರು.
ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮಹಾಬಲ ಸ್ವಾಮೀಜಿಯವರು ಆಶೀರ್ವಚನ ನೀಡಿ “ನಮ್ಮ ಮನೆಯಿಂದಲೇ ಧರ್ಮ ರಕ್ಷಣೆಯ ಕಾರ್ಯ ಆರಂಭವಾಗಬೇಕು. ನಮ್ಮ ಸಂಸ್ಕøತಿಯನ್ನು ಅರ್ಥೈಸುವ ಕೆಲಸವಾಗಬೇಕು. ಒಡಿಯೂರು ಸಂಸ್ಥಾನದಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ” ಎಂದರು.
ಶ್ರೀಕ್ಷೇತ್ರ ಕರಿಂಜೆಯ ಪರಮಪೂಜ್ಯ ಶ್ರೀ ಶ್ರೀ ಮುಕ್ತಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿ “ಆನಂದದ ಮೂಲ ಭಗವಂತ. ತುಳುನಾಡಿನ ಆಚಾರ-ವಿಚಾರ ಮರೆಯಾಗುತ್ತಿದ್ದು ಅದನ್ನು ಉಳಿಸಿ-ಬೆಳೆಸುವ ಕಾರ್ಯವಾಗಬೇಕು. ಈ ಒಂದು ಕಾರ್ಯಕ್ರಮ ಮಾತೆಯರಲ್ಲಿ ಮಾತೃ ಸಂಸ್ಕೃತಿ ಉಳಿಸಲು ನಾಂದಿಯಾಗಬೇಕು” ಎಂದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ಜ್ಞಾನವೇ ದೇಶದ ಸಂಪತ್ತು. ರಾಷ್ಟ್ರಧರ್ಮ ಬೆಳೆಯಬೇಕಾದರೆ ಮಾತೃಶಕ್ತಿ ಅಗತ್ಯ. ಭಾರತದ ಸಂಸ್ಕೃತಿಯನ್ನು ಉಳಿಸಲು ತಾಯಂದಿರಿಂದಲೇ ಸಾಧ್ಯ. ಜನಾಂಗದ ಉಳಿವು ಅಳಿವಿನ ವಿಚಾರ ಮಾತೃಶಕ್ತಿಯಲ್ಲಿದೆ. ಸಂಸ್ಕೃತಿಯ ಜೀವಾಳ ಸಂಸ್ಕಾರ. ರಾಷ್ಟ್ರೋತ್ಥಾನ ನಮ್ಮ ಮನೆಯಿಂದಲೇ ಆಗಬೇಕು. ನಾವು ಧರ್ಮಯುಕ್ತವಾಗಿ ಗಳಿಸಿದ ಸಂಪತ್ತು ಧರ್ಮಯುಕ್ತವಾಗಿ ಬಳಸುವ ಮನಸ್ಸು ನಮ್ಮದಾಗಬೇಕು” ಎಂದರು.
“ನಾಶವಿಲ್ಲದ ಸಂಸ್ಕೃತಿ-ಧರ್ಮವೇ ಹಿಂದೂ ಧರ್ಮ. ವಿಶ್ವ ಒಂದು ಮನೆಯಾದರೆ, ಭಾರತ ಆ ಮನೆಯ ದೇವರ ಕೋಣೆ ಇದ್ದಂತೆ. ಮಾತೃಸ್ವರೂಪದಲ್ಲಿ ಭಾರತವನ್ನು ಮಾತ್ರ ಗುರುತಿಸುತ್ತೇವೆ. ಆದ್ದರಿಂದಲೇ ಭಾರತಮಾತೆ ಎಂದು ಸಂಭೋಧಿಸಲ್ಪಡುತ್ತದೆ” ಎಂದು ಶ್ರೀ ಬಾಳೆಕುದ್ರು ಮಠದ ಪರಮಪೂಜ್ಯ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ಸಂದೇಶ ನೀಡಿದರು.
ಬಲ್ಯೊಟ್ಟು ಶ್ರೀ ಗುರುಕೃಪಾ ಓಂಸೇವಾಶ್ರಮದ ಪರಮಪೂಜ್ಯ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ಆಶೀರ್ವಚನಗೈದು “ನಮ್ಮ ಸಂಸ್ಕೃತಿಯ ಉಳಿವಿಗೆ ತಾಯಿಯ ಪಾತ್ರ ಮಹತ್ತರವಾದದ್ದು. ಅದರಂತೆ ಭಜನೆಯು ಪೂರಕ” ಎಂದರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನಗೈದು “ಅಧರ್ಮೀಯ ರಿಂದ ಸಾವಿರ ಸಾವಿರ ಸವಾಲುಗಳನ್ನು ಎದುರಿಸುವಾಗ ತಾಯಂದಿರು-ಪುರುಷರು ಸಹ ಸವಾಲಾಗಿ ಸ್ವೀಕರಿಸಬೇಕು. ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವ ಸಲುವಾಗಿ ಒಡಿಯೂರು ಶ್ರೀಗಳವರ ನೇತೃತ್ವದಲ್ಲಿ ಇದೊಂದು ದೊಡ್ಡ ವೇದಿಕೆಯಾಗಿದೆ” ಎಂದರು. ಬಾಯಾರು ಚಿತ್ರಮೂಲ ಮಠದ ಪರಮಪೂಜ್ಯ ಶ್ರೀ ಶ್ರೀ ಉಮಾಮಹೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ “ಭಗವಂತ ಧರ್ಮದ ಸಾಕಾರಮೂರ್ತಿ. ಧರ್ಮವು ಮಾನವ ಜನಾಂಗದ ಕಲ್ಯಾಣಕ್ಕೆ ತಳಹದಿ. ಮಾತೃಶಕ್ತಿ ಜಾಗೃತವಾದಾಗ ರಾಷ್ಟ್ರಶಕ್ತಿ ಜಾಗೃತವಾಗುತ್ತದೆ” ಎಂದರು. ಚಿಲಿಂಬಿ ಓಂ ಶ್ರೀ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾನಂದ ಸರಸ್ವತಿ ಆಶೀರ್ವಚನಗೈದು “ರಾಷ್ಟ್ರದ ರಕ್ಷಣಗೆ ಸೈನಿಕರಿದ್ದಾರೆ. ನಾವು ರಾಷ್ಟ್ರದ ಸಂಸ್ಕೃತಿಯನ್ನು ರಕ್ಷಿಸುವ ಸೈನಿಕರು ನಾವಾಗಬೇಕು. ಶ್ರೇಷ್ಠವಾದ ಸಂಸ್ಕೃತಿ ನಮ್ಮದು. ಅದುವೇ ಮಾತೃತ್ವ. ಒಡಿಯೂರಿನಲ್ಲಿ ಸಂಸ್ಥಾನವನ್ನು ಸ್ಥಾಪಿಸಿದ ಒಡಿಯೂರು ಶ್ರೀಗಳವರನ್ನು ಅಭಿನಂದಿಸಿ, ಗುರುಸೇವೆಯನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟದ್ದರಿಂದ ನೀವೆಲ್ಲರೂ ಪುಣ್ಯಾತ್ಮರು” ಎಂದರು.
ಮುಳಿಯ ಶ್ರೀ ವೈಷ್ಣವಿ ಆದಿಶಕ್ತಿ ಸೇವಾ ಟ್ರಸ್ಟ್‍ನ ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ “ಒಳ್ಳೆಯ ಆಚಾರ-ವಿಚಾರಗಳು ಬದುಕಿಗೆ ದಾರಿದೀಪ. ಪರೋಪಕಾರವೇ ಪುಣ್ಯ ಎಂಬುದೇ ಎಲ್ಲಾ ಪುರಾಣಗಳ ಸಂದೇಶ” ಎಂದರು. ವಿಟ್ಲ ಯೋಗೀಶ್ವರ ಮಠದ ಪರಮಪೂಜ್ಯ ಶ್ರೀ ಶ್ರೀ ರಾಜಯೋಗಿ ಶ್ರದ್ಧನಾಥ್‍ಜೀ, ಮಾತಾಶ್ರೀ ಶಿವಜ್ಞಾನಮಹಿ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಭಾರತದ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ ಹದಿಮೂರು ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಧು ಸಮಾವೇಶ ನಿರ್ವಹಣಾ ಸಮಿತಿಯ ಅಧ್ಯಕ್ಷ ಶ್ರೀ ಪ್ರದೀಪ್‍ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.
ವೇ|ಮೂ| ಚಂದ್ರಶೇಖರ ಉಪಾಧ್ಯಾಯ ಬಳಗದವರಿಂದ ವೈದಿಕ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ವಂದನಾರ್ಪಣೆಗೈದರು. ಪ್ರಧಾನ ಕಾರ್ಯದರ್ಶಿ ಶ್ರೀ ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top