+91 8255-266211
info@shreeodiyoor.org

“ಪಾರದರ್ಶಕತೆಯ ವ್ಯವಹಾರದಿಂದ ಸಹಕಾರಿಯು ಯಶಸ್ಸನ್ನು ಸಾಧಿಸಬಹುದು”- ಒಡಿಯೂರು ಶ್ರೀ

“ಸಹಕಾರಿಯು ಯಶಸ್ಸು ಸಾಧಿಸಲು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ವ್ಯವಹಾರದಲ್ಲಿ ಒಂದು ಬಾಹ್ಯ ಮತ್ತು ಇನ್ನೊಂದು ಅಂತರಂಗದ ವ್ಯವಹಾರ. ಲೌಕಿಕ ಬದುಕಿನಲ್ಲಿ ಬಾಹ್ಯ ವ್ಯವಹಾರದೊಂದಿಗೆ ಹೃದಯ ಶ್ರೀಮಂತಿಕೆ ಬೆಳೆಸಿಕೊಂಡಾಗ ಒಳಿತನ್ನು ಕಾಣಲು ಸಾಧ್ಯ. ಇದರಲ್ಲಿ ಸಮಾಜಮುಖಿ ಚಿಂತನೆ ಮತ್ತು ಪರಿಶುದ್ಧತೆ ಇರಬೇಕು. ಅಧ್ಯಾತ್ಮದ ಬದುಕಿಗೆ ಒಂದೇ ಉದ್ದೇಶ, ಸಮಾಜೋದ್ಧಾರಕ್ಕೆ ವಿವಿಧೋದ್ದೇಶ ಬೇಕು. ಇವೆಲ್ಲವೂ ನಮ್ಮ ಮನಸ್ಸಿನ ಆಯ್ಕೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಶ್ರೀ ಎಂ. ಉಗ್ಗಪ್ಪ ಶೆಟ್ಟಿ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಪತ್ರ ನೀಡಿ ಹರಸಿದ ಪೂಜ್ಯ ಶ್ರೀಗಳವರು “ಸರಕಾರದ ಯಾವುದೇ ನಿಯಮಗಳನ್ನು ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯ. ಆಗಮನ-ನಿರ್ಗಮನ ಸ್ವಾಭಾವಿಕ” ಎಂದರು.
ಸಾಧ್ವಿ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ಸಂದರ್ಭ ವಜ್ರದಂತೆ ಕಠಿಣವಾಗಿರಬೇಕಾಗುತ್ತದೆ. ಇಂತಹ ಬದ್ಧತೆಯಿಂದ ಸೇವೆ ಸಲ್ಲಿಸಿದ ಶ್ರೀಯುತರಿಗೆ ಪೂಜ್ಯ ಶ್ರೀಗಳವರ ಅಭಯ ಯಾವಾಗಲೂ ಇರುತ್ತದೆ” ಎಂದರು.
ಅಭಿನಂದನೆ ಸ್ವೀಕರಿಸಿದ ಉಗ್ಗಪ್ಪ ಶೆಟ್ಟಿಯವರು ಮಾತನಾಡಿ “ಈ ಅಭಿನಂದನೆಯು ನನ್ನ ಜೀವನದ ಅಮೂಲ್ಯವಾದ ಕ್ಷಣ. ಪೂಜ್ಯ ಶ್ರೀಗಳವರಿಂದ ಆಶೀರ್ವಾದಪೂರ್ವಕ ಅಭಿನಂದನೆ ನಾನು ಈ ಹಿಂದೆ ನಿವೃತ್ತನಾದ ಸಂದರ್ಭಕ್ಕಿಂತಲೂ ಹೆಚ್ಚು ಸಂತೋಷವನ್ನುಂಟುಮಾಡಿದೆ. ಇದೆಂದಿಗೂ ಮರೆಯಲಾಗದ ಮಧುರ ಕ್ಷಣ” ಎಂದರು.
ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್‍ಕುಮಾರ್ ಬಿಜೈ, ಹಿರಿಯ ಪತ್ರಕರ್ತ, ಒಡಿಯೂರ್ದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ, ಹಾಗೂ ಸಹಕಾರಿಯ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
ಸಹಕಾರಿಯ ಅಧ್ಯಕ್ಷ ಶ್ರೀ ಎ. ಸುರೇಶ್ ರೈ ಮತ್ತು ನಿರ್ದೇಶಕ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಅನಿಸಿಕೆ ಹಂಚಿಕೊಂಡರು. ಸಹಕಾರಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದಯಾನಂದ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಉಪಾಧ್ಯಕ್ಷ ಶ್ರೀ ಪಿ. ಲಿಂಗಪ್ಪ ಗೌಡ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪಮಹಾಪ್ರಬಂಧಕ ಶ್ರೀ ತಾರಾನಾಥ ಶೆಟ್ಟಿ ವಂದನಾರ್ಪಣೆಗೈದರು. ತೊಕ್ಕೊಟ್ಟು ಶಾಖಾ ಪ್ರಬಂಧಕ ಶ್ರೀ ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರಿಯ ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡು ಸಹಕರಿಸಿದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top