+91 8255-266211
info@shreeodiyoor.org

21ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ


ಫೆ.21: “ಸಾಹಿತ್ಯ ಶ್ರೇಷ್ಠವಾದುದು. ವೇದ, ಉಪನಿಷತ್ತು, ಪುರಾಣ, ಸಾಹಿತ್ಯ ಅಧ್ಯಯನದಿಂದ ಜ್ಞಾನವೃದ್ಧಿಯಾಗುತ್ತದೆ. ಹಲವು ಭಾಷೆಗಳ ಅಡಕತ್ತರಿಯಲ್ಲಿ ಸಿಲುಕಿದ್ದರಿಂದ ತುಳು ಭಾಷೆ ಕಡೆಗಣಿಸಲ್ಪಟ್ಟಿದೆ. ತುಳು ಭಾಷಿಗರು ಪರಿಶುದ್ಧವಾಗಿ ತುಳುವಲ್ಲಿ ಸಂವಹನ ಮಾಡಬೇಕು. ತುಳು ಭಾಷಾ ಪ್ರೇಮ ಆತ್ಮಜ್ಯೋತಿಯಾಗಿ ಅರಳಬೇಕು. ತುಳು ಭಾಷೆಯ ಏಳ್ಗೆಗಾಗಿ ಸಂಘಟಿತ ಪ್ರಯತ್ನವಾಗಬೇಕು. ತುಳುವರ ಸೇವಾ ಮನೋಭಾವ ಸಮಷ್ಠಿಯಲ್ಲಿ ಕಾಣಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆಯ ಪ್ರಯುಕ್ತ ಜರಗಿದ 21ನೇ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಸಂದೇಶ ನೀಡಿದರು.
ಈ ಸುಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ಭಾಷೆಯು ಸಂಸ್ಕøತಿ ಮತ್ತು ಭಾವನೆಯನ್ನು ಅರಳಿಸುತ್ತದೆ. ತುಳುನಾಡಿನ ಸಂಸ್ಕøತಿ ಶ್ರೇಷ್ಠವಾದದ್ದು. ತಲ್ಲೀನತೆಯಲ್ಲಿ ಮಾಡುವ ಕೆಲಸಕ್ಕೆ ಯಶಸ್ಸು ನಿಶ್ಚಿತ” ಎಂದರು.
ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ, ಸಾಹಿತಿ, ಪತ್ರಕರ್ತ ಶ್ರೀ ಮಲಾರು ಜಯರಾಮ ರೈಯವರು ಮಾತನಾಡಿ “ಸರಸ್ವತಿಯ ವಿವಿಧ ರೂಪಗಳಾಗಿರುವ ಭಾಷೆ ಆತ್ಮದ ಸ್ವರವಾಗಿದೆ. ಸ್ವರ ಶಬ್ದವಾಗಿ, ಭಾಷೆಯಾಗಿ, ಸಾಹಿತ್ಯವಾಗಿ ಹೊರಹೊಮ್ಮುತ್ತದೆ. ಸಾಹಿತ್ಯಕ್ಕೆ ಲಿಪಿ ಮೂಲವಾಗಿದ್ದು, ಭಾಷೆ ಎಂಬುದು ನಮ್ಮ ಅನಘ್ರ್ಯ ಸಂಪತ್ತು. ತುಳು ಭಾಷೆಯು ಪ್ರೇಮ, ಭಾವ, ಪ್ರೀತಿಯನ್ನು ನೀಡುತ್ತದೆ. ತುಳು ಭಾಷೆಯ ಉಳಿವಿಗಾಗಿ ಸಾಕಷ್ಟು ಪ್ರಯತ್ನಗಳಾಗಿವೆ. ಆದರೆ ಅದು ಸಾಲದು. ಇನ್ನಷ್ಟು ಪ್ರಯತ್ನ ಆಗಬೇಕು. ಒಡಿಯೂರು ಶ್ರೀಗಳವರು ಈ ಬಗ್ಗೆ ನಿರಂತರ ಪ್ರಯತ್ನ ನಡೆಸುತ್ತಿರುವುದು ಭಾಷೆಯ ಉಳಿವಿಗೆ ಮಹತ್ವದ್ದಾಗಿದೆ” ಎಂದರು.
ಸಮ್ಮೇಳನದಲ್ಲಿ ಪ್ರೊ. ವಿ.ಬಿ. ಅರ್ತಿಕಜೆಯವರು ತುಳು ಭಾಷೆಗೆ ಅನುವಾದಿಸಿದ, ಪೂಜ್ಯ ಶ್ರೀಗಳವರ ಹಸ್ತಾಕ್ಷರದಲ್ಲಿ ಮೂಡಿಬಂದ ತುಳು ಲಿಪಿಯ ‘ಶ್ರೀ ಹನುಮಾನ್ ಚಾಲೀಸಾ’ ಮಲಾರು ಜಯರಾಮ ರೈಯವರು ಬರೆದ ಕಬೀರೆರೆ ಕಮ್ಮೆನ, ಡಾ. ವಸಂತಕುಮಾರ ಪೆರ್ಲ ಅವರು ಬರೆದ ‘ಮದಿಪುದ ಪಾತೆರೊಲು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಸಮ್ಮೇಳನಾಧ್ಯಕ್ಷ ಶ್ರೀ ಮಲಾರು ಜಯರಾಮ ರೈ ದಂಪತಿಗಳನ್ನು ಸಮ್ಮಾನಿಸಲಾಯಿತು. ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಪುತ್ತೂರು ಸಮಿತಿಯ ಅಧ್ಯಕ್ಷ ಶ್ರೀ ಸೀತಾರಾಮ ರೈ ಸವಣೂರು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀ ಎ. ಸುರೇಶ್ ರೈ ಮಾತನಾಡಿ ಶುಭಹಾರೈಸಿದರು.
ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಸಂಚಾಲಕ ಡಾ. ವಸಂತಕುಮಾರ ಪೆರ್ಲ ಪ್ರಸ್ತಾವನೆಗೈದು ಸ್ವಾಗತಿಸಿದರು. ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಅಧ್ಯಕ್ಷರನ್ನು ಪರಿಚಯಿಸಿದರು. ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ ಪ್ರಾಚಾರ್ಯರಾದ ಶ್ರೀ ಕರುಣಾಕರ ಎನ್.ಬಿ. ವಂದಿಸಿದರು. ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ವೇದಿಕೆಗೆ ಪೂಜ್ಯ ಶ್ರೀಗಳವರನ್ನು ಹಾಗೂ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತಂದು ಸ್ವಾಗತಿಸಲಾಯಿತು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top